ಡಲ್ಲಾಸ್​ನಲ್ಲಿ ಉತ್ತರ ಕರ್ನಾಟಕ ಜಾತ್ರೆ; ದೇಸಿ ಸೊಗಡಿಗೆ ಮನಸೋತ ಜನತೆ

Dallas Uk
Published on

ನವದೆಹಲಿ: ಅಮೇರಿಕಾದಲ್ಲಿ ಮೊದಲಿಗೆ ಕೇವಲ 5 ಕುಟುಂಬಗಳು ಸೇರಿ 50 ಜನರಿಗೆ ರೊಟ್ಟಿ ಊಟದ ಪಿಕ್ನಿಕ್ ಮಾಡಿಸಿದ ಒಂದು ಸಣ್ಣ ಪ್ರಯತ್ನ, ಈಗ 70 ಜನ ಸಮಾನ ಮನಸ್ಕ ಸ್ವಯಂಸೇವಕರು ಸೇರಿ ಐನೂರ ಹತ್ತಕ್ಕೂ ಹೆಚ್ಚು ಜನರಿಗೆ ರೊಟ್ಟಿ ಊಟ ಮಾಡಿಸಿ, ಒಂದು ಪಕ್ಕಾ ಜವಾರಿ ಉತ್ತರ ಕರ್ನಾಟಕ ಜಾತ್ರೆ ಮಾಡಿದ ಯಶಸ್ವಿ ಕಾರ್ಯಕ್ರಮದ ಮಾಹಿತಿ ಇಲ್ಲಿದೆ ಮುಂದೆ ಓದಿ.

ಇದೆಲ್ಲ ಶುರುವಾಗಿದ್ದು 2022 ರ ಒಂದು summer break ಟೈಮಲ್ಲಿ, ಇಲ್ಲಿನ ಮಕ್ಕಳಿಗೆ ನಮ್ಮ್ ಉತ್ತರ ಕರ್ನಾಟಕ ಶೈಲಿಯ ವಿವಿಧ ಅಡುಗೆ ಗಳನ್ನ ಪರಿಚಯಿಸೋಕೆ ಅಂತ ಕೇವಲ ಐದು ಕುಟುಂಬಗಳು potluck ಥರದ ಕಾರ್ಯಕ್ರಮ ಮಾಡುವುದಕ್ಕೆ ನಿಶ್ಚಯಿಸ್ತಾರೆ. (potluck ಅಂದರೆ ಒಂಥರಾ ಪಿಕ್ನಿಕ್ ಥರಾನೇ ಪ್ರತಿ ಮನೆ ಯವರು ಒಂದೊಂದು ಬಗೆಯ ಅಡುಗೇನ ಮಾಡಿಕೊಂಡು ಬರೋದು). ಈ ಕಾರ್ಯಕ್ರಮದ ತಯ್ಯಾರಿ ನಡೀತಾ ಇರೋವಾಗಲೇ ಕರ್ನಾಟಕದ ಪ್ರಸಿದ್ಧ ಗುರುಗಳಿಗೇ ಗುರುಗಳಾದ ಡಾಕ್ಟರ್ ಗುರುರಾಜ್ ಕರ್ಜಗಿ ಅವರ ಭೆಟ್ಟಿ ಆಗುತ್ತೆ, ಅವರೂ ಕೂಡ ಈ ಪಿಕ್ನಿಕ್ ಗೆ ಬರೋಕೆ ಒಪ್ಪ್ಕೋತಾರೆ

