

Gold Price: ಈಗಾಗಲೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1 ಲಕ್ಷ ರೂ. ಗಡಿದಾಟಿ ಹೋಗಿದ್ದು, ಕಳೆದ ಐದು ದಿನಗಳಿಂದ ಇಳಿಕೆಯತ್ತ ಮುಖ ಮಾಡಿದೆ. ಒಂದು ವಾರದ ಹಿಂದೆ ಭಾರೀ ಏರಿಕೆಯತ್ತ ಸಾಗಿದ್ದ ಗೋಲ್ಡ್ ದರ ಇದೀಗ ದಿನ ಕಳೆದಂತೆ ಕುಸಿಯುತ್ತಿರುವುದು ಸದ್ಯ ಖರೀದಿದಾರರನ್ನು ಮತ್ತೇ ಚಿನ್ನದತ್ತ ಕೈಬೀಸಿ ಕರೆಯುತ್ತಿದೆ. ಇತ್ತೀಚಿನ ವರದಿಯೊಂದು, ಮುಂದಿನ ಐದು ವರ್ಷಗಳಲ್ಲಿ 10 ಗ್ರಾಂ ಚಿನ್ನದ ಬೆಲೆ ಬರೋಬ್ಬರಿ 2.5 ಲಕ್ಷ ರೂ. ಆಗಲಿದೆ ಎಂದು ಉಲ್ಲೇಖಿಸಿದೆ.
ಒಂದು ಕಾಲದಲ್ಲಿ 10 ಗ್ರಾಂ ಚಿನ್ನದ ಬೆಲೆ ಸುಮಾರು 30,000 ರೂ. ಇತ್ತು. ಅದೇ ಈಗ ವರ್ಷಗಳು ಉರುಳಿದಂತೆ 2025ರ ಹೊತ್ತಿಗೆ 1 ಲಕ್ಷ ರೂ. ಗಡಿದಾಟಿ ಹೋಗಿದೆ. ಕಳೆದ ಆರು ವರ್ಷಗಳಲ್ಲಿ, ಗೋಲ್ಡ್ ಬೆಲೆಗಳು ಶೇ.200ರಷ್ಟು ಏರಿಕೆ ಕಂಡಿರುವುದು ದಾಖಲೆ. ಪ್ರಸ್ತುತ, ಚಿನ್ನದ ದರ 1 ಲಕ್ಷದಲ್ಲೇ ವಹಿವಾಟ ನಡೆಸುತ್ತಿದ್ದು, ಮದುವೆ, ಹಬ್ಬ ಹರಿದಿನ ಮತ್ತು ಶುಭ ಸಮಾರಂಭಗಳ ಸೀಸನ್ನಲ್ಲಿ ಬಿಜಿಯಾಗಿರುವ ಗ್ರಾಹಕರು, ಚಿನ್ನ ಕೊಳ್ಳುವುದು ಹೇಗೆ? ಎಂಬ ಚಿಂತೆಯಲ್ಲಿ ತೊಡಗಿದ್ದಾರೆ.
ಕೋವಿಡ್ ಮೊದಲ ಅಲೆಗೂ ಮುನ್ನ ಚಿನ್ನದ ಬೆಲೆಗಳು 50,000 ರೂ.ನಲ್ಲಿ ವಹಿವಾಟು ನಡೆಸುತ್ತಿತ್ತು. ಅದಾದ ಬಳಿಕ ದಿಢೀರ್ ಏರಿಕೆ ಕಂಡಿತು. ಈ ಏರಿಕೆಗೆ ಜಾಗತಿಕ ಉದ್ವಿಗ್ನತೆಯೇ ಕಾರಣ ಎಂದು ತಜ್ಞರು ಹೇಳುತ್ತಾರೆ. ರಷ್ಯಾ ಮತ್ತು ಯುಕ್ರೇನ್ ನಡುವಿನ ನಿರಂತರ ಯುದ್ಧ, ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷಗಳು ಈ ಹೆಚ್ಚಳಕ್ಕೆ ಕಾರಣವಾಗಿದೆ. ಹೆಚ್ಚುವರಿಯಾಗಿ, ಕೊರೊನಾ ಸಾಂಕ್ರಾಮಿಕ ರೋಗದ ಆರ್ಥಿಕ ಪರಿಣಾಮ ಮತ್ತು ಜಾಗತಿಕ ಅನಿಶ್ಚಿತತೆಗಳು ಚಿನ್ನದ ಬೆಲೆಯನ್ನು ಲೆಕ್ಕಾಚಾರಕ್ಕಿಂತ ದುಪ್ಪಟ್ಟಾಗಿಸಿದೆ.
ಚಿನ್ನವನ್ನು ಬಹಳ ಹಿಂದಿನಿಂದಲೂ ಸುರಕ್ಷಿತ ಹೂಡಿಕೆ ಎಂದೇ ಪರಿಗಣಿಸಲಾಗಿದೆ. ಏಪ್ರಿಲ್ 2025ರಲ್ಲಿ, 10 ಗ್ರಾಂ 24 ಕ್ಯಾರೆಟ್ ಚಿನ್ನವು 1,01,078 ರೂ. ತಲುಪಿತು. ಇದೇ ವೇಗದಲ್ಲಿ ಸಾಗಿದರೆ, ಮುಂದಿನ ಐದು ವರ್ಷಗಳಲ್ಲಿ 10 ಗ್ರಾಂ ಗೋಲ್ಡ್ ಬೆಲೆ ಬರೋಬ್ಬರಿ 2.5 ಲಕ್ಷ ರೂ. ತಲುಪಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. 2019 ಮತ್ತು 2025ರ ನಡುವೆ, ಚಿನ್ನದ ಬೆಲೆಗಳು ವಾರ್ಷಿಕ ಸರಾಸರಿ ಶೇ.18ರಷ್ಟು ಏರಿಕೆಯಾಗಿದೆ.
ಆದಾಗ್ಯೂ, ಮತ್ತೊಂದು ವರದಿಯ ಪ್ರಕಾರ, ಚಿನ್ನದ ಮಾರುಕಟ್ಟೆ ಬಲವರ್ಧನೆಯ ಹಂತವನ್ನು ಪ್ರವೇಶಿಸುತ್ತಿದೆ. ಯಾವುದೇ ಪ್ರಮುಖ ಬೆಳವಣಿಗೆ ಅಥವಾ ಅಂತರರಾಷ್ಟ್ರೀಯ ಉದ್ವಿಗ್ನತೆ ಇಲ್ಲದಿದ್ದರೆ, ಬೆಲೆಗಳು ಸ್ಥಿರವಾಗಿರಲಿದೆ. ಚೀನಾ ತನ್ನ ವಿಮಾ ಕ್ಷೇತ್ರದ ಒಟ್ಟು ಆಸ್ತಿಗಳಲ್ಲಿ (AUM) ಶೇ.1ರಷ್ಟು ಚಿನ್ನದಲ್ಲಿ ಹೂಡಿಕೆ ಮಾಡಿದೆ. ಕೇಂದ್ರ ಬ್ಯಾಂಕುಗಳು ಚಿನ್ನದ ಖರೀದಿಯನ್ನು ಕಡಿಮೆ ಮಾಡುತ್ತಿವೆ,(ಏಜೆನ್ಸೀಸ್).