

ಬೆಂಗಳೂರು: ರಾಹುಲ್ ಗಾಂಧಿ ಅಪೇಕ್ಷೆ ಮೇರೆಗೆ ಕೆಪಿಸಿಸಿ ಅಧ್ಯಕ್ಷರಾಗಿ ನೇಮಕಗೊಂಡಿದ್ದ ದಿನೇಶ್ ಗುಂಡೂರಾವ್ ಅವಧಿಯಲ್ಲಿ ನಡೆದ ಬೆಳವಣಿಗೆ ಹಿನ್ನೆಲೆ ನಿಯೋಜಿತ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರಂಭ ದಿಂದಲೇ ಎಚ್ಚರಿಕೆ ಹೆಜ್ಜೆ ಇಡಲಾರಂಭಿಸಿದ್ದಾರೆ. ಪಕ್ಷದ ಅಧ್ಯಕ್ಷರಾಗಿ ಹೆಸರು ಘೋಷಣೆಯಾಗುತ್ತಿದ್ದಂತೆ ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಶನಿವಾರ ಬೆಳಗ್ಗೆ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮನೆಗೆ ಭೇಟಿಕೊಟ್ಟು ಸಹಕಾರ ನೀಡುವಂತೆ ಕೋರಿದರು. ಈ ವೇಳೆ ಸಣ್ಣ ರಾಜಕೀಯ ಚರ್ಚೆಗಳು ನಡೆದಿದ್ದು, ಉಭಯ ನಾಯಕರು ಸಲಹೆ ಸೂಚನೆ ನೀಡಿದ್ದಾರೆ. ಸಂಜೆ ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ದಿನೇಶ್ ಗುಂಡೂರಾವ್ ಮನೆಗೂ ಭೇಟಿ ಕೊಟ್ಟರು.
ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ, ಎಲ್ಲರನ್ನ ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತೇನೆ. ಹಿರಿಯರ ಅನುಭವ- ಮಾರ್ಗದರ್ಶನ, ಯುವಕರ ಸ್ಪೂರ್ತಿ, ಮಹಿಳೆಯರ ಸಂಘಟನಾ ಶಕ್ತಿ ಅತ್ಯಗತ್ಯ, ಇಲ್ಲದಿದ್ದರೆ ಪಕ್ಷವನ್ನು ಸದೃಢವಾಗಿ ಸಂಘಟಿಸಲು ಸಾಧ್ಯವಿಲ್ಲ. ಹಾಗಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುತ್ತೇನೆ ಎಂದರು. ದಿನೇಶ್ ಗುಂಡೂರಾವ್ರನ್ನು ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿ ಹಿರಿಯ ನಾಯಕರಲ್ಲಿ ಬಹುತೇಕರು ಅಸಹಕಾರ ನೀಡಿದ್ದರು. ಹೈಕಮಾಂಡ್ಗೂ ದೂರು ನೀಡಿದ್ದರು. ಈ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಿದ್ದ ಡಿಕೆಶಿ, ಪ್ರಮುಖರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆಸಿದ್ದಾರೆ.