ಮುಂದೆ ಪಿಕ್ನಿಕ್ ಗೆ ಬಂದ ಗುರುಗಳು ಈ ಥರ ನಮ್ಮ ಊಟ, ತಿಂಡಿ ತಿನಿಸು, ನಮ್ಮ ಉಡುಗೆ ತೊಡುಗೆಗಳ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವ ಮತ್ತು ಅದನ್ನ ಆದಷ್ಟು ಪ್ರಾಮಾಣಿಕವಾಗಿ ದಾಟಿಸುವ ಮಹತ್ವದ ಬಗ್ಗೆ ಎಲ್ಲರಿಗೂ ಅರಿವು ಮೂಡಿಸುವ ಬಗ್ಗೆ ತಮ್ಮ ಅಭಿಪ್ರಾಯಗಳನ್ನ ತಿಳಿಸ್ತಾರೆ, ಹೌದು ನಾವೆಲ್ಲ ಕನ್ನಡಿಗರು, ಕನ್ನಡಿಗರೆಲ್ಲ ಒಂದೇ ನಿಜ ಆದರೆ ಪ್ರತಿ ಊರು, ಪ್ರತಿ ಜಿಲ್ಲೆ ಪ್ರತಿ ಭಾಗಕ್ಕೆ ಅದರದೇ ಆದ ಒಂದು ಸೊಬಗಿದೆ ಒಂದು ಸೊಗಡಿದೆ ಅದನ್ನ ನಾವೇ ಅಲ್ಲವೇ ಮುಂದಿನ ಮಕ್ಕಳಿಗೆ ತಲುಪಿಸಬೇಕಾದವರು.. ಹಾಗಾಗಿ ಈ ಬಯಲು ಸೀಮೆಯವರೆಲ್ಲ ಸೇರಿ ನಮ್ಮ ಭಾಷೆಯ ಶೈಲಿ, ನಮ್ಮ ಉಡುಗೆ ತೊಡುಗೆ ಗಳನ್ನ ಸೆಲೆಬ್ರೇಟ್ ಮಾಡುವುದರಲ್ಲೂ ತಪ್ಪೇನಿಲ್ಲ ಎಂದು ಎಲ್ಲರನ್ನ ಹುರುದುಂಬಿಸ್ತಾರೆ.

ಹಾಗೆ ಶುರುವಾದ ಕಾರ್ಯಕ್ರಮ ಮುಂದೆ 50 ರಿಂದ 150 ಜನಕ್ಕೆ ಬೆಳೆಯಿತು ಮುಂದೆ 320 ಆಯಿತು ಹಾಗೆ ಈ ವರುಷ ಭರ್ಜರಿ 510 ಜನರ ಯಶಸ್ವೀ ಜಾತ್ರೆ ಆಯಿತು. ಇದೆಲ್ಲ ಆಗೋದಕ್ಕೆ ಇಲ್ಲಿ ಯಾವುದೇ ಸಂಘವಾಗಲಿ, ಸಂಸ್ಥೆಯಾಗಲಿ ಇಲ್ಲ ಇದೆಲ್ಲ ಆಗೋಕೆ ಕಾರಣ ಕೇವಲ ಬಯಲು ಸೀಮೆಯ ಜನರ ಪ್ರೀತಿ ಮತ್ತು ಸಮಾನ ಮನಸ್ಕ ಸ್ವಯಂ ಸೇವಕರು. ಈ ಜಾತ್ರೆಗೆ ಜಾತಿ ಪಂಥಗಳ ಸೋಂಕಿಲ್ಲ, ದೊಡ್ಡವರು ಚಿಕ್ಕವರೆಂಬ ತರ್ಕಗಳೂ ಇಲ್ಲ.! ಇಲ್ಲಿ ಎಲ್ಲರೂ ಒಂದೇ.! ಎಲ್ಲರದೂ ಒಂದೇ ಗುರಿ ಅದೇ ನಮ್ಮ ಉತ್ತರ ಕರ್ನಾಟಕದ ಸೊಗಡನ್ನ ಮೆಲಕು ಹಾಕುವುದು ಮತ್ತು ಮುಂದಿನ ಪೀಳಿಗೆಗೆ ಧಾರೆ ಎರೆಯುವುದು.

