‘ಹಾನಿ ನಿಯಂತ್ರಣ’ಕ್ಕೆ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಕಸರತ್ತು: ಹೊಸಪೇಟೆಯಲ್ಲಿ ಕಮಲಪಡೆ ಕಲರವ..

State Story
Published on

| ಮೃತ್ಯುಂಜಯ ಕಪಗಲ್ ಬೆಂಗಳೂರು

ಕಮಿಷನ್ ಬೇಡಿಕೆ ದೂರಿನ ನಂತರ ಸಂಭವಿಸಿದ ದುರಂತ, ಪಕ್ಷದ ಕಟ್ಟಾಳು ಕೆ.ಎಸ್.ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಉಂಟಾಗಿರುವ ‘ಹಾನಿ ನಿಯಂತ್ರಣ’ವೇ ಆಡಳಿತ ಬಿಜೆಪಿ ಮುಂದಿರುವ ಮೊದಲ ಸವಾಲು. ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲಿ ಶನಿವಾರ ಮತ್ತು ಭಾನುವಾರ ನಡೆಯಲಿರುವ ಪಕ್ಷದ ರಾಜ್ಯ ಕಾರ್ಯಕಾರಿಣಿ, ಕೋರ್ ಕಮಿಟಿ ಸಭೆಯು ಪರಿಹಾರದ ಕಸರತ್ತಿಗೆ ವೇದಿಕೆಯಾಗುವ ಸಾಧ್ಯತೆಗಳಿವೆ. ಸಂಘಟನೆಗೆ ಹೊಳಪು, ಕಾರ್ಯಕರ್ತರಲ್ಲಿ ಹುರುಪು ತುಂಬಿಸಲೆಂದು ರಾಜ್ಯ ನಾಯಕರ ತಂಡಗಳು ಪ್ರವಾಸ ಕೈಗೊಂಡ ಸಂದರ್ಭದಲ್ಲೇ ದಿಢೀರ್ ಬೆಳವಣಿಗೆಯಾಗಿದೆ.

ಹಾನಿ ನಿಯಂತ್ರಣದ ಜತೆಗೆ ಪ್ರತಿಪಕ್ಷಗಳ ತಂತ್ರಕ್ಕೆ ಪ್ರತಿತಂತ್ರ ಹೂಡುವ ತುರ್ತು ಅಗತ್ಯವನ್ನೂ ಈ ಸಭೆಗಳು ಪೂರೈಸಲಿವೆ ಎಂದು ಮುಖಂಡರು, ಕಾರ್ಯಕರ್ತರು ನಿರೀಕ್ಷಿಸಿದ್ದಾರೆ. ಆಡಳಿತ ಪಕ್ಷದ ಮಹತ್ವದ ಸಭೆಗಳು ಎರಡು ದಿನ ನಡೆಯುತ್ತಿರುವ ಕಾರಣ ಕಮಲಪಡೆ ಕಲರವಕ್ಕೆ ಹೊಸಪೇಟೆ ನಗರ ಸಾಕ್ಷಿಯಾಗಲಿದೆ. ರಾಜ್ಯ ರಾಜಕೀಯ ಬೆಳವಣಿಗೆ ಬಗ್ಗೆ ತಲೆಕೆಡಿಸಿಕೊಳ್ಳದೆ ಮುಖಂಡರು ಹಾಗೂ ಕಾರ್ಯಕರ್ತರು ಹಗಲಿರುಳು ಶ್ರಮಿಸುತ್ತಿದ್ದು, ಮೇಲ್ನೋಟಕ್ಕೆ ಉತ್ಸಾಹ ಬಿಂಬಿತವಾಗುತ್ತಿದೆ. ಸರ್ಕಾರ ಮತ್ತು ಪಕ್ಷದ ವರ್ಚಸ್ಸು ಪುನರುಜ್ಜೀವನೇ ಸಭೆಯ ಗತಿಬಿಂಬಿವಾಗಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭಾಗವಹಿಸುತ್ತಿರುವ ಕಾರಣ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

