

ಬೆಂಗಳೂರು: ಕಾವೇರಿ ನದಿಗೆ ಕನಕಪುರ ತಾಲೂಕು ಮೇಕೆದಾಟುನಲ್ಲಿ ಕುಡಿಯುವ ನೀರು ಹಾಗೂ ವಿದ್ಯುತ್ ಉತ್ಪಾದನೆಗಾಗಿ ಅಣೆಕಟ್ಟೆ ನಿರ್ವಿುಸಬೇಕೆಂಬ ರಾಜ್ಯ ಸರ್ಕಾರದ ಪ್ರಯತ್ನಕ್ಕೆ ತಮಿಳುನಾಡು ಬಹಿರಂಗವಾಗಿ ಆಕ್ಷೇಪ ಹೊರಹಾಕಿರುವ ಬೆನ್ನಲ್ಲೇ, ತಮಿಳುನಾಡು ಹಾಗೂ ಕರ್ನಾಟಕದ ರೈತರು ಕೂಡಿಕೊಂಡು ಸರ್ಕಾರದ ಮುಂದಿಡಲು ಹೊಸ ಪ್ರಸ್ತಾವನೆ ಸಿದ್ಧಪಡಿಸುತ್ತಿದ್ದಾರೆ.
ಕನಕಪುರ ತಾಲೂಕಿನ ಮೇಕೆದಾಟು ಬದಲು ಚಾಮರಾಜನಗರ ಜಿಲ್ಲೆ ಹನೂರಿಗೆ ಹೊಂದಿಕೊಂಡಂತೆ ಇರುವ ರಾಶಿಮನಲ್ನಲ್ಲಿ ಜಲಾಶಯ ನಿರ್ವಿುಸಿದರೆ ಅನುಕೂಲ ಹೆಚ್ಚು ಎಂದು ತಮಿಳುನಾಡು ರೈತರು ಪ್ರಸ್ತಾಪಿಸಿದ್ದು, ಕರ್ನಾಟಕದ ರೈತರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಲು ಬಯಸಿದ್ದಾರೆ. ಅಕ್ಟೋಬರ್ನಲ್ಲಿ ಕರ್ನಾಟಕದಲ್ಲೇ ಒಂದು ಸಭೆ ಆಯೋಜಿಸಲು ಎರಡೂ ರಾಜ್ಯದ ರೈತ ಹೋರಾಟಗಾರರು ಬಯಸಿದ್ದಾರೆ. ರಾಶಿಮನಲ್ನಲ್ಲಿ ಜಲಾಶಯ ನಿರ್ವಿುಸುವುದರಿಂದ ಆಗುವ ಸಾಧಕ-ಬಾಧಕ, ಸವಾಲುಗಳ ಕುರಿತು ಪ್ರಾಥಮಿಕ ಮಾಹಿತಿ ಸಂಗ್ರಹಕ್ಕೆ ತಜ್ಞರ ಸಮಿತಿ ರಚಿಸಲೂ ಅವರು ಬಯಸಿದ್ದಾರೆ. ವಿಜಯವಾಣಿಯೊಂದಿಗೆ ಮಾತನಾಡಿದ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಕುರುಬೂರು ಶಾಂತಕುಮಾರ್, ಇತ್ತೀಚೆಗೆ ತಮಿಳುನಾಡಿಗೆ ಭೇಟಿಕೊಟ್ಟಿದ್ದ ಸಂದರ್ಭದಲ್ಲಿ ‘ಮೇಕೆದಾಟು ಯೋಜನೆಗೆ ಆಕ್ಷೇಪ ಏಕೆ? ನಮಗೆ ಬೇಸಿಗೆಯಲ್ಲೇ ಕುಡಿಯುವ ನೀರಿಲ್ಲದೇ ಸಮಸ್ಯೆಯಾಯಿತು’ ಎಂದು ತಮಿಳುನಾಡಿನ ರೈತ ಹೋರಾಟಗಾರರ ಗಮನ ಸೆಳೆದವು. ಆ ಸಂದರ್ಭದಲ್ಲಿ ರಾಶಿಮನಲ್ ಬಗ್ಗೆ ಅವರು ಪ್ರಸ್ತಾಪಿಸಿದರು. ಮುಂದುವರಿದ ಪ್ರಯತ್ನವಾಗಿ ಅರಣ್ಯ ಪ್ರದೇಶದಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗಿ ಸ್ಥಳ ಪರಿಶೀಲನೆ ಮಾಡಿ ಬಂದೆವು ಎಂದರು.