ಹೀಗೊಂದು ಕಾರ್ಯಕ್ರಮವನ್ನ ಯಶಸ್ವಿ ಮಾಡೋದು ಅಷ್ಟೇನೂ ಸುಲಭದ ವಿಷಯವೇನಲ್ಲ, ಅಮೇರಿಕಾ ಅಂದ್ರೆ ಮೊದಲೇ ಗೊತ್ತಲ್ಲ ಇಲ್ಲಿ ಎಲ್ಲವೂ ಮೊದಲೇ ಪ್ಲಾನ್ ಮಾಡಿದ ಬಿಡುವಿಲ್ಲದ ಬದುಕು. ಹೀಗಾಗಿ ಈ ಕಾರ್ಯಕ್ರಮ ಆಯೋಜಿಸುವುದಕ್ಕೂ ಕೂಡ ಸುಮಾರು ತಿಂಗಳುಗಳ ತಯ್ಯಾರಿ ನಡೆದಿದೆ, ಅದೆಲ್ಲ ಹೇಗೆ ಏನಾಯ್ತು ಅಂತ ಗೊತ್ತಾದ್ರೆ ನಿಮಗೂ ಕೂಡ ಒಮ್ಮೆ ಈ ಜಾತ್ರೆಗೆ ಬರಬೇಕೆಂಬ ಬಯಕೆ ಹುಟ್ಟಿದರೆ ತಪ್ಪೇನಿಲ್ಲ.

UK Jathre

ಯಾವುದೇ ಕಾರ್ಯಕ್ರಮವಾಗಲಿ ಅದಕ್ಕೊಂದು ಜಾಗ್ ಬೇಕು, ಇಲ್ಲಿ ಅಮೇರಿಕಾದಲ್ಲಿ ಕೂಡ ಹೀಗೇ ಕಮ್ಯೂನಿಟಿ ಇವೆಂಟ್ ಮಾಡೋಕೆ ನಾವು ಹೆಚ್ಚಾಗಿ ಶಾಲಾ ಸಭಾಂಗಣಗಳನ್ನ ಬುಕ್ ಮಾಡ್ತೀವಿ ಆದರೆ ಈ ವರ್ಷ ನಾವು ಹುಡುಕುತ್ತಿದ್ದ ವೀಕೆಂಡ್ ಡೇಟ್ ಗಳಿಗೆ ಯಾವುದೇ ಶಾಲೆ ಸಿಗಲಿಲ್ಲ ಕೊನೆಯ ಪ್ರಯತ್ನವಾಗಿ ಇಲ್ಲಿನ DFW ದೇವಸ್ಥಾನದ ಸಭಾಗ್ರಹವನ್ನ ವಿಚಾರಿಸಿದಾಗ ಅದ್ಯಾರೋ ಆಗ ತಾನೇ ಫೆಬ್ರವರಿ 24 ಕ್ಕೆ ಅವರ ಪೂರ್ವ ನಿಯೋಜಿತ ಕಾರ್ಯಕ್ರಮವನ್ನ ಕ್ಯಾನ್ಸಲ್ ಮಾಡಿ ಹೋಗಿದ್ದರಂತೆ ಹಾಗಾಗಿ ನಮಗೆ ಅವರು ಕೊಡಲು ಒಪ್ಪಿದರು. ಅಲ್ಲಿಗೆ ಒಂದು ಮಹತ್ವದ ವಿಷಯ ದೇವರ ಕೃಪೆ ಇಂದ ಸಲೀಸಾಗಿ ಬಗೆಹರದಿತ್ತು.

