

ತೀರ್ಥಹಳ್ಳಿ: ಭಾರಿ ಬಿರುಗಾಳಿ ಮಳೆಯಿಂದಾಗಿ ನೊಣಬೂರು, ದೇಮ್ಲಾಪುರ, ಶಂಕರಪುರ ಸೇರಿ ಹಲವೆಡೆ ಮನೆ ಮತ್ತು ಕೊಟ್ಟಿಗೆಗಳ ಮೇಲೆ ಮರಗಳು ಬಿದ್ದು ಹಾನಿ ಸಂಭವಿಸಿದೆ.
ದೇಮ್ಲಾಪುರ ಗ್ರಾಪಂ ವ್ಯಾಪ್ತಿಯ ಜೋಗಿಮಠದ ಚಂದ್ರಶೇಖರ ಮನೆ ಸಮೀಪದ ಜಾನುವಾರು ಕೊಟ್ಟಿಗೆ ಮೇಲೆ ಭಾರಿ ಗಾತ್ರದ ಮರ ಬಿದ್ದು ಹಾನಿಯಾಗಿದೆ. ಅದೃಷ್ಟವಶಾತ್ ಜಾನುವಾರುಗಳಿಗೆ ಅಪಾಯವಾಗಿಲ್ಲ. ಅಗ್ರಹಾರ ಹೋಬಳಿಯ ನೊಣಬೂರು ಗ್ರಾಮದ ವೆಂಕಟೇಶ್ ಅವರ ಕೊಟ್ಟಿಗೆಯ ಮೇಲೆ ಮರ ಬಿದ್ದು ಕೊಟ್ಟಿಗೆಯ ಮಾಡು ಜಖಂಗೊಂಡಿದೆ.
ತಟ್ಟಿಕೇವಿ ಶಂಕರಪುರದ ವೆಂಕಟೇಶ್ ವಾಸದ ಮನೆಯ ಮೇಲೆ ಮರ ಬಿದ್ದು ಮನೆಯ ಛಾವಣಿಯ ಹೆಂಚುಗಳು ಮತ್ತು ಸಿಮೆಂಟ್ ಶೀಟುಗಳು ಮುರಿದಿವೆ. ಕೋಣಂದೂರು ಸೊನಗಾರಕೇರಿಯ ರತ್ನಮ್ಮ ಎಂಬುವವರ ವಾಸದ ಮನೆಯ ಹಿಂಭಾಗದ ಗೋಡೆ ಮಳೆಯಿಂದಾಗಿ ಕುಸಿದಿದೆ. ಮೇಲಿನಕುರುವಳ್ಳಿ ಗ್ರಾಪಂ ವ್ಯಾಪ್ತಿಯ ಹುಣಸವಳ್ಳಿ ವಾಸಿ ವಿಶಾಲಾಕ್ಷಿ ಅವರ ಮನೆ ಮಳೆಯಿಂದಾಗಿ ಕುಸಿದು ಹಾನಿಯಾಗಿದೆ. ಈ ಎಲ್ಲ ಸ್ಥಳಗಳಿಗೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.