ರಾಶಿಮನಲ್ ಹಾಗೂ ಮೇಕೆದಾಟು ಯೋಜನೆ ಬಗ್ಗೆ ತುಲನೆ ಮಾಡಬೇಕಾಗುತ್ತದೆ. ಯಾವುದು ಹೆಚ್ಚು ಅನುಕೂಲ ಎಂದು ನೋಡೋಣ. ನೀರಾವರಿ, ಅರಣ್ಯ, ಪರಿಸರ ಕ್ಷೇತ್ರದ ತಜ್ಞರ ತಂಡ ರಚಿಸಿ ಅಭಿಪ್ರಾಯ ಸಂಗ್ರಹಿಸೋಣ. ಬಳಿಕ ಮುಂದುವರಿಯೋಣ ಎಂದು ಹೇಳಿದ್ದೇವೆ. ಅಕ್ಟೋಬರ್ನಲ್ಲಿ ಸಭೆ ಕರೆಯುವ ಉದ್ದೇಶವಿದೆ. ಅಲ್ಲಿ ಈ ಬಗ್ಗೆ ಚಿತ್ರಣ ಇನ್ನೊಂದಿಷ್ಟು ಸ್ಪಷ್ಟವಾಗಲಿದೆ ಎಂದು ವಿವರಿಸಿದರು. ಎರಡೂ ರಾಜ್ಯದ ರೈತರು, ತಜ್ಞರು ಹಾಗೂ ಅನ್ಯ ರಾಜ್ಯ ಅಥವಾ ಕೇಂದ್ರಕ್ಕೆ ಸಂಬಂಧಪಟ್ಟವರನ್ನು ಸಮಿತಿಯಲ್ಲಿ ಇಟ್ಟುಕೊಂಡು ಮುಂದುವರಿದಾಗ ಯಾರಿಗೂ ಹೆಚ್ಚು ಕಡಿಮೆಯಾಗದಂತೆ ಅಭಿಪ್ರಾಯ ಬರಲಿದೆ. ಅಕ್ಟೋಬರ್ನಲ್ಲಿ ನಡೆಸಲು ಉದ್ದೇಶಿಸಿರುವ ಸಭೆಯಲ್ಲಿ ವಿವಿಧ ರೈತ ಸಂಘಟನೆಗಳು, ಕಾವೇರಿ ಕುಟುಂಬದವರನ್ನೂ ಆಹ್ವಾನಿಸುತ್ತೇವೆ ಎಂದರು.
ಜಂಟಿ ಲೆಕ್ಕಾಚಾರ: ಎರಡೂ ರಾಜ್ಯಗಳು ಸೇರಿ ಕೇಂದ್ರದ ಆರ್ಥಿಕ ನೆರವವನ್ನೂ ಪಡೆದು ಜಲಾಶಯ ನಿರ್ವಿುಸಬೇಕು. ಇದರಿಂದ ಕಾಳಜಿ, ಹಕ್ಕು ಎರಡೂ ಸಮನಾಗಿರುತ್ತದೆ. ಕುಡಿಯುವ ನೀರು, ವಿದ್ಯುತ್ ಉತ್ಪಾದನೆ, ಕೃಷಿಗೆ ಅನುಕೂಲವಾಗಲಿದೆ.
ಎರಡೂ ಪ್ರಸ್ತಾವನೆ ತುಲನಾತ್ಮಕವಾಗಿ ನೋಡಬೇಕಾಗುತ್ತದೆ. ಎಲ್ಲರೂ ಒಪ್ಪಿದರೆ ಇಬ್ಬರೂ ಕುಳಿತು ಚರ್ಚೆ ಮಾಡೋಣ, ತಜ್ಞರ ಸಮಿತಿ ಮಾಡೋಣ ಎಂದು ಹೇಳಿಬಂದಿದ್ದೇವೆ. ಮುಂದಿನ ಸಭೆ ನಾವೇ ಅಕ್ಟೋಬರ್ನಲ್ಲಿ ನಡೆಸುವ ಉದ್ದೇಶವಿದೆ. ಎರಡೂ ರಾಜ್ಯಕ್ಕೆ ಅನುಕೂಲವಾಗುವ ಪ್ರಯತ್ನ ನಡೆಯಬೇಕಿದೆ.
| ಕುರುಬೂರು ಶಾಂತಕುಮಾರ್ ರೈತ ಮುಖಂಡ
ಕರ್ನಾಟಕದ ರೀತಿ ತಮಿಳುನಾಡಿಗೂ ಕೂಡ ಕಾವೇರಿ ನದಿ ಜನರ ಜೀವನಾಡಿ. ಮೇಕೆದಾಟು ಯೋಜನೆ ಬದಲು ರಾಶಿಮನಲ್ನಲ್ಲಿ ಜಲಾಶಯ ನಿರ್ವಿುಸಿದರೆ ಎರಡೂ ರಾಜ್ಯಕ್ಕೆ ಹೆಚ್ಚು ಅನುಕೂಲವಾಗಲಿದೆ. ಎರಡೂ ಸರ್ಕಾರ ಮನಸ್ಸು ಮಾಡಿ ಮುಂದುವರಿಯಲಿ.
| ಪಿ.ಆರ್. ಪಾಂಡ್ಯನ್ ಅಧ್ಯಕ್ಷ, ರೈತ ಸಂಘಟನೆಗಳ ಒಕ್ಕೂಟ, ತಮಿಳುನಾಡು