ಅಲ್ಲಿಂದ ಮುಂದೆ Volunteer (ಸ್ವಯಂ ಸೇವಕರು) ಗಳೆಲ್ಲ 5 ವಿವಿಧ ಗುಂಪುಗಳಾಗಿ ಕೆಲಸ ಪ್ರಾರಂಭಿಸಿದ್ರು, ಫೈನಾನ್ಸ್, Welcome and ರಿಜಿಸ್ಟ್ರೇಷನ್, ಫುಡ್, ಕಲ್ಚರಲ್ ಮತ್ತು ಡೆಕೋರೇಷನ್. ಹೆಸರಿಗೆ ತಕ್ಕಂತೆ ಒಂದೊಂದು ಗುಂಪಿಗೂ ಒಂದೊಂದು ನಿರ್ದಿಷ್ಟ ಜವಾಬ್ದಾರಿ. ಎಲ್ಲರೂ ಒಬ್ಬರಿಗೊಬ್ಬರು ಹೆಗಲು ಕೊಟ್ಟು ತಮ್ಮ ತಮ್ಮ ಜವಾಬ್ದಾರಿಗಳನ್ನ ನಿಭಾಯಿಸಿದ್ರು. ಇತ್ತ ಫೈನಾನ್ಸ್ ನವರು ಕಾರ್ಯಕ್ರಮಕ್ಕೆ ಬೇಕಾದ ಕಾಸು ಹೊಂದಿಸೋಕೆ ಪ್ರಾಯೋಜಕರನ್ನ ಹೊಂದಿಸ್ತಾ ಇದ್ದಾರೆ ಕಲ್ಚರಲ್ ಟೀಮಿನವರು ಕಾರ್ಯಕ್ರಮದಲ್ಲಿ ನಡೆಯ ಬೇಕಾದ ಪ್ರೋಗ್ರಾಮ್ ಗಳ ತಯ್ಯಾರಿ ನಡೆಸಿದ್ರು. ಮುಖ್ಯವಾಗಿ ಫುಡ್ ಟೀಮ್ ಅಂದ್ರೆ ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾದ ರೊಟ್ಟಿ ಊಟದ ಟೀಮ್ ಅಂತೂ ಮನೆಯಲ್ಲಿ ಅಂದು ಅಡುಗೆ ಮಾಡದೇ ಹೋದರೂ ಪರ್ವಾಗಿಲ್ಲ ಆದರೆ ಜಾತ್ರೆಗೆ ತಯ್ಯಾರಿ ಮಾಡಬೇಕಾದ ಅಡುಗೆ ಬಗ್ಗೆ ತುಂಬಾ ಮುತುವರ್ಜಿ ವಹಿಸಿದ್ರು. ಹೀಗಾಗಿ ಉತ್ತರ ಕರ್ನಾಟಕದಲ್ಲಿ ಸಿಗುವ ಜೋಳದ ರೊಟ್ಟಿ, ಸಜ್ಜಿ ರೊಟ್ಟಿ (ಭಕ್ರಿ), ಶೇಂಗಾ ಹಿಂಡಿ, ಗುರೆಳ್ಳ ಹಿಂಡಿ, ರಂಜಕ (ಕೆಂಪ ಮೆಣಸಿನ ಕಾಯಿ ಚಟ್ನಿ) ಯನ್ನ ಬೆಳಗಾವಿ ಇಂದ ನಾವಿರುವ ಊರಿಗೆ ಇಂಟರ್ನ್ಯಾಷನಲ್ ಶಿಪ್ಪಿಂಗ್ ಮೂಲಕ ತರ್ಸಿದ್ರು, ಇನ್ನು ಇಲ್ಲಿ ಜಾತ್ರೆ ದಿನಕ್ಕೆ ಬೇಕಾಗುವ ಎನಗಾಯಿ ಬದನೆಕಾಯಿ ಪಲ್ಯ, ಹೆಸರಕಾಳ ಪಲ್ಯ, ಝುಣಕ, ಗೋಧಿ ಹುಗ್ಗಿ, ಐನೂರಕ್ಕೂ ಹೆಚ್ಚು ಶೇಂಗಾ ಹೋಳಿಗೆ, ಬಳ್ಳೊಳ್ಳಿ ಸಾರು ಮಾಡೋಕೆ ನಮ್ಮಲ್ಲಿನ ಕೆಲ ಫ್ಯಾಮಿಲಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಅವರಿಗೆಲ್ಲ ಒಂದೇ ಗುಣಮಟ್ಟದ ಪದಾರ್ಥ ತಯ್ಯಾರಿ ಮಾಡೋಕೆ ಸಹಾಯ್ ಆಗಲಿ ಅಂತ ಎರಡ್ ಮೂರು ವಾರ ಮೊದಲೇ ಒಂದು ಸಣ್ಣ ಪ್ರಾಯೋಗಿಕ ಅಡುಗೆ ಇವೆಂಟ್ ಕೂಡ ಮಾಡಿದ್ರು. ಇದರ ಜೊತೆಗೆ ಕಾರ್ಯಕ್ರಮದ ಬಗ್ಗೆ ಎಲ್ಲರಿಗೂ ಮಾಹಿತಿ ಯನ್ನ ತಲುಪಿಸೋಕೆ ಒಂದು ಮಟ್ಟದ ಪ್ರಚಾರ ಕೂಡ ಬೇಕಲ್ವಾ.? ನಾವ್ ಮಾಡ್ತಿರೋದು ಪಕ್ಕಾ ಜಾತ್ರೆ ಹೀಗಾಗಿ ನಮ್ಮ ಈ ಕಾರ್ಯಕ್ರಮಕ್ಕೆ ರಾಯಭಾರಿಗಳಾಗಿದ್ದು ನಮ್ಮ ವೃತ್ತಿ ರಂಗಭೂಮಿ ಕಲಾವಿದರು ಮತ್ತು ಉತ್ತರ ಕರ್ನಾಟಕದ ಯೂಟ್ಯೂಬ್ ಸ್ಟಾರ್ ಗಳು. ಇವರೆಲ್ಲರೂ ಪ್ರೀತಿಯಿಂದ ಶುಭ ಹಾರೈಸಿದ ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ಹತ್ತು ಸಾವಿರಕ್ಕಿಂತ ಹೆಚ್ಚಿಗೆ ದರ್ಶನ ಭಾಗ್ಯ ಪಡೆದಿವೆ.

