

ಈ ವರ್ಷದ ಸೂಪರ್ ಹಿಟ್ ಚಿತ್ರಗಳ ಪೈಕಿ ಮದರಂಗಿ ಕೃಷ್ಣ ಅಭಿನಯದ - ನಿರ್ದೇಶನದ ಲವ್ ಮಾಕ್ಟೇಲ್ ಚಿತ್ರ ಸಹ ಒಂದು. ಈ ಚಿತ್ರ ಬಿಡುಗಡೆಯಾಗಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿತ್ತು. ಆದರೆ, ಲಾಕ್ಡೌನ್ನಿಂದಾಗಿ ಹೆಚ್ಚು ದಿನ ಪ್ರದರ್ಶನ ಕಾಣುವುದಕ್ಕೆ ಸಾಧ್ಯವಾಗಿರಲಿಲ್ಲ. ಆ ನಂತರ ಅಮೆಜಾನ್ ಪ್ರೈಮ್ನಲ್ಲಿ ಚಿತ್ರ ಬಿಡುಗಡೆಯಾಗಿ, ಇನ್ನೂ ಹೆಚ್ಚು ಜನಪ್ರಿಯತೆ ಪಡೆಯಿತು. ಈ ಸಿನಿಮಾದಲ್ಲಿ ನಾಯಕ ನಾಯಕಿಯಾಗಿ ಕಾಣಿಸಿಕೊಂಡಿದ್ದ ಕೃಷ್ಣ ಮತ್ತು ಮಿಲನಾ ನಿಜಜೀವನದಲ್ಲೂ ಒಂದಾಗುವುದಾಗಿ ಹೇಳಿಕೊಂಡಿದ್ದರು. ಇದೀಗ ಮದುವೆ ಬಗ್ಗೆ ಮಾತನಾಡಿದ್ದಾರೆ ಕೃಷ್ಣ.
ಸ್ವಾತಂತ್ರ್ಯ ದಿನದ ಪ್ರಯುಕ್ತ ಲವ್ ಮಾಕ್ಟೇಲ್ 2 ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿಕೊಂಡಿರುವ ಡಾರ್ಲಿಂಗ್ ಕೃಷ್ಣ, ಇನ್ನೇನು ಶೀಘ್ರದಲ್ಲಿ ಶೂಟಿಂಗ್ ಶುರು ಮಾಡುವುದಾಗಿಯೂ ಹೇಳಿಕೊಂಡಿದ್ದಾರೆ. ಮಾಕ್ಟೇಲ್ 2 ಶೂಟಿಂಗ್ ಮುಗಿಯುತ್ತಿದ್ದಂತೆ ಮದುವೆ ಮಾಡಿಕೊಳ್ಳುವ ಪ್ಲಾನ್ ಕೃಷ್ಣ ಮತ್ತು ಮಿಲನಾ ಅವರದ್ದಾಗಿದೆ. ಎಲ್ಲ ಅಂದುಕೊಂಡಂತೆ ಆದರೆ, ಡಿಸೆಂಬರ್ನಲ್ಲಿ ಮದುವೆ ಮಾಡಿಕೊಳ್ಳುವ ಯೋಜನೆ ಇದೆಯಾದರೂ, ಕರೊನಾ ಪ್ಯಾಂಡಮಿಕ್ ಹಿನ್ನೆಲೆಯಲ್ಲಿ ಮುಂದಿನ ವರ್ಷವೇ ವಿವಾಹ ನೆರವೇರಿಸಿಕೊಳ್ಳಲಿದ್ದಾರೆ.
‘ಪ್ಲಾನ್ ಪ್ರಕಾರ ಆಗಿದ್ದರೆ ಇಷ್ಟೊತ್ತಿಗಾಗಲೇ ಮದುವೆಯೇ ಆಗಿರಬೇಕಿತ್ತು. ಆದರೆ, ಕರೊನಾ ಹಿನ್ನೆಲೆಯಲ್ಲಿ ಮುಂದೂಡಲಾಯಿತು. ಸದ್ಯಕ್ಕೆ ಲವ್ ಮಾಕ್ಟೇಲ್ ಸೀಕ್ವೆಲ್ ಶುರುವಾಗಿರುವುದರಿಂದ ಆ ಸಿನಿಮಾ ಮುಗಿದ ಬಳಿಕ ಮದುವೆ ಬಗ್ಗೆ ವಿಚಾರ ಮಾಡಲಿದ್ದೇವೆ. ಇಬ್ಬರ ಕುಟುಂಬ ದೊಡ್ಡದೇ ಇರುವುದರಿಂದ ಅದ್ಧೂರಿಯಾಗಿಯೇ ಮದುವೆ ಮಾಡಿಕೊಳ್ಳಬೇಕು. ಅದಕ್ಕೆ ಸಮಯವೈ ಬೇಕು’ ಎಂದಿದ್ದಾರೆ.
ಸದ್ಯ ಸೀಕ್ವೆಲ್ನ ಬಹುತೇಕ ಪ್ರಿ ಪ್ರೊಡಕ್ಷನ್ ಕೆಲಸಗಳು ಮುಗಿದಿದ್ದು, ಈಗಾಗಲೇ ಒಂದಷ್ಟು ಸಣ್ಣ ಪುಟ್ಟ ಭಾಗದ ದೃಶ್ಯಾವಳಿಗಳನ್ನು ಚಿತ್ರೀಕರಿಸಿಕೊಂಡಿದ್ದಾರಂತೆ. ಲವ್ ಮಾಕ್ಟೇಲ್ ಎಲ್ಲಿಗೆ ನಿಂತಿತ್ತೋ, ಅದನ್ನು ಅಲ್ಲಿಂದಲೇ ಮುಂದುವರೆಸುವ ಇಂಗಿತ ವ್ಯಕ್ತಪಡಿಸಿದ್ದ ಕೃಷ್ಣ, ಕಥೆ-ಚಿತ್ರಕಥೆ ಬರೆದು ಮುಗಿಸಿದ್ದಾರೆ. ಕರೊನಾ ಹಾವಳಿ ಕಡಿಮೆ ಆಗುತ್ತಿದ್ದಂತೆ ಶೂಟಿಂಗ್ಗೆ ತೆರಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಪಾತ್ರವರ್ಗದಲ್ಲಿ ಹೊಸದಾಗಿ ಯಾರೆಲ್ಲ ಸೇರ್ಪಡೆಗೊಳ್ಳಲಿದ್ದಾರೆ? ಎಂಬ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಬಹಿರಂಗ ಪಡಿಸಲಿದೆ ತಂಡ.