

ಮಂಗಳೂರು: ಅಡಕೆ ಹಾನಿಕಾರಕ ಎಂಬ ಜಾರ್ಖಂಡ್ ಸಂಸದ ನಿಶಿಕಾಂತ ದುಬೆ ಅವರ ಹೇಳಿಕೆ ಜನರನ್ನು ತಪ್ಪು ದಾರಿಗೆಳೆಯುವ ಪ್ರಯತ್ನ. ಅವರ ಈ ವೈಜ್ಞಾನಿಕ ಪುರಾವೆ ಇಲ್ಲದ ಹೇಳಿಕೆ ಅಡಕೆ ಬೆಳೆಗಾರರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಎ.ಕಿಶೋರ್ ಕುಮಾರ್ ಕೊಡ್ಗಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಚ್.ಎಂ.ಕೃಷ್ಣ ಕುಮಾರ್ ತಿಳಿಸಿದ್ದಾರೆ.
ಅಡಕೆ ಎಲ್ಲ ಧಾರ್ವಿುಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಗಳಲ್ಲಿ ಮಹತ್ವದ ಸ್ಥಾನ ಪಡೆದಿದೆ. ಭಾರತ ವಿಶ್ವದಲ್ಲೇ ಅತಿ ಹೆಚ್ಚು ಅಡಕೆ ಬೆಳೆಯುವ ದೇಶ. ಕ್ಯಾಂಪ್ಕೊ ಅಡಕೆ ಬೆಳೆಗಾರರ ಹಿತ ಕಾಪಾಡುವ ಖಚಿತ ನಿಲುವು ಹೊಂದಿದೆ. ಅಡಕೆಯ ಆರೋಗ್ಯ ಪ್ರಯೋಜನಗಳ ಕುರಿತು ಸಂಪೂರ್ಣ ವೈಜ್ಞಾನಿಕ ಸಂಶೋಧನೆಗೆ ಸಂಬಂಧಪಟ್ಟ ಇಲಾಖೆಗೆ ಪ್ರಧಾನ ಮಂತ್ರಿ ಸೂಚನೆ ನೀಡಬೇಕು ಎಂದು ಕ್ಯಾಂಪ್ಕೊ ಸಂಸ್ಥೆ ವಿನಂತಿಸಿದೆ.
ಅಡಕೆ ಕ್ಯಾನ್ಸರ್ಕಾರಕ ಅಲ್ಲ ಎಂಬುದು ಸಾಬೀತಾಗಿದೆ. ದೇಶೀಯ ಮತ್ತು ಅಂತಾರಾಷ್ಟ್ರೀಯ ಸಮರ್ಥ ಸಂಶೋಧನಾ ಸಂಸ್ಥೆಗಳು ನಡೆಸಿದ ಸಂಶೋಧನೆಗಳು ಸಕಾರಾತ್ಮಕ ಫಲಿತಾಂಶಗಳನ್ನು ಸಾಬೀತುಪಡಿಸಿವೆ. 1974ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಅಡಕೆ ಕ್ಯಾನ್ಸರನ್ನು ಗುಣಪಡಿಸುತ್ತದೆ ಎಂದು ವರದಿ ನೀಡಿದ್ದರು. ಚೀನಾದಲ್ಲಿ ಅಡಕೆ ಬಳಸಿ 30ಕ್ಕೂ ಹೆಚ್ಚು ಔಷಧಗಳನ್ನು ತಯಾರಿಸಲಾಗಿದೆ. ಆಹಾರ ಕಲಬೆರಕೆ ತಡೆ ಕಾಯ್ದೆಯಲ್ಲಿ ಅಡಕೆ ಆಹಾರ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಅಡಕೆ ಮನುಷ್ಯರಿಗೆ ಮತ್ತು ಜಾನುವಾರುಗಳಿಗೆ ಬೇಕಾದ ಔಷಧೀಯ ಗುಣಗಳನ್ನು ಹೊಂದಿರುವ ಪದಾರ್ಥ ಎಂದು ಕ್ಯಾಂಪ್ಕೊ ಅಧ್ಯಕ್ಷ ಎ.ಕಿಶೋರ್ ಕುಮಾರ್ ಕೊಡ್ಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಡಕೆ ಕಾರ್ಯಪಡೆಯಿಂದ ಜಾರ್ಖಂಡ್ ಲೋಕಸಭಾ ಸದಸ್ಯ ನಿಶಿಕಾಂತ್ ದುಬೆ ಅವರಿಗೆ ಪತ್ರ ಬರೆಯಲಿದ್ದು, ಅವರು ಪ್ರಧಾನಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿರುವಂತೆ ಅಡಕೆಯಲ್ಲಿ ಹಾನಿಕಾರಕ ಅಂಶಗಳಿರುವ ಬಗ್ಗೆ ವೈಜ್ಞಾನಿಕ ವರದಿ ನೀಡುವಂತೆ ಸವಾಲು ಹಾಕುತ್ತೇನೆ.