ಇದೆಲ್ಲ ಓದಿದ್ರೆ ನಿಮಗೆ ಅನ್ನಿಸಬಹುದು ಒಂದು ಯಶಸ್ವಿ ಕಾರ್ಯಕ್ರಮ ಆಗೋಕೆ ಎಷ್ಟೊಂದು ಪ್ಲಾನಿಂಗಿನ ಅವಶ್ಯಕತೆ ಇದೆ ಅಂತ. ಇದೆಲ್ಲ ತಯಾರಿ ಮಾಡಿಕೊಳ್ಳುವಷ್ಟರಲ್ಲಿ ಫೆಬ್ರವರಿ 24 ಬಂದೇ ಬಿಟ್ಟಿತು. ಮಧ್ಯಾಹ್ನದ ಕಾರ್ಯಕ್ರಮವಾದರೂ ಬೆಳಗಿನ ಹತ್ತು ಗಂಟೆಗೆಲ್ಲ ವೆಲ್ಕಮ್ and ರಿಜಿಸ್ಟ್ರೇಷನ್ ಮತ್ತು ಡೆಕೋರೇಷನ್ ಟೀಮ್ DFW ದೇವಸ್ಥಾನದ ಸಭಾಗ್ರಹವನ್ನ ತಲುಪಿಯಾಗಿತ್ತು.ಡೆಕೋರೇಷನ್ ಟೀಮಿನವರು ನಮ್ಮ ಉತ್ತರ ಕರ್ನಾಟಕದ ಜಮಖಂಡಿ ಇಂದ ತರಿಸಿದ ಬ್ಯಾನರ್ ಕಟ್ಟಿ ಸ್ಟೇಜ್ ತಯ್ಯಾರಿ ಮಾಡ್ತಾ ಇದ್ರೆ ಆ ಕಡೆ ಜಾತ್ರೆಯಲ್ಲಿ ಸಿಗುವ ವಿವಿಧ ಆಟಿಕೆ ಜಾತ್ರೆ ನಾಟಕದ ಪೋಸ್ಟರ್ ಗಳು ಮತ್ತು ರಥದ ಪ್ರತಿ ರೂಪ ಹಾಗು ಫೋಟೋ ತೆಗೆಸಿ ಕೊಳ್ಳೋ ಜಾಗವನ್ನ ಅತ್ಯಂತ ಶಿಸ್ತಿನಿಂದ ತಯ್ಯಾರಿ ಮಾಡಿದ್ದರು ನಮ್ಮ ಕಲಾತ್ಮಕ ಸ್ವಯಂ ಸೇವಕರು, ನಮ್ಮೂರ ಜಾತ್ರೆಗಳಲ್ಲಿ ಸಿಗುವ ಹಲವಾರು ಆಟಿಕೆ ಗಳನ್ನೆಲ್ಲ ಭಾರತದಿಂದ ಎಕ್ಸ್ಪೋರ್ಟ್ ಮಾಡಿಸಿ ಜಾತ್ರೆ ವಾತಾವರಣ ತಯ್ಯಾರಿ ಮಾಡಿದ್ದರು ನಮ್ಮ ಡೆಕೋರೇಷನ್ ಟೀಮಿನವರು.

