ಮತ್ತೆ ಐದು ದಿನ ಪೊಲೀಸರ ಕಸ್ಟಡಿಗೆ ದರ್ಶನ್ ಗ್ಯಾಂಗ್

Darshan
Published on

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟ ದರ್ಶನ್ ಮತ್ತು ಗ್ಯಾಂಗ್ ಅನ್ನು ಜೂನ್ 20ರವರೆಗೂ ಪೊಲೀಸ್ ಕಸ್ಟಡಿಗೆ ಒಪ್ಪಿಸಿ 42ನೇ ಎಸಿಎಂಎಂ ಕೋರ್ಟ್ ಆದೇಶಿಸಿದೆ.

ಪೊಲೀಸ್ ಕಸ್ಟಡಿ ಭಾನುವಾರಕ್ಕೆ ಅಂತ್ಯವಾಗುತ್ತಿತ್ತು. ಭಾನುವಾರ, ಸೋಮವಾರ ಸರ್ಕಾರಿ ರಜೆ ಹಿನ್ನೆಲೆಯಲ್ಲಿ ಎಲ್ಲ ಆರೋಪಿಗಳನ್ನು ವಿಜಯನಗರ ಉಪ ವಿಭಾಗ ಪೊಲೀಸರು, ಶನಿವಾರವೇ ಆರ್ಥಿಕ ಅಪರಾಧಗಳ 42ನೇ ವಿಶೇಷ ಕೋರ್ಟ್ ನ್ಯಾಯಾಧೀಶ ವಿಶ್ವನಾಥ್ ಸಿ ಗೌಡರ್ ಮುಂದೆ ಹಾಜರುಪಡಿಸಿದರು.

ಈ ವೇಳೆ ವಿಶೇಷ ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್, ಪ್ರಕರಣದ ತನಿಖೆಯ ವರದಿಯನ್ನು ಕೋರ್ಟ್‌ಗೆ ಸಲ್ಲಿಸಿ ಹೆಚ್ಚಿನ ವಿಚಾರಣೆ ಸಲುವಾಗಿ ಆರೋಪಿಗಳನ್ನು ಮತ್ತೆ ಕಸ್ಟಡಿಗೆ ನೀಡಬೇಕು ಎಂದು ಕೋರಿದರು. ಪೊಲೀಸರು ಸ್ಥಳ ಮಹಜರು, ಸಾಕ್ಷ್ಯಗಳ ಕುರಿತ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದರು. 10 ಮೊಬೈಲ್ ವಶಕ್ಕೆ ಪಡೆದಿದ್ದು, ಸಿಡಿಆರ್ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಜತೆಗೆ ಮೊಬೈಲ್ ರಿಟ್ರೀವ್ ಮಾಡಬೇಕಿದೆ. 30 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ. ಬೆಂಗಳೂರು, ಚಿತ್ರದುರ್ಗದಲ್ಲಿ ಮಹಜರು ನಡೆದಿದೆ. ಮೈಸೂರಿನಲ್ಲಿ ಮಹಜರು ಬಾಕಿ ಇದೆ. ಹೀಗಾಗಿ 10 ಪೊಲೀಸ್ ಕಸ್ಟಡಿಗೆ ನೀಡಬೇಕು ಎಂದು ಮನವಿ ಮಾಡಿದರು.

ಇದಕ್ಕೆ ದರ್ಶನ್ ಪರ ವಕೀಲರು, ಆಕ್ಷೇಪ ವ್ಯಕ್ತಪಡಿಸಿದರು. ಆರೋಪಿಗಳಿಗೆ ವಿಚಾರಣೆ ವೇಳೆ ಹಿಂಸೆ ಕೊಟ್ಟಿದ್ದಾರೆ. ಪವಿತ್ರಾಗೌಡರನ್ನು 6 ದಿನ ವಿಚಾರಣೆ ನಡೆಸಲಾಗಿದೆ. ಇದರಿಂದ ಮಾನಸಿಕವಾಗಿ ಕುಗ್ಗಿದ್ದಾರೆ. ಎಲ್ಲದಕ್ಕೂ ದರ್ಶನ್ ಅವರೇ ಕಾರಣ ಎಂದರೆ ಹೇಗೆ? ವಿಚಾರಣೆ ಹಂತದಲ್ಲಿದ್ದಾಗಲೇ ದರ್ಶನ್ ಮೇಲೆ ಎಲ್ಲ ಆರೋಪಗಳನ್ನು ಮಾಡುವುದು ಎಷ್ಟು ಸರಿ? ಆರೋಪಿಗಳ ಹೇಳಿಕೆಗಳು ಸೋರಿಕೆಯಾಗುತ್ತಿವೆ. ಹೀಗಾಗಿ ಮತ್ತೆ ಕಸ್ಟಡಿಗೆ ನೀಡುವುದು ಬೇಡ ಎಂದು ಮನವಿ ಮಾಡಿದರು.

ಇದೇ ವೇಳೆ ಎಸ್‌ಪಿಪಿ ಪ್ರಸನ್ನಕುಮಾರ್, ವಾದ ಮುಂದುವರಿಸಿ ರೇಣುಕಸ್ವಾಮಿಗೆ ಎಲೆಕ್ಟ್ರಿಕ್ ಶಾಕ್ ನೀಡಿ ಹಿಂಸೆ ನೀಡಲಾಗಿದೆ. ಶಾಕ್ ನೀಡಲು ಬಳಸಿದ್ದ ಡಿವೈಸ್‌ಗಳನ್ನು ವಶಕ್ಕೆ ಪಡೆಯಬೇಕು. ಇದಕ್ಕೆ ಸಮಯಾವಕಾಶ ಬೇಕು ಎಂದು ಮನವಿ ಮಾಡಿದರು. ವಾದ ಆಲಿಸಿದ ನ್ಯಾಯಾಧೀಶರು, ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net