| ಆರಗ ಜ್ಞಾನೇಂದ್ರ ಅಡಕೆ ಕಾರ್ಯಪಡೆ ಅಧ್ಯಕ್ಷ
ಶಿವಮೊಗ್ಗದಲ್ಲಿ ರಾಜ್ಯ ಅಡಕೆ ಮಾರಾಟ ಸಹಕಾರ ಮಹಾಮಂಡಳದ ಸರ್ವ ಸದಸ್ಯರ ಸಭೆ ಅ.11ರಂದು ನಡೆಯಲಿದ್ದು, ಅಡಕೆ ನಿಷೇಧ ಕುರಿತು ಜಾರ್ಖಂಡ್ನ ಲೋಕಸಭಾ ಸದಸ್ಯ ನಿಶಿಕಾಂತ್ ದುಬೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದಿರುವ ಪತ್ರದ ಬಗ್ಗೆ ಈ ಸಭೆಯಲ್ಲಿ ರ್ಚಚಿಸಲಾಗá-ವುದು.
| ಎಚ್.ಎಸ್.ಮಂಜಪ್ಪ ರಾಜ್ಯ ಅಡಕೆ ಮಾರಾಟ ಸಹಕಾರ ಮಹಾಮಂಡಳದ ಮಾಜಿ ಅಧ್ಯಕ್ಷ
ಅಡಕೆ ಕರಾವಳಿ ಕರ್ನಾಟಕ ಸೇರಿ ಹಲವು ಪ್ರದೇಶದ ಪ್ರಮುಖ ವಾಣಿಜ್ಯ ಬೆಳೆ. ಅಡಕೆ ಕ್ಯಾನ್ಸರ್ಕಾರಕ ಎಂಬ ಓರ್ವ ಜನಪ್ರತಿನಿಧಿಯ ಆಧಾರರಹಿತ ಹೇಳಿಕೆ ಹಾಗೂ ಮನವಿಗೆ ಸರ್ಕಾರ ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ. ಅಡಕೆ ಕ್ಯಾನ್ಸರ್ಕಾರಕ ಎಂಬುದಕ್ಕೆ ಆಧಾರ ಇಲ್ಲ. ಒಂದು ವೇಳೆ ಸರ್ಕಾರ ಅಡಕೆ ನಿಷೇಧ ಜಾರಿ ಮಾಡಿದರೆ ಇದರಿಂದ ದೇಶದ ಆರ್ಥಿಕತೆಗೆ ಹೊಡೆತ ಖಚಿತ. ಅಡಕೆ, ಅಡಕೆ ಬೆಳೆಗಳ ಬಗ್ಗೆ ಸಮಗ್ರ ಸಂಶೋಧನೆಗೆ ಸರ್ಕಾರ ಮುಂದಾಗಬೇಕು. ಕೃಷಿ ಹಾಗೂ ವಾಣಿಜ್ಯ ಮಾರುಕಟ್ಟೆ ತಜ್ಞರ ಸಮಗ್ರ ವರದಿ ಪಡೆದು ಅಡಕೆ ಬಗೆಗಿನ ಅಪಪ್ರಚಾರಕ್ಕೆ ತೆರೆ ಎಳೆಯಬೇಕು.
| ಡಾ.ವಿಘ್ನೇಶ್ವರ ವಮುಡಿ ಕೃಷಿ ಮಾರುಕಟ್ಟೆ ತಜ್ಞ, ಪುತ್ತೂರು, ದ.ಕ.