ಟೆಕ್ನಾಲಜಿ ಮುಂದೆವರೆದಂತೆಲ್ಲ ನಮ್ಮ ರಿಜಿಸ್ಟ್ರೇಷನ್ ಟೀಮಿನವರು ಕೇವಲ QR ಕೋಡ್ ಬಳಿಸಿಯೇ ಜಾತ್ರೆಗೆ ನೋಂದಾಯಿಸಿದವರನ್ನ ಸ್ವಾಗತಿಸುತ್ತಿದ್ದುದು ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದು ಸುಳ್ಳಲ್ಲ. ಮುಂದೆ ಸರಿಯಾಗಿ ಒಂದು ಗಂಟೆಗೆಲ್ಲ ಜನ ಬರ್ತಾ ಇದ್ದರೆ, ರಿಜಿಸ್ಟ್ರೇಷನ್ ಮಾಡಿದವರೆಲ್ಲ ಮೊದಲು ಕೈ ಹಾಕಿದ್ದೇ ಉತ್ತರ ಕರ್ನಾಟಕದ ಫೆವರೇಟ್ ಚುನುಮುರಿ ಗಿರ್ಮಿಟ್, ಗರಂ ಗರಂ ಭಜಿ ಮತ್ತು ಹಾಪ್ ಚಾಹ.

ಈ ಗಿರ್ಮಿಟ್ ರೆಡಿ ಆಗಿದ್ದರ ಬಗ್ಗೆ ಹೇಳಲೇ ಬೇಕು ಇದೊಂಥರಾ IT ಪ್ರಾಜೆಕ್ಟ್ ನ ಡೆಲಿವೆರಿ ಮಾಡಿದಂತಿತ್ತು ಎಷ್ಟೇ ಆಗಲಿ ಎಲ್ಲರೂ IT ಲಿ ಕೆಲಸ ಮಾಡುವವರೇ ಅಲ್ವಾ. ಸುಮಾರು 4 ಚೀಲ ಚುನುಮರಿ, 25KG ಈರುಳ್ಳಿ ಉಪಯೋಗಿಸಿ ನಾಲ್ಕು ಕುಟುಂಬಗಳು ನಾಲ್ಕು ವಾರಗಳ ಸತತ ಪ್ರಯತ್ನ ದಿಂದ ಕಡಿಮೆ ಎಂದರೂ 600 ಕ್ಕೂ ಹೆಚ್ಚು ಪ್ಲೇಟ್ ಲೈವ್ ಕೌಂಟರ್ ಗಳಲ್ಲಿ ಗಿರ್ಮಿಟ್ ಮಾಡಿ ಜನರ ಬಾಯಿ ರುಚಿ ತಣಿಸಿ ಅವರ ಮನ ಮನಸ್ಸುಗಳನ್ನು ಊರಿಗೆ ಕರೆದೊಯ್ದರು. ಗಿರ್ಮಿಟ್ ಮತ್ತು ಭಜಿ ತಿಂದವರೆಲ್ಲ ಹೇಳಿದ್ದು ಒಂದೇ ಮಾತು ಒನ್ ಮೋರ್ ಒನ್ ಮೋರ್.

