ನಟಿ ಶಿಲ್ಪಾ ಶೆಟ್ಟಿ, ರಾಜ್​ ಕುಂದ್ರಾ ವಿರುದ್ಧ ದಾಖಲಾಯ್ತು ವಂಚನೆ ಕೇಸ್! ಉದ್ಯಮಿಗೆ 60 ಕೋಟಿ ರೂ. ಧೋಖಾ ಆರೋಪ | Cheating Case

ವಿಜಯವಾಣಿ (87)
Published on

Cheating Case: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ಉದ್ಯಮಿ ರಾಜ್ ಕುಂದ್ರಾ ವಿರುದ್ಧ ಮುಂಬೈ ಪೊಲೀಸ್ ಠಾಣೆಯಲ್ಲಿ ಸಾಲ ಮತ್ತು ಹೂಡಿಕೆ ಒಪ್ಪಂದಕ್ಕೆ ಸಂಬಂಧಿಸಿದಂತೆ ವಂಚನೆ ಮಾಡಿರುವ ಆರೋಪದಡಿ ಪ್ರಕರಣ ದಾಖಲಾಗಿದೆ.

ಮುಂಬೈ ಮೂಲದ ಉದ್ಯಮಿಯೊಬ್ಬರಿಗೆ 60 ಕೋಟಿ ರೂ. ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ಉದ್ಯಮಿ ದೀಪಕ್ ಕೊಠಾರಿ ಎಂಬುವವರು 2015ರಿಂದ 2023ರ ಸುಮಾರಿಗೆ ವ್ಯವಹಾರ ವಿಸ್ತರಣೆಗೆಂದು ಸ್ಟಾರ್​ ದಂಪತಿಗಳಿಗೆ 60.48 ಕೋಟಿ ರೂ. ಹಣ ಕೊಟ್ಟಿದ್ದು, ಆ ಹಣವನ್ನು ಅವರು ತಮ್ಮ ವೈಯಕ್ತಿಕ ವೆಚ್ಚಗಳಿಗೆ ಖರ್ಚು ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ದೂರುದಾರ ಕೊಠಾರಿ 2015ರಲ್ಲಿ ರಾಜೇಶ್ ಆರ್ಯ ಎಂಬ ಏಜೆಂಟ್ ಮೂಲಕ ಶಿಲ್ಪಾ ಮತ್ತು ಕುಂದ್ರಾ ಅವರೊಂದಿಗೆ ಸಂಪರ್ಕಕ್ಕೆ ಬಂದಿರುವುದಾಗಿ ಹೇಳಿಕೊಂಡಿದ್ದಾರೆ. ಆ ಸಮಯದಲ್ಲಿ, ದಂಪತಿಗಳು ಆನ್‌ಲೈನ್ ಶಾಪಿಂಗ್ ವೇದಿಕೆಯಾದ ಬೆಸ್ಟ್ ಡೀಲ್ ಟಿವಿಯ ನಿರ್ದೇಶಕರಾಗಿದ್ದರು. ಶಿಲ್ಪಾ ಶೆಟ್ಟಿ ಆಗ ಕಂಪನಿಯಲ್ಲಿ ಶೇ.87ಕ್ಕಿಂತ ಹೆಚ್ಚು ಷೇರುಗಳನ್ನು ಹೊಂದಿದ್ದರು ಎಂದು ಹೇಳಲಾಗಿದೆ.

