

PM Modi: ಭಾರತದ ಮೇಲೆ ಈ ಮೊದಲು ಶೇ.25ರಷ್ಟು ಸುಂಕ ವಿಧಿಸಿದ್ದಲ್ಲದೇ ಹೆಚ್ಚುವರಿ ಶೇ.50ರಷ್ಟು ಸುಂಕ ಹಾಕಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾ ಮೇಲಿನ ಕೋಪವನ್ನು ನಮ್ಮ ದೇಶದ ಮೇಲೆ ತೋರಿಸಿರುವುದು ಸ್ಪಷ್ಟ. ಇದೇ ಆಗಸ್ಟ್ 15ರಂದು ಯುಎಸ್ನ ಅಲಾಸ್ಕಾದಲ್ಲಿ ಟ್ರಂಪ್ ಮತ್ತು ರಷ್ಯಾ ಅದ್ಯಕ್ಷ ವ್ಲಾಡಿಮಿರ್ ಪುಟಿನ್ ಮುಖಾಮುಖಿ ಭೇಟಿಯಾಗಲಿದ್ದಾರೆ. ಈ ವಿಷಯ ಹಲವರ ಕುತೂಹಲಕ್ಕೆ ಕಾರಣವಾಗಿದೆ. ಇದೇ ಸಮಯದಲ್ಲಿ, ಮುಂದಿನ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಾಗೆ ಭೇಟಿ ಕೊಡಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.
ಅಮೆರಿಕಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಸುಂಕಗಳ ಕುರಿತು ಟ್ರಂಪ್ ಅವರೊಂದಿಗೆ ಮೋದಿ ಮುಖಾಮುಖಿ ಸಭೆ ನಡೆಸಲಿದ್ದಾರೆಯೇ? ಈ ಸುಂಕ ಸಮರಕ್ಕೆ ಶೀಘ್ರದಲ್ಲೇ ಅಂತ್ಯ ಹಾಡಲಿದ್ದಾರೆಯೇ? ಎಂಬ ನಿರೀಕ್ಷೆ ಇದೀಗ ಹೆಚ್ಚಾಗಿದೆ. ಸೆಪ್ಟೆಂಬರ್ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನಗಳಲ್ಲಿ ಭಾಗವಹಿಸಲಿರುವ ಪ್ರಧಾನಿ ಮೋದಿ, ಅಲ್ಲಿ ಟ್ರಂಪ್ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳು ತಿಳಿಸಿವೆ.
ಈ ಮುಖಾಮುಖಿ ಸಭೆಯು ಸುಂಕದ ಸಮಸ್ಯೆಯನ್ನು ಕೊನೆಗೊಳಿಸುತ್ತದೆ ಎಂಬ ಸೂಚನೆಗಳಿವೆ. ತೀವ್ರ ವ್ಯಾಪಾರ ಉದ್ವಿಗ್ನತೆಯ ನಡುವೆ, ಪ್ರಧಾನಿ ಮೋದಿ ಮುಂದಿನ ತಿಂಗಳು ಅಮೆರಿಕಕ್ಕೆ ಭೇಟಿ ನೀಡಲಿದ್ದು, ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನಗಳಲ್ಲಿ ಭಾಗವಹಿಸಲಿದ್ದಾರೆ. ಈ ವೇಳೆ ಅವರು ಟ್ರಂಪ್ರನ್ನು ಭೇಟಿಯಾಗಲಿದ್ದಾರೆ ಎಂದು ಹೇಳಲಾಗಿದೆ. ಇಬ್ಬರೂ ಇಲ್ಲಿ ಸುಂಕಗಳು ಮತ್ತು ವ್ಯಾಪಾರ ಸಂಬಂಧಗಳ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ.
ಶುಕ್ರವಾರ, ರಷ್ಯಾದ ಅಧ್ಯಕ್ಷ ಪುಟಿನ್ ಅಲಾಸ್ಕಾದಲ್ಲಿ ಟ್ರಂಪ್ ಅವರನ್ನು ಭೇಟಿ ಮಾಡಲಿದ್ದಾರೆ. ಅದೇ ರೀತಿ, ಪ್ರಧಾನಿ ಮೋದಿ ಈ ತಿಂಗಳ ಕೊನೆಯಲ್ಲಿ ಶಾಂಘೈ ಸಹಕಾರ ಸಂಸ್ಥೆಯ ಶೃಂಗಸಭೆಗಾಗಿ ಚೀನಾಕ್ಕೆ ತೆರಳಲಿದ್ದಾರೆ. ಇಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರನ್ನು ಮೋದಿ ಭೇಟಿಯಾಗಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ಸಾಗಿದರೆ, ಈ ಮಧ್ಯೆ ಪುಟಿನ್ ಸಹ ಭಾರತಕ್ಕೆ ಆಗಮಿಸಬಹುದು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಈಗಾಗಲೇ ಮಾಸ್ಕೋಗೆ ಭೇಟಿ ನೀಡಿ, ಒಂದಷ್ಟು ವಿಚಾರಗಳನ್ನು ಚರ್ಚಿಸಿದ್ದಾರೆ,(ಏಜೆನ್ಸೀಸ್).