UK Jathre

ಜನ ಬಂದಂತೆಲ್ಲ ಸಭಾಂಗಣ ತುಂಬುತ ಹೋಯಿತು, ಮೊದಲೇ ನಿಗದಿಯಾದಂತೆ ಸರಿಯಾಗಿ ಮೂರು ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ವೇದ ಘೋಷ, ಡೊಳ್ಳು ಕುಣಿತ ಮತ್ತು ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡವು. ಇದರ ಬೆನ್ನಲ್ಲೇ ಚಿಕ್ಕ ಮಕ್ಕಳ ಹಾಡು, ನೃತ್ಯ ಮತ್ತು ಛದ್ಮವೇಷ ಅಂದರೆ ಫ್ಯಾನ್ಸಿ ಡ್ರೆಸ್ ಕಾರ್ಯಕ್ರಮ ಗಳು ನಡೆದವು. ಮುದ್ದಾದ ಮಕ್ಕಳ ಕಾರ್ಯಕ್ರಮ ನೋಡುವುದೇ ಒಂದು ಭಾಗ್ಯ.! ಇದಾದ ನಂತರ ಭರತನಾಟ್ಯ, ಜಾನಪದ ನೃತ್ಯ ಪ್ರದರ್ಶನ ಗೊಂಡವು. ಹಳೆಯ ನಮ್ಮ ಆಟ, ಊಟ ಮತ್ತು ಪಾಠಗಳನ್ನ ನೆನಪಿಸುವ ಸ್ಟಾಂಡ್ ಅಪ್ ಕಾಮಿಡಿ ಕೂಡ ಚೆಂದವಾಗಿ ಪ್ರದರ್ಶನ ವಾಯಿತು.

ಊರ ಜಾತ್ರೆಯೆಂದರೆ ಊರ ಸೊಗಡಿನ ಘಮವಿರಬೇಕಲ್ಲವೇ? ಹಾಗೆ ನಾವೆಲ್ಲ ಊರಲ್ಲಿ ಕೇಳಿ ಬೆಳೆದ ಜಾನಪದ ಕಲೆಯಾದ ಗೀಗೀ ಪದಗಳನ್ನ ನಮ್ಮ ಕಾರ್ಯಕ್ರಮಕ್ಕೆ ಸೂಕ್ತವಾಗುವಂತೆ ಹೊಸತಾಗಿ ಬರೆದು, ಹಾಡಿ ಮುಂದಿನ ಜನರೇಶನ್ ಗೆ ನಮ್ಮ ಗೀಗೀ ಪದಗಳ ಪರಿಚಯವನ್ನೂ ಮಾಡಲಾಯಿತು, ಇನ್ನು ನಮ್ಮ ಉಡುಗೆ ತೊಡುಗೆ ಗಳನ್ನ ಅದ್ಭುತವಾಗಿ ಪ್ರದರ್ಶಿಸಲೆಂದೇ ನಮ್ಮೂರ ಹೆಣ್ಣು ಮಕ್ಕಳು ಇಳಕಲ್ ಸೀರೆಯುಟ್ಟು ಫ್ಯಾಷನ್ ಶೋ ನಡೆಸಿ ಕೊಟ್ಟರು, ಅದರೊಂದಿಗೆ ಭರತನಾಟ್ಯ ಮತ್ತು ಭರ್ಜರಿ ಫ್ಯಾಮಿಲಿ ಫ್ಯಾಷನ್ ಶೋ ಕೂಡ ಕಾರ್ಯಕ್ರಮದ ಮುಖ್ಯ ಆಕರ್ಷಣೆ ಗಳಾದವು. ಜಾತ್ರೆ ಅಂದ ಮೇಲೆ ಉಡಾಳ ಹುಡುಗರ ಧಾನಲೇ ಇರದೇ ಹೋದರೆ ಹೀಗೆ ಅಂತ ಉತ್ತರ ಕರ್ನಾಟಕದ ಜಾನಪದ ಮತ್ತು ಫೇಮಸ್ ಕನ್ನಡ ಚಿತ್ರ ಗೀತೆಗಳಿಗೆ ಡಲ್ಲಾಸ್ ಉಡಾಳ ಹುಡುಗರು ಅದ್ಭುತ ವಾಗಿ ಕುಣಿದು ಖರೇ ಜಾತ್ರಿ ಮಾಡಿದ್ರು ಅಂದರೆ ತಪ್ಪಾಗಲಾರದು. ಒಟ್ಟಿನಲ್ಲಿ ಪ್ರೇಕ್ಷಕರೆಲ್ಲ ಕುಳಿತ ಜಾಗದಲ್ಲೇ ಮೂರು ಗಂಟೆಗಳ ಕಾಲ ಉತ್ತರ ಕರ್ನಾಟಕಕ್ಕೇ ಹೋಗಿ ಬಂದಂಥ ಅನುಭವ ಪಡೆದು ಧನ್ಯರಾದರು. ನಮ್ಮ ಭಾಷೆಯಲ್ಲೇ ಹೇಳಬೇಕೆಂದರೆ ಇದೊಂದು ಗಿಚ್ಚಿ ಫಂಕ್ಷನ್ ಆತ ನೋಡ್ರಿ.!