ಕಂಪನಿಗೆ ಆರ್ಯ, ವಾರ್ಷಿಕ ಶೇ.12ರಷ್ಟು ಬಡ್ಡಿಯಲ್ಲಿ 75 ಕೋಟಿ ರೂ. ಸಾಲವನ್ನು ಕೋರಿದ್ದರು. ಆದರೆ, ಹೆಚ್ಚಿನ ತೆರಿಗೆಗಳನ್ನು ತಪ್ಪಿಸಲು, ಆ ಮೊತ್ತವನ್ನು ಹೂಡಿಕೆ ಎಂದು ಪರಿಗಣಿಸುವಂತೆ ಸೂಚಿಸಿದ್ದರು. ಸಭೆ ನಡೆಸಿ, ಸಮಯಕ್ಕೆ ಸರಿಯಾಗಿ ಹಣವನ್ನು ಹಿಂದಿರುಗಿಸಲಾಗುವುದು ಎಂಬ ಭರವಸೆಯೊಂದಿಗೆ ಒಪ್ಪಂದವನ್ನು ಇತ್ಯರ್ಥ ಮಾಡಲಾಗಿತ್ತು. ಏಪ್ರಿಲ್ 2015ರಲ್ಲಿ ಸುಮಾರು 31.95 ಕೋಟಿ ರೂ. ಮೊದಲ ಕಂತನ್ನು ವರ್ಗಾಯಿಸಿದೆ. ಆದರೆ, ತೆರಿಗೆ ಸಮಸ್ಯೆ ಮುಂದುವರೆದು ಸೆಪ್ಟೆಂಬರ್‌ನಲ್ಲಿ ಎರಡನೇ ಒಪ್ಪಂದಕ್ಕೆ ಸಹಿ ಹಾಕಿದೆವು. ಇನ್ನು ಜುಲೈ 2015 ಮತ್ತು ಮಾರ್ಚ್ 2016ರ ನಡುವೆ ಅವರು 28.54 ಕೋಟಿ ರೂ. ಹಣವನ್ನು ವರ್ಗಾಯಿಸಿದೆ ಎಂದು ಉದ್ಯಮಿ ಹೇಳಿದ್ದಾರೆ.

"ಒಟ್ಟಾರೆಯಾಗಿ, ಒಪ್ಪಂದಕ್ಕಾಗಿ 60.48 ಕೋಟಿ ರೂ. ಹೆಚ್ಚುವರಿ ಹಣವನ್ನು ಮತ್ತು 3.19 ಲಕ್ಷ ರೂಪಾಯಿಗಳನ್ನು ಸ್ಟಾಂಪ್ ಡ್ಯೂಟಿಯಾಗಿ ಪಾವತಿಸಿದ್ದೇನೆ. ಶಿಲ್ಪಾ ಶೆಟ್ಟಿ ಏಪ್ರಿಲ್ 2016ರಲ್ಲಿ ತಮಗೆ ವೈಯಕ್ತಿಕ ಗ್ಯಾರಂಟಿ ಸಹ ನೀಡಿದ್ದರು. ಆದರೆ, ತಿಂಗಳುಗಳ ಬಳಿಕ ನಟಿ ಸೆಪ್ಟೆಂಬರ್‌ನಲ್ಲಿ ಕಂಪನಿಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಹಣ ಹಿಂತಿರುಗಿಸುವಂತೆ ಮನವಿ ಮಾಡಿದ್ದರೂ ಅದನ್ನು ದಂಪತಿ ತಮ್ಮ ಕಿವಿಗೆ ಹಾಕಿಕೊಳ್ಳಲಿಲ್ಲ" ಎಂದಿದ್ದಾರೆ.

ಆರಂಭದಲ್ಲಿ ಜುಹು ಪೊಲೀಸ್ ಠಾಣೆಯಲ್ಲಿ ನಕಲಿ ಮತ್ತು ವಂಚನೆಗಾಗಿ ಪ್ರಕರಣ ದಾಖಲಾಗಿತ್ತು. ಆದರೆ, ನಂತರದಲ್ಲಿ ಮೊತ್ತವು 10 ಕೋಟಿ ರೂ. ಮೀರಿದ್ದರಿಂದ ಆರ್ಥಿಕ ಅಪರಾಧಗಳ ವಿಭಾಗಕ್ಕೆ (ಇಒಡಬ್ಲ್ಯೂ) ಹಸ್ತಾಂತರಿಸಲಾಯಿತು. ಈಗ ಇಒಡಬ್ಲ್ಯೂ ಪ್ರಕರಣದ ತನಿಖೆಯನ್ನು ಕೈಗೊಂಡಿದೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net