ಸಂಪಾದಕೀಯ: ರಕ್ಷಣೆಯ ಸವಾಲು; ಸೇನಾ ಸಾಮಗ್ರಿಯತ್ತ ಭಾರತದ ಹೆಜ್ಜೆ

15
Published on

 ರಕ್ಷಣಾ ರಂಗದಲ್ಲಿ, ವಿಶೇಷವಾಗಿ ಏರೋಸ್ಪೇಸ್ ವಿಭಾಗದಲ್ಲಿ ಭಾರತದ ಸಾಧನೆಯನ್ನು ವಿಶ್ವದೆದುರು ಪ್ರದರ್ಶಿಸಲು ಅನುವು ಮಾಡಿಕೊಡುವ ಮತ್ತು ರಕ್ಷಣೆಗೆ ಸಂಬಂಧಿಸಿ ವಿವಿಧ ದೇಶಗಳೊಂದಿಗೆ ಮತ್ತು ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲು ವೇದಿಕೆ ಒದಗಿಸುವ ಆಗಸ ಹಬ್ಬವೇ ಏರ್ ಇಂಡಿಯಾ ಶೋ. ಈ ಪ್ರತಿಷ್ಠಿತ ಕಾರ್ಯಕ್ರಮ ಸತತವಾಗಿ ಬೆಂಗಳೂರಿನಲ್ಲಿ ನಡೆಯುತ್ತಿರುವುದು ಮತ್ತೊಂದು ಹೆಗ್ಗಳಿಕೆ. 14ನೇ ಆವೃತ್ತಿಯ ಈ ಕಾರ್ಯಕ್ರಮ ಸೋಮವಾರ ಆರಂಭವಾಗಿದ್ದು, ಒಟ್ಟು ಐದು ದಿನ ನಡೆಯಲಿದೆ.

ಬೆಂಗಳೂರು ಈಗಾಗಲೇ ಏರೋಸ್ಪೇಸ್ ಹಬ್ ಆಗಿ ಗುರುತಿಸಿಕೊಂಡಿರುವುದು ಇಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳುವುದಕ್ಕೆ ಮತ್ತೊಂದು ಮುಖ್ಯ ಕಾರಣ. ಹಿಂದುಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್​ನಂತಹ ಪ್ರಮುಖ ರಕ್ಷಣಾ ಸಾಮಗ್ರಿ ಉತ್ಪಾದಕ ಸಂಸ್ಥೆ ಬೆಂಗಳೂರಿನಲ್ಲೇ ನೆಲೆ ಹೊಂದಿದೆ. ಈ ಸಲದ ಏರೊ ಇಂಡಿಯಾ ಕಾರ್ಯಕ್ರಮದ ಮುಖ್ಯ ಧ್ಯೇಯ, ನವಭಾರತದ ಶಕ್ತಿಯನ್ನು ಅನಾವರಣ ಮಾಡುವುದು. ಅಂದರೆ, ರಕ್ಷಣೆ ಮತ್ತು ಏರೋಸ್ಪೇಸ್ ವಿಭಾಗದಲ್ಲಿ ಭಾರತ ಇಡುತ್ತಿರುವ ಹೆಜ್ಜೆಗಳನ್ನು ಜಗತ್ತಿಗೆ ಪರಿಚಯಿಸುವುದು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಏರ್ ಶೋ ಉದ್ಘಾಟಿಸಿದ್ದು, ಇದರ ಉದ್ದೇಶ ಹಾಗೂ ಕಳೆದ ಏಳೆಂಟು ವರ್ಷಗಳಲ್ಲಿ ರಕ್ಷಣಾ ವಲಯದಲ್ಲಿ ಭಾರತದ ಪ್ರಮುಖ ಹೆಜ್ಜೆಗುರುತುಗಳನ್ನು ವಿವರಿಸಿದರು.