ಮೊದಲೇ ನಿಗದಿಯಾದಂತೆ ಸುಮಾರು ಸಂಜೆ 6 ಗಂಟೆಗೆ ಕಾರ್ಯಕ್ರಮಗಳೆಲ್ಲ ಮುಗಿದು ಭರ್ಜರಿ ಊಟದ ಕಾರ್ಯಕ್ರಮ ಶುರುವಾಯಿತು, ಜೊತೆಗೆ ನಮ್ಮೂರ್ ಕಡೆಯ ಜಾನಪದ ಮತ್ತು ಟ್ರ್ಯಾಕ್ಟರ್ ಹಾಡುಗಳ DJ ನಡೀತಾ ಇದ್ದರೆ ಇತ್ತ ಕಾರ್ಯಕ್ರಮಕ್ಕೆ ಬಂದವರೆಲ್ಲ ತಮ್ಮ ಊರವರನ್ನ, ಅಚಾನಕ್ಕಾಗಿ ಸಿಕ್ಕ ಹಳೆಯ ಗೆಳೆಯರನ್ನ ಭೇಟಿ ಆದಾಗ ತಾವು ಹುಟ್ಟಿ ಬೆಳೆದ ಊರು, ಕಲಿತ ಕಾಲೇಜು ದಿನಗಳ ನೆನಪುಗಳನ್ನ ಮೆಲಕು ಹಾಕುತ್ತಿದ್ದದ್ದು ಸಾಮಾನ್ಯವಾಗಿತ್ತು.

ಒಂದು ಭರ್ಜರಿ ಊಟ, ಎಂದೂ ಮರೆಯಲಾಗದ ನಮ್ಮ್ ಊರಿನ ಮತ್ತು ಬಾಲ್ಯದ ನೆನಪುಗಳನ್ನ ಮೆಲಕು ಹಾಕುತ್ತ ಹೊರಗೆ ನಡೆದವರ ಪ್ರತಿಯೊಬ್ಬರ ಬಾಯಲ್ಲಿದ್ದದ್ದು ಒಂದೇ ಮಾತು.. ಇಪ್ಪತ್ನಾಕರದ ಜಾತ್ರಿ ಮಸ್ತ್ ಆತು, ಜಾತ್ರಿ ಮತ್ತ್ ಯವಾಗ್ರಿ..? ಲಘು ಮಾಡ್ರಿ ಮತ್ತೊಮ್ಮೆ ಅಂದದ್ದು.! ನಮ್ಮೆಲ್ಲ ಸ್ವಯಂ ಸೇವಕರಿಗೆ ಇದಕ್ಕಿಂತ ದೊಡ್ಡ ಗೌರವ ಪ್ರಶಸ್ತಿ ಯಾವುದಿದೆ ನೀವೇ ಹೇಳಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net