50 ವರ್ಷಗಳ ಸುದೀರ್ಘ ಸಿನಿಪಯಣ; 'ತಲೈವಾ' ಸಂಭ್ರಮಿಸಲು 'ಕೂಲಿ' ರೆಡಿ! ರಜಿನಿ​ಗೆ ನಿರ್ದೇಶಕರ ಭಾವುಕ ಪತ್ರ | Rajinikanth Coolie

ವಿಜಯವಾಣಿ (83)
Published on

Rajinikanth Coolie: ಭಾರತೀಯ ಚಲನಚಿತ್ರೋದ್ಯಮದಲ್ಲಿ ಇಂದಿಗೆ 50 ವರ್ಷಗಳನ್ನು ಪೂರೈಸಿರುವ ತಮಿಳು ನಟ ರಜಿನಿಕಾಂತ್​​, ಇದೇ ಆ.14ರಂದು ತೆರೆ ಕಾಣಲಿರುವ ತಮ್ಮ ಬಹುನಿರೀಕ್ಷಿತ ಕೂಲಿ ಚಿತ್ರಕ್ಕೆ ಎದುರುನೋಡುತ್ತಿದ್ದಾರೆ. ತಮ್ಮ ನೆಚ್ಚಿನ ನಟನ ಸುದೀರ್ಘ ಸಿನಿಪಯಣವನ್ನು ಸಂಭ್ರಮಿಸುತ್ತಿರುವ ತಲೈವಾ ಅಭಿಮಾನಿಗಳು, ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದಾರೆ.

50 ವರ್ಷಗಳ 'ತಲೈವಾ' ಪಯಣ

ರಜಿನಿಕಾಂತ್​ರ 50 ವರ್ಷಗಳ ಸುದೀರ್ಘ ಸಿನಿಪಯಣಕ್ಕೆ ಅಭಿನಂದನೆ ಜತೆಗೆ ಭಾವುಕ ಪತ್ರ ಬರೆದಿರುವ 'ಕೂಲಿ' ನಿರ್ದೇಶಕ ಲೋಕೇಶ್ ಕನಕರಾಜ್​, "ನನ್ನ ಈ ಪಯಣದಲ್ಲಿ ಕೂಲಿ ಸದಾ ವಿಶೇಷ ಚಿತ್ರವಾಗಿ ಉಳಿಯಲಿದೆ. ಸಿನಿಮಾ ತಯಾರಾದ ರೀತಿ, ಅದಕ್ಕೆ ಎಲ್ಲರೂ ತೋರಿದ ಪ್ರೀತಿಗೆ ನೀವೇ ಕಾರಣ ಸರ್​. ನಿಮಗೆ ತುಂಬು ಹೃದಯದ ಧನ್ಯವಾದಗಳು ರಜಿನಿಕಾಂತ್ ಸರ್" ಎಂದಿದ್ದಾರೆ.

"ಈ ಅವಕಾಶಕ್ಕಾಗಿ ಹಾಗೂ ಚಿತ್ರೀಕರಣದ ವೇಳೆ ನಾವು ಹಂಚಿಕೊಂಡ ಹಲವು ಸಂಭಾಷಣೆಗಳಿಗಾಗಿ ನಾನು ಎಂದೆಂದಿಗೂ ಕೃತಜ್ಞ. ಇವೆಲ್ಲವೂ ಸದಾ ಪಾಲಿಸುವ ಮತ್ತು ಎಂದಿಗೂ ಮರೆಯದ ಕ್ಷಣಗಳು. ನಮ್ಮೆಲ್ಲರಿಗೂ ಸ್ಫೂರ್ತಿ ನೀಡಿದ್ದಕ್ಕಾಗಿ ನನ್ನ ಅಂತರಾಳದಿಂದ ನಿಮಗೆ ಹೃತ್ಪೂರ್ವಕ ಧನ್ಯವಾದಗಳು. 'ವಿ ಲವ್​ ಯೂ'" ಎಂದು ಬರೆದುಕೊಂಡಿದ್ದಾರೆ. ನಾಳೆ (ಆ.14) ಚಿತ್ರವು ಜಾಗತಿಕವಾಗಿ ರಿಲೀಸ್ ಆಗಲಿದ್ದು, ಬೆಳಗ್ಗಿನಿಂದಲೇ 'ತಲೈವಾ' ಹವಾ ಜೋರಾಗಲಿದೆ.

‘ಕೂಲಿ’ ತಾರಾ ಬಳಗ

ಲೋಕೇಶ್ ನಿರ್ದೇಶನದ ಈ ಚಿತ್ರದಲ್ಲಿ ರಜಿನಿಕಾಂತ್, ನಾಗಾರ್ಜುನ, ಕನ್ನಡದ ನಟ ಉಪೇಂದ್ರ, ಬಾಲಿವುಡ್​ ಹೀರೋ ಆಮಿರ್ ಖಾನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಶ್ರುತಿ ಹಾಸನ್, ಪೂಜಾ ಹೆಗ್ಡೆ (ವಿಶೇಷ ಹಾಡು) ಸೌಬಿನ್ ಶಾಹಿರ್, ರೇಬಾ ಮೋನಿಕಾ ಜಾನ್, ಸತ್ಯರಾಜ್, ರಚಿತಾ ರಾಮ್ ಸೇರಿದಂತೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ಇದೇ ಆಗಸ್ಟ್ 14ರಂದು ಜಾಗತಿಕವಾಗಿ ಬಿಡುಗಡೆಯಾಗಲಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net