

ಬೆಂಗಳೂರು: ರಾಜ್ಯ ಬಿಜೆಪಿಯ ಭಿನ್ನಮತೀಯರ ಹಾರಾಟ, ಅವರಿಂದ ಪಕ್ಷಕ್ಕಾಗುತ್ತಿರುವ ಹಾನಿ, ಮುಜುಗರ, ಕಾರ್ಯಕರ್ತರು ಎದುರಿಸುತ್ತಿರುವ ಅತಂತ್ರ ಪರಿಸ್ಥಿತಿಗೆ ಪೂರ್ಣ ವಿರಾಮ ಹಾಕುವ ನಿಟ್ಟಿನಲ್ಲಿ ದೆಹಲಿ ವರಿಷ್ಠರು ಮಹತ್ವದ ನಿರ್ಧಾರಕ್ಕೆ ಮುಂದಾಗಿದ್ದಾರೆ. ಖುದ್ದು ಸೂಚಿಸಿದರೂ, ಸಂದೇಶ ಕಳಿಸಿದರೂ ತಿದ್ದಿಕೊಳ್ಳದ ಹಿನ್ನೆಲೆಯಲ್ಲಿ ಅಂತಿಮವಾಗಿ ದಂಡಾಸ್ತ್ರ ಪ್ರಯೋಗಕ್ಕೆ ಹೈಕಮಾಂಡ್ ಚಿಂತನೆ ನಡೆಸಿದೆ. ಉನ್ನತ ಮೂಲಗಳ ಪ್ರಕಾರ ತಲೆದಂಡದ ತೀರ್ವನವೊಂದು ಶೀಘ್ರವೇ ಹೊರಬೀಳಲಿದೆ. ದೆಹಲಿ ವಿಧಾನಸಭೆ ಚುನಾವಣಾ ಫಲಿತಾಂಶ ಮತದಾನೋತ್ತರ ಸಮೀಕ್ಷೆಯಲ್ಲಿ ಬಿಂಬಿತಗೊಂಡಂತೆಯೇ ಹೊರಬಿದ್ದಲ್ಲಿ ದೆಹಲಿ ನಾಯಕರು ರಾಜ್ಯದತ್ತ ಬಹು ಬೇಗನೆ ಗಮನಹರಿಸಲಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಚುನಾವಣೆಗೆ ಪ್ರಕ್ರಿಯೆ ಶುರುವಾಗುವ ಮುನ್ನವೇ ಗೊಂದಲ, ಅಂತಃಕಲಹಕ್ಕೆ ತೆರೆಎಳೆಯಲು ಬಯಸಿದ್ದಾರೆಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. ಇನ್ನು ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧದ ಅಪಸ್ವರ, ಗೊಂದಲ, ಆಂತರಿಕ ಸಂಘರ್ಷದ ಆವೇಶವನ್ನು ದೆಹಲಿ ಅಂಗಳಕ್ಕೆ ತಲುಪಿಸಲು ಯತ್ನಿಸಿದ ಭಿನ್ನರ ಬಣದ ನಾಯಕರಿಗೆ ಹಿನ್ನಡೆಯಾಗಿದೆ. ವರಿಷ್ಠರು ಭೇಟಿಗೆ ಅನುಮತಿಯನ್ನೇ ನೀಡದೆ ಭಿನ್ನರನ್ನು ರಾಜ್ಯಕ್ಕೆ ವಾಪಸ್ ಸಾಗಹಾಕಿದ್ದಾರೆ.
ಶಾಶ್ವತ ಪರಿಹಾರದ ಲೆಕ್ಕಾಚಾರ: ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ಬಹಿರಂಗ ಹೇಳಿಕೆ ನೀಡುತ್ತಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೂ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಪಕ್ಷದ ರಾಜ್ಯ ಉಸ್ತುವಾರಿ ಡಾ.ರಾಧಾ ಮೋಹನ್ದಾಸ್ ಅರ್ಗವಾಲ್ ಅವರನ್ನು ಟೀಕಿಸುವ ಜತೆಗೆ ಹಿಂದಿನ ಉಸ್ತುವಾರಿ ಅರುಣ್ ಸಿಂಗ್ ಮೇಲೂ ಗಂಭೀರ ಆರೋಪ ಹೊರಿಸಿದ್ದಾರೆ. ವರಿಷ್ಠರ ಸೂಚನೆಯಂತೆ ನಡೆದುಕೊಳ್ಳುವೆ ಎನ್ನುತ್ತಲೇ ಗೊಂದಲ ಮುಂದುವರಿಸಿ, ಸಂಘಟನಾ ಪರ್ವದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳದೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಬೇಕೆಂಬ ಬೇಡಿಕೆ ಮಂಡಿಸಿರುವುದು ಮುಖ್ಯವಾಗಿ ಅಮಿತ್ ಷಾ ಅವರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ. ಭಿನ್ನಮತೀಯರ ಜತೆಗೆ ಗುರುತಿಸಿಕೊಂಡವರ ಪೈಕಿ ಒಬ್ಬರು ಸದ್ಯ ಅಂತರ ಕಾಯ್ದುಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ದೆಹಲಿಗೆ ತೆರಳಿ ಜೆ.ಪಿ.ನಡ್ಡಾ ಅವರಿಂದ ‘ಕಿವಿ ಹಿಂಡಿಸಿಕೊಂಡು’ ಬಂದಿರುವುದೇ ಅವರ ಈ ನಡೆಗೆ ಕಾರಣ ಎಂದು ತಿಳಿದು ಬಂದಿದೆ.