ರಕ್ಷಣಾ ರಂಗದಲ್ಲಿ ಭಾರತ ಸ್ವಾವಲಂಬಿ ಆಗಬೇಕೆಂಬ ಹೆಬ್ಬಯಕೆಯನ್ನು ಸರ್ಕಾರ ಹೊಂದಿದ್ದು, ಈ ನಿಟ್ಟಿನಲ್ಲಿ ‘ಆತ್ಮನಿರ್ಭರ ಭಾರತ’ ಪರಿಕಲ್ಪನೆಯನ್ನು ಈ ಕ್ಷೇತ್ರದಲ್ಲಿಯೂ ಅಳವಡಿಸಿಕೊಂಡಿದೆ. ಬಹುತೇಕವಾಗಿ ರಕ್ಷಣಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ಭಾರತ ಈಗ ಸುಮಾರು 75 ದೇಶಗಳಿಗೆ ರಫ್ತು ಮಾಡುತ್ತಿರುವುದು ಗಮನಾರ್ಹ ಬೆಳವಣಿಗೆ. ‘2024-25ರ ವೇಳೆಗೆ ದೇಶದಿಂದ 5 ಬಿಲಿಯನ್ ಡಾಲರ್ ಮೌಲ್ಯದ ರಕ್ಷಣಾ ಸಾಮಗ್ರಿಗಳನ್ನು ರಫ್ತು ಮಾಡುವ ಉದ್ದೇಶ ಹೊಂದಲಾಗಿದೆ’ಎಂದು ಪ್ರಧಾನಿ ತಿಳಿಸಿದ್ದಾರೆ. ವಿದೇಶಿ ಕಂಪನಿಗಳ ಜತೆ ಒಡಂಬಡಿಕೆ ಮಾಡಿಕೊಳ್ಳುವಾಗ ಸಹ, ರಕ್ಷಣಾ ಸಾಮಗ್ರಿಗಳ ಉತ್ಪಾದನೆಯ ಕೆಲ ಭಾಗವನ್ನು ಭಾರತದಲ್ಲಿಯೇ ತಯಾರು ಮಾಡಬೇಕೆಂಬ ಷರತ್ತು ವಿಧಿಸಲಾಗುತ್ತಿರುವುದರಿಂದಾಗಿ, ಉತ್ಪಾದನೆ ಪ್ರಮಾಣ ಹೆಚ್ಚಲು ಅನುಕೂಲವಾಗುತ್ತದೆ. ಆರ್ಥಿಕವಾಗಿಯೂ ಲಾಭಕರ. ಹಾಗಂತ ಇದು ಒಂದೆರಡು ವರ್ಷಗಳಲ್ಲಿಯೇ ನೆರವೇರುವ ಗುರಿಯಲ್ಲ. ಈ ಹಾದಿ ದೀರ್ಘವಾಗಿದೆ.

ರಕ್ಷಣಾ ಸಾಮಗ್ರಿಗಳನ್ನು ಭಾರತಕ್ಕೆ ಕಳಿಸುವಲ್ಲಿ ರಷ್ಯಾವು ಪ್ರಮುಖ ದೇಶವಾಗಿದ್ದು, ಕಳೆದ ಐದು ವರ್ಷಗಳಲ್ಲಿ ಆ ದೇಶಕ್ಕೆ ಪಾವತಿಸಿದ ಮೊತ್ತ ಒಂದು ಲಕ್ಷ ಕೋಟಿ ರೂ.ಗಿಂತ ಹೆಚ್ಚು ಎಂಬುದು ಈ ಮಾತಿಗೆ ಸಾಕ್ಷಿ. ಯೂಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ್ದರಿಂದಾಗಿ, ರಷ್ಯಾದಿಂದ ತೈಲ ಸೇರಿದಂತೆ ವಿವಿಧ ವಸ್ತುಗಳನ್ನು ಆಮದು ಮಾಡಿಕೊಳ್ಳಬಾರದೆಂದು ಅಮೆರಿಕವು ವಿಶ್ವದೇಶಗಳ ಮೇಲೆ ಒತ್ತಡ ಹೇರಿದೆ. ಭಾರತವು ರಷ್ಯಾ-ಯೂಕ್ರೇನ್ ಸಮರ ವಿಚಾರದಲ್ಲಿ ತಟಸ್ಥ ನಿಲುವು ತಾಳಿದ್ದು, ರಷ್ಯಾದಿಂದ ತೈಲ ಹಾಗೂ ರಕ್ಷಣಾ ಸಾಮಗ್ರಿಗಳ ಆಮದನ್ನು ಮುಂದುವರಿಸಿದೆ. ಇಂದಿನ ಜಾಗತಿಕ ಭೂ-ಸಾಮರಿಕ ವಾತಾವರಣದಲ್ಲಿ ಸಂಪೂರ್ಣ ಆಮದು ಸ್ಥಗಿತ ಕಷ್ಟವಾದರೂ, ಈ ದಿಕ್ಕಿನಲ್ಲಿನ ಚಲನೆ ನಿರ್ಣಾಯಕ ಪಾತ್ರವಹಿಸಬಲ್ಲದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net