ಮೂರ್ತರೂಪ: ಪಕ್ಷದ ಹೊರ-ಒಳಗೆ ಕಾವೇರಿದ ಚರ್ಚೆಗೆ ಗ್ರಾಸವಾಗಿರುವ ಸಚಿವ ಸಂಪುಟ ಮತ್ತು ನಿಗಮ, ಮಂಡಳಿಗಳ ಪುನಾರಚನೆಯೂ ಮೂರ್ತರೂಪ ಪಡೆಯುವ ಲೆಕ್ಕಾಚಾರಗಳಿವೆ. ಸಚಿವ ಸಂಪುಟದಲ್ಲಿ ಐದು ಸ್ಥಾನಗಳು ಖಾಲಿಯಿವೆ. ಪಕ್ಷದ ಸಂಘಟನೆಗೆ ಬಳಕೆ ನೆಪದಲ್ಲಿ ಕೆಲವರನ್ನು ಕೈಬಿಟ್ಟು, ಮೇಜರಿ ಸರ್ಜರಿ ಮಾಡುವ ತರ್ಕಗಳಿವೆ. ಮುಂಬರುವ ಚುನಾವಣೆಗೆ ತಯಾರಿಗಾಗಿ ಈ ಸಭೆಯಲ್ಲಿ ರೂಪು-ರೇಷೆಗಳು ಸಿದ್ಧವಾಗಲಿವೆ ಎಂದು ಪಕ್ಷದ ಹಿರಿಯ ನಾಯಕರು ಈಗಾಗಲೇ ತಿಳಿಸಿದ್ದು, ರಣಕಹಳೆ ಮೊಳಗಿಸುವುದು ಬಹುತೇಕ ನಿಶ್ಚಿತ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನಪರ ಕಾರ್ಯಕ್ರಮಗಳು, ಯೋಜನೆಗಳ ಅನುಷ್ಠಾನದ ಬಗ್ಗೆ ಜನರಿಗೆ ತಿಳಿಸಿ ‘ಅಭಿವೃದ್ಧಿ ಅಜೆಂಡಾ’ದಲ್ಲಿ ಮುಂದಿನ ಚುನಾವಣೆ ಎದುರಿಸಲು ಉದ್ದೇಶಿತ ‘ಪಥನಕ್ಷೆ’ ಅಂತಿಮ ಸ್ಪರ್ಶ ಪಡೆಯಲಿದೆ. ಭಾವನಾತ್ಮಕ ವಿಚಾರಗಳು ಕರ್ನಾಟಕದಲ್ಲಿ ವರ್ಕೌಟ್ ಆಗುವುದಿಲ್ಲ. ಅಭಿವೃದ್ಧಿಯನ್ನು ಮುಂದಿಟ್ಟು ಅಖಾಡಕ್ಕೆ ಧುಮುಕಬೇಕು ಎಂಬ ಒಲವಿಗೆ ಮನ್ನಣೆ ನೀಡುವ ಲಕ್ಷಣಗಳು ಹೆಚ್ಚಿವೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇನ್ನಿತರ ಪ್ರಮುಖರು ಭಾಗವಹಿಸಲಿದ್ದಾರೆ.

ಮುಖ್ಯಾಂಶಗಳು

  • ಏ.16ರ ಸಂಜೆ 5ಕ್ಕೆ ಕಾರ್ಯಕಾರಿಣಿ ಉದ್ಘಾಟನೆ, ನಡ್ಡಾ, ಸಿಎಂ ಸೇರಿ ಪ್ರಮುಖರ ಭಾಷಣ. ರಾತ್ರಿ 7ಕ್ಕೆ ಕೋರ್ ಕಮಿಟಿ ಸಭೆ
  • ಏ.16ರ ಬೆಳಗ್ಗೆ 10ಕ್ಕೆ ಬಿ.ಎಲ್.ಸಂತೋಷ್ ವಿಶೇಷ ಭಾಷಣ, ನಡ್ಡಾ ಜತೆಗೆ ಪ್ರಮುಖರ ಸಂವಾದ, ಸಮಾರೋಪ ಸಮಾರಂಭ, ಸಂಜೆ 5ಕ್ಕೆ ಕಾರ್ಯಕರ್ತರ ಬಹಿರಂಗ ಸಭೆ

ಕಾರ್ಯಸೂಚಿ

  • ಯುದ್ಧಗ್ರಸ್ತ ಯೂಕ್ರೇನ್​ನಲ್ಲಿದ್ದ ಭಾರತೀಯರ ರಕ್ಷಣೆ, ಯುದ್ಧಭೂಮಿಯಲ್ಲಿ ಮಡಿದ ಕನ್ನಡಿಗ ವೈದ್ಯ ವಿದ್ಯಾರ್ಥಿ ಶವ ತಾಯ್ನಾಡಿ ಮರಳಿ ತಂದ ಕೇಂದ್ರ ಸರ್ಕಾರಕ್ಕೆ ಅಭಿನಂದನೆ
  • ವಿದ್ಯಾನಿಧಿ ಯೋಜನೆ ರೈತರ ಮಕ್ಕಳ ಜತೆಗೆ ನೇಕಾರರು, ಮೀನುಗಾರರ ಮಕ್ಕಳಿಗೆ ವಿಸ್ತರಣೆ ಸೇರಿ ಹೊಸ ಯೋಜನೆ ಜಾರಿಗೊಳಿಸಿದ ರಾಜ್ಯ ಸರ್ಕಾರಕ್ಕೆ ಅಭಿನಂದನೆ
  • ಪ್ರತಿಪಕ್ಷಗಳ ಅಸಹಕಾರಿ ಧೋರಣೆ, ಹೈಕೋರ್ಟ್ ತೀರ್ಪು ಕೂಡ ಉಲ್ಲಂಘಿಸಿದ ನಡೆ ಬಗ್ಗೆ ರ್ಚಚಿಸಿ ಖಂಡನೆ
  • ಪಕ್ಷದ ವಿಸ್ತಾಕರ, ಪೇಜ್ ಪ್ರಮುಖ, ಬೂತ್​ನಿಂದ ಜಿಲ್ಲಾಮಟ್ಟದ ವರೆಗೆ ಸಂಘಟನಾ ಚಟುವಟಿಕೆಗಳ ವರದಿ ಬಗ್ಗೆ ಪರಾಮರ್ಶೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net