ಲಿಂಗಾಯತ ಪ್ಲೇಕಾರ್ಡ್: ವರಿಷ್ಠರ ಭೇಟಿ ಅವಕಾಶದಿಂದ ವಂಚಿತರಾದವರು ಲಿಂಗಾಯತ ಪ್ಲೇಕಾರ್ಡ್ ಪ್ರಯೋಗಿಸಲು ಮುಂದಾಗಿದ್ದಾರೆಂದು ಹೇಳಲಾಗುತ್ತಿದೆ. ಫೆ.9 ಅಥವಾ 10ಕ್ಕೆ ದೆಹಲಿಗೆ ತೆರಳಲು ಯೋಚಿಸಿರುವ ಭಿನ್ನರ ಪಡೆ ಅದಕ್ಕೂ ಮೊದಲು ಲಿಂಗಾಯತ ದಾಳ ಉರುಳಿಸಬಹುದೆಂಬ ಚರ್ಚೆ ನಡೆದಿದೆ.
ಅನಿವಾರ್ಯ ಸೃಷ್ಟಿ: ಅತೃಪ್ತರ ಅಪಸ್ವರಕ್ಕೆ ಮನ್ನಣೆ ನೀಡಿದರೂ ಕಷ್ಟ, ಬಿಟ್ಟರೂ ನಷ್ಟವೆಂಬ ಸ್ಥಿತಿ ಏರ್ಪಟ್ಟಿದೆ. ಪಕ್ಷದಲ್ಲಿ ಒಗ್ಗಟ್ಟು ಮೂಡಿಸಲು ನಿರ್ದಾಕ್ಷಿಣ್ಯ ಕ್ರಮದ ಅನಿವಾರ್ಯ ಸೃಷ್ಟಿಯಾಗಿರುವುದನ್ನು ವರಿಷ್ಠರು ಕಂಡುಕೊಂಡಿದ್ದಾರೆ. ‘ಸಂಘ’, ಹಿರಿಯರ ಮೂಲಕ ರಾಜಿ ಸಂಧಾನದ ಪ್ರಯತ್ನಗಳೆಲ್ಲ ಮುಗಿದು ಹೋಗಿವೆ. ಲಕ್ಷಾಂತರ ಕಾರ್ಯಕರ್ತರ ಹಿತ, ಪಕ್ಷದ ಭವಿಷ್ಯಕ್ಕಾಗಿ ನಿಷ್ಠುರ ನಿಲುವು ತಳೆಯಬೇಕಾಗಿದೆ. ಭಿನ್ನರ ತಾಳಕ್ಕೆ ಕುಣಿಯುತ್ತಾ ಹೋದರೆ ಕೊನೆ ಎಂಬುದೇ ಇರದು. ಹಾಲಿ ರಾಜ್ಯಾಧ್ಯಕ್ಷರಿಗೆ ಆದದ್ದು ಮುಂದಿನ ಅಧ್ಯಕ್ಷರಿಗೂ ಆಗಲಿದೆ. ಒಂದು ಗುಂಪಿಗೆ ಒತ್ತಾಸೆ ನೀಡಿದರೆ ಗುಂಪುಗಾರಿಕೆ ಪ್ರಚೋದಿಸಿ ಸಮಸ್ಯೆ ಮತ್ತಷ್ಟು ಉಲ್ಬಣವಾಗಲಿದೆ ಎನ್ನುವುದನ್ನು ಅರಿತಿದ್ದಾರೆ. ನೂತನ ಅಧ್ಯಕ್ಷರು ತಮ್ಮ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುವ, ಕಾಂಗ್ರೆಸ್ ಸರ್ಕಾರದ ವೈಫಲ್ಯ, ಭ್ರಷ್ಟಾಚಾರದ ಪ್ರಬಲ ಹೋರಾಟಕ್ಕೆ ಒತ್ತಾಸೆ ನೀಡುವುದು ವರಿಷ್ಠರ ಇರಾದೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಏನು ಕ್ರಮ ಆಗಬಹುದು?: ಪಕ್ಷದೊಳಗಿನ ಗೊಂದಲ, ಪ್ರತಿಷ್ಠೆಯ ಮೇಲಾಟಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಲೆಕ್ಕಾಚಾರದ ಭಾಗವಾಗಿ ಭಿನ್ನರ ಪೈಕಿ ಒಬ್ಬರ ಉಚ್ಚಾಟನೆ ಜತೆಗೆ ಶಾಸಕರಾದ ಎಸ್.ಟಿ.