

Darshan Bail: ಚಿತ್ರದುರ್ಗದ ರೇಣುಕಸ್ವಾಮಿ ಬರ್ಬರ ಹತ್ಯೆ ಪ್ರಕರಣದಲ್ಲಿ ಜಾಮೀನು ಪಡೆದು ಹೊರಬಂದಿರುವ ಎ2 ಆರೋಪಿ ದರ್ಶನ್ ಮತ್ತು ಎ1 ಆರೋಪಿ ಪವಿತ್ರಾ ಗೌಡ ಸೇರಿದಂತೆ ಒಟ್ಟು 7 ಆರೋಪಿಗಳ ಜಾಮೀನನ್ನು ಕಡೆಗೂ ಸುಪ್ರೀಂಕೋರ್ಟ್ ರದ್ದುಗೊಳಿಸಿದೆ. ನ್ಯಾಯಧೀಶರಾದ ಜೆ.ಬಿ. ಪರ್ದಿವಾಲಾ, ಆರ್.ಮಹಾದೇವನ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು, ಈ ಮಹತ್ವದ ತೀರ್ಪನ್ನು ನೀಡಿದೆ.
ಆ.14ಕ್ಕೆ ತೀರ್ಪನ್ನು ಕಾಯ್ದಿರಿಸಿದ್ದ ನ್ಯಾಯಾಲಯ, ಇಂದು ರಾಜ್ಯ ಸರ್ಕಾರ ಪರ ತೀರ್ಪು ನೀಡಿದೆ. ಎ2 ಆರೋಪಿ ದರ್ಶನ್ ಮತ್ತು ಎ1 ಆರೋಪಿ ಪವಿತ್ರಾ ಗೌಡ ಸೇರಿದಂತೆ ಒಟ್ಟು 7 ಆರೋಪಿಗಳ ಜಾಮೀನನ್ನು ರದ್ದುಗೊಳಿಸಿದೆ. ಇಂದು ಸಂಜೆಯೊಳಗೆ ಆರೋಪಿಗಳನ್ನು ಕಸ್ಟಡಿಗೆ ತೆಗೆದುಕೊಳ್ಳಲು ಕೋರ್ಟ್ ಸೂಚಿಸಿದೆ. ಬಂಧನಕ್ಕೂ ಮುನ್ನ ದರ್ಶನ್ ತಾನೇ ಬಂದು ಶರಣಾಗಲು ಅವಕಾಶವಿದೆ. 7 ಆರೋಪಿಗಳ ಬಂಧನ ಇಂದೇ ಆಗಲಿದೆ ಎಂದು ವರದಿಗಳು ತಿಳಿಸಿವೆ.
ದರ್ಶನ್ ಪ್ರಕರಣದಲ್ಲಿ ತೀರ್ಪು ನೀಡುವ ಮೊದಲು ಹೈಕೋರ್ಟ್ ಮಂಜೂರು ಮಾಡಿದ್ದ ಜಾಮೀನಿನ ವಿರುದ್ಧ ಕಿಡಿಕಾರಿದ ಸುಪ್ರೀಂಕೋರ್ಟ್, ಈ ಕೇಸ್ನ ವಿಚಾರಣೆಯಲ್ಲಿ ಹೈಕೋರ್ಟ್ನ ಲೋಪದೋಷವಿದೆ. ತರಾತುರಿಯಲ್ಲೇ ಬೇಲ್ ಕೊಟ್ಟಿದೆ. ಆರೋಪಿಗೆ ಬಳ್ಳಾರಿ ಜೈಲಿನಲ್ಲಿ ಫೈವ್ ಸ್ಟಾರ್ ಟ್ರೀಟ್ಮೆಂಟ್ ನೀಡಲಾಗಿದೆ. ಆ ಜೈಲಧಿಕಾರಿಗಳನ್ನು ಕರ್ತವ್ಯದಿಂದ ಸಸ್ಪೆಂಡ್ ಮಾಡಬೇಕಿತ್ತು ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿತು.
ಬಳ್ಳಾರಿ ಜೈಲಿನಲ್ಲಿದ್ದ ದರ್ಶನ್ ಸಿಗರೇಟ್ ಸೇದಲು ಅವಕಾಶ ಕೊಟ್ಟಿದ್ದಲ್ಲದೇ, ಆತನಿಗೆ ರಾಜಾತಿಥ್ಯ ನೀಡಿದ್ದು ದೊಡ್ಡ ತಪ್ಪು. ಇದಲ್ಲದೇ, ಜೈಲಿನ ಲಾನ್ನಲ್ಲಿ ಆತ ಸಿಗರೇಟು ಸೇದುತಿರುವ ಫೋಟೋ, ವಿಡಿಯೋಗಳು ಹೊರಬಂದಿವೆ. ಜೈಲಿನೊಳಗೆ ಫೈವ್ ಸ್ಟಾರ್ ಟ್ರೀಟ್ಮೆಂಟ್ ಕೊಡಲಾಗಿದೆ. ಈ ಬಾರಿ ಇಂತಹ ತಪ್ಪುಗಳು ಮರುಕುಳಿಸುವಂತಿಲ್ಲ. ಹಾಗೇನಾದರೂ ಆದರೆ, ಜೈಲಧಿಕಾರಿಗಳನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಸಸ್ಪೆಂಡ್ ಮಾಡಬೇಕು ಎಂದು ಪೊಲೀಸ್ ಇಲಾಖೆಗೆ ಸುಪ್ರೀಂಕೋರ್ಟ್ ಎಚ್ಚರಿಸಿದೆ.