ಸೋಮಶೇಖರ್, ಶಿವರಾಂ ಹೆಬ್ಬಾರ್ ವಿರುದ್ಧ ನಿರ್ಣಾಯಕ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಸೂತ್ರದೊಂದಿಗೆ ರಾಜಿಯಿಲ್ಲ: ಸಂಪರ್ಕ, ಸಂವಹನ ಸೂತ್ರದ ಅನ್ವಯ ಸಂಘಟನಾ ಪರ್ವಕ್ಕೆ ಚಾಲನೆ ನೀಡಲಾಗಿದೆ. ನಿಯಮಗಳು ಮತ್ತು ಸೋಷಿಯಲ್ ಇಂಜಿನಿಯರಿಂಗ್ ಮಧ್ಯೆ ಸಮನ್ವಯ ಕಾಪಾಡಿಕೊಳ್ಳಲಾಗಿದೆ. ದೇಶದ ಎಲ್ಲ ರಾಜ್ಯಗಳಲ್ಲಿ ಬೂತ್ನಿಂದ ಜಿಲ್ಲಾ ಅಧ್ಯಕ್ಷರವರೆಗೆ ಚುನಾವಣೆ ನಿರ್ವಹಿಸಿ ಅವಿರೋಧ ಆಯ್ಕೆಯಾಗುವಂತೆ ನೋಡಿಕೊಳ್ಳಲಾಗಿದೆ. ಕರ್ನಾಟಕದ ಬೂತ್ ಸಮಿತಿ, ಮಂಡಲ ಹಾಗೂ ಜಿಲ್ಲಾ ಅಧ್ಯಕ್ಷರ ಆಯ್ಕೆಗೆ ಇದೇ ಸೂತ್ರ ಅನ್ವಯಿಸಲಾಗಿದೆ. ರಾಜ್ಯಾಧ್ಯಕ್ಷರ ಚುನಾವಣೆಯಲ್ಲೂ ಕರ್ನಾಟಕಕ್ಕೆ ಪ್ರತ್ಯೇಕ ನಿಯಮ ಅಸಾಧ್ಯ. ಇದು ಭಿನ್ನಮತೀಯರಿಗೂ ಗೊತ್ತಿದೆ. ಹೀಗಾಗಿ ರಾಜ್ಯ ಸಮಿತಿಯಲ್ಲಿ ಸೂಕ್ತ ಪ್ರಾತಿನಿಧ್ಯಕ್ಕೆ ಇಂಥ ಒತ್ತಡತಂತ್ರ ಅನುಸರಿಸಿದ್ದಾರೆ ಎಂದು ಮುಖಂಡರು, ಕಾರ್ಯಕರ್ತರಿಗೆ ಅನಿಸಿದೆ. ಸಂಪರ್ಕ, ಸಂವಹನ ಸೂತ್ರದೊಂದಿಗೆ ವರಿಷ್ಠರು ರಾಜಿ ಮಾಡಿಕೊಳ್ಳುವುದಿಲ್ಲ. ಬಿ.ವೈ. ವಿಜಯೇಂದ್ರ ಮತ್ತೆ ಆಯ್ಕೆ ಸಂಭವನೀಯತೆ ಅತೃಪ್ತರಿಗೆ ವೇದ್ಯವಾದಂತಿದೆ. ಈ ಕಾರಣಕ್ಕೆ ದೆಹಲಿಗೆ ತೆರಳಿ ಸ್ಥಿತಿ ಗಂಭೀರವೆಂದು ಬಿಂಬಿಸಲು ಹವಣಿಸಿದ್ದರು ಎಂದು ಹಿರಿಯ ನಾಯಕರೊಬ್ಬರು ವಿಶ್ಲೇಷಿಸಿದರು.
ದಂಡಾಸ್ತ್ರದ ಲೆಕ್ಕಾಚಾರ?
ಬಿಎಸ್ವೈಗೆ ಅವಮಾನ, ವಿಜಯೇಂದ್ರ ಆಕ್ರೋಶ: ಮಾಜಿ ಸಿಎಂ ಯಡಿಯೂರಪ್ಪ ಅವರ ಘನತೆಗೆ ಕುಂದು ತರುವ ರೀತಿಯಲ್ಲಿ ಕೆಲವರು ಪದೇಪದೇ ಬಹಿರಂಗ ಹೇಳಿಕೆ ನೀಡುತ್ತಿದ್ದರೂ ಬಿಎಸ್ವೈ ಅವರಿಂದ ಅಧಿಕಾರ, ಅನುಕೂಲ ಅನುಭವಿಸಿರುವ ಅನೇಕ ಹಿರಿಯರು ಮೌನ ವಹಿಸಿರುವ ನಡೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಸಾತ್ವಿಕ ಸಿಟ್ಟು ಹೊರಹಾಕಿದ್ದಾರೆ. ಈ ಕುರಿತು ವಿಜಯೇಂದ್ರ ಹೇಳಿದ್ದಿಷ್ಟು
ವರಿಷ್ಠರ ಚಿಂತನೆ ಜಾಡು