ಸುಪ್ರೀಂಕೋರ್ಟ್ನಲ್ಲಿ ತೀರ್ಪು ಬಂದ ಬೆನ್ನಲ್ಲೇ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಮಾಡಿರುವ ನಟಿ ರಮ್ಯಾ, ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಮತ್ತು ಇತರರಿಗೆ ಜಾಮೀನು ರದ್ದುಗೊಳಿಸಿದ ಕೋರ್ಟ್ ತೀರ್ಪು ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ಬಲವಾದ ಸಂದೇಶವನ್ನು ರವಾನಿಸುತ್ತದೆ. ನಮ್ಮಲ್ಲಿ ಉಳಿದವರಿಗೆ ನಾನು ಹೇಳಲು ಬಯಸುವುದೇನೆಂದರೆ, ಸರಿಯಾದ ಪ್ರಕ್ರಿಯೆಯನ್ನು ಅನುಸರಿಸಿ, ನ್ಯಾಯ ವ್ಯವಸ್ಥೆಯಲ್ಲಿ ನಂಬಿಕೆ ಇರಿಸಿ. ಇದು ದೀರ್ಘ ಮತ್ತು ಕಠಿಣವಾಗಿರಬಹುದು. ಆದರೆ, ಸುರಂಗದ ಕೊನೆಯಲ್ಲಿ ಬೆಳಕು ಇದ್ದೇ ಇರುತ್ತದೆ. ಯಾವುದೇ ಕಾರಣಕ್ಕೂ ಕಾನೂನನ್ನು ನಿಮ್ಮ ಕೈಗೆ ತೆಗೆದುಕೊಳ್ಳಬೇಡಿ, ನ್ಯಾಯವನ್ನು ಒದಗಿಸಲಾಗುತ್ತದೆ. ಮುಖ್ಯವಾಗಿ, ನಿಮ್ಮ ಪ್ರಜ್ಞೆಗೆ ನಿಷ್ಠರಾಗಿರಿ ಎಂದು ಬರೆದುಕೊಂಡಿದ್ದಾರೆ.
ರೇಣುಕಸ್ವಾಮಿ ಭೀಕರ ಕೊಲೆ ಪ್ರಕರಣದಲ್ಲಿ ಎ2 ಆರೋಪಿ ಆಗಿದ್ದ ದರ್ಶನ್ಗೆ ಜಾಮೀನು ಭವಿಷ್ಯ ಏನಾಗಲಿದೆ ಎಂಬ ಕುತೂಹಲ ರಾಜ್ಯದ ಜನರಲ್ಲಿ ಮೂಡಿತ್ತು. ಈ ಪ್ರಕರಣದಲ್ಲಿ ಕೇವಲ ಆರೋಪಿಗಳ ಜಾಮೀನನ್ನು ರದ್ದುಗೊಳಿಸದ ಸುಪ್ರೀಂ ಕೋರ್ಟ್, ಕೇಸ್ನ ಆರಂಭದಿಂದ ಇಂದಿನವರೆಗೆ ಏನೆಲ್ಲ ಬೆಳವಣಿಗೆಗಳು ಆಗಿದೆ ಎಂಬುದನ್ನು ಬಹಳ ಸೂಕ್ಷ್ಮವಾಗಿ ಗಮನಿಸಿದೆ. ಜೂನ್ 11ರಂದು ದರ್ಶನ್ ಬಂಧನದಿಂದ ಜಾಮೀನು ಪಡೆದು ಹೊರಬಂದವರೆಗೂ ಸಂಪೂರ್ಣ ಮಾಹಿತಿಗಳನ್ನು ಪಡೆದ ನ್ಯಾಯಾಲಯ, ಜೈಲಧಿಕಾರಿಗಳು, ಹೈಕೋರ್ಟ್ ತಪ್ಪುಗಳನ್ನು ಎತ್ತಿಹಿಡಿದಿದೆ. ಇಂತಹ ತಪ್ಪುಗಳು ಮತ್ತೆ ಮರುಕಳಿಸುವಂತಿಲ್ಲ ಎಂದು ಖಡಕ್ ಸೂಚನೆ ನೀಡಿದೆ. ಕೋರ್ಟ್ ತೀರ್ಪು ಹೊರಬಿದ್ದ ಬೆನ್ನಲ್ಲೇ ನಟಿ ರಮ್ಯಾ ಸೇರಿದಂತೆ ಹಲವರು ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.