

ಸಿಡ್ನಿ: ಕಾಂಗರೂ ನಾಡಿನಲ್ಲಿ ಕರೊನಾ ಭೀತಿಯಿಂದಾಗಿ ಎಲ್ಲ ಕ್ರೀಡಾ ಚಟುವಟಿಕೆಗಳಿಂದ ಪ್ರೇಕ್ಷಕರಿಗೆ ನಿಷೇಧ ಹೇರಿರುವುದರಿಂದ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯ ಶುಕ್ರವಾರ ಖಾಲಿ ಕ್ರೀಡಾಂಗಣದಲ್ಲಿ ನಡೆಯಿತು. ಸರ್ವಾಂಗೀಣ ನಿರ್ವಹಣೆ ತೋರಿದ ಆಸ್ಟ್ರೇಲಿಯಾ ತಂಡ 71 ರನ್ಗಳಿಂದ ಸುಲಭವಾಗಿ ಪಂದ್ಯ ಜಯಿಸಿ, 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಎಸ್ಸಿಜಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸೀಸ್, 7 ವಿಕೆಟ್ಗೆ 258 ರನ್ ಪೇರಿಸಿತು. ಪ್ರತಿಯಾಗಿ ಕಿವೀಸ್ ತಂಡ, 41 ಓವರ್ಗಳಲ್ಲಿ 187 ರನ್ಗೆ ಆಲೌಟ್ ಆಯಿತು. ಇದು ಕರೊನಾ ಭೀತಿಯಿಂದಾಗಿ ಖಾಲಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವಾಗಿದೆ. ಸರಣಿಯ 2ನೇ ಪಂದ್ಯ ಭಾನುವಾರ ಇದೇ ಮೈದಾನದಲ್ಲಿ ನಡೆಯಲಿದೆ.
ಆಸ್ಟ್ರೇಲಿಯಾ: 7 ವಿಕೆಟ್ಗೆ 258 (ವಾರ್ನರ್ 67, ಫಿಂಚ್ 60, ಸ್ಮಿತ್ 14, ಲಬುಶೇನ್ 56, ಮಿಚೆಲ್ ಮಾರ್ಷ್ 27, ಸೋಧಿ 51ಕ್ಕೆ 3, ಸ್ಯಾಂಟ್ನರ್ 34ಕ್ಕೆ 2, ಫರ್ಗ್ಯುಸನ್ 60ಕ್ಕೆ 2), ನ್ಯೂಜಿಲೆಂಡ್: 41 ಓವರ್ಗಳಲ್ಲಿ 187 (ಗುಪ್ಟಿಲ್ 40, ನಿಕೋಲ್ಸ್ 10, ವಿಲಿಯಮ್ಸನ್ 19, ಟೇಲರ್ 4, ಲಾಥಮ್ 38, ಗ್ರಾಂಡ್ಹೋಮ್ 25, ನೀಶಾಮ್ 8, ಮಿಚೆಲ್ ಮಾರ್ಷ್ 29ಕ್ಕೆ 3, ಕಮ್ಮಿನ್ಸ್ 25ಕ್ಕೆ 3, ಹ್ಯಾಸಲ್ವುಡ್ 37ಕ್ಕೆ 2, ಜಂಪಾ 50ಕ್ಕೆ 2). ಪಂದ್ಯಶ್ರೇಷ್ಠ: ಮಿಚೆಲ್ ಮಾರ್ಷ್.
ಹ್ಯಾಂಡ್ಶೇಕ್ ಇಲ್ಲ
ಕರೊನಾ ಮುನ್ನೆಚ್ಚರಿಕೆಯ ಕ್ರಮವಾಗಿ ಖಾಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆಸೀಸ್-ಕಿವೀಸ್ ಕ್ರಿಕೆಟಿಗರು ಪಂದ್ಯದ ಬಳಿಕ ಹ್ಯಾಂಡ್ ಶೇಕ್ ಮಾಡಲಿಲ್ಲ. ಈ ಮುನ್ನ ಪಂದ್ಯದಲ್ಲಿ ವಿಕೆಟ್ ಬಿದ್ದಾಗ ಸಂಭ್ರಮಿಸುವಾಗಲೂ ಆಟಗಾರರು ಪರಸ್ಪರ ರ್ಸ³ಸಲಿಲ್ಲ. ಬದಲಾಗಿ ಕಾಲನ್ನು ಪರಸ್ಪರ ತಾಗಿಸಿ ಸಂಭ್ರಮಿಸಿದರು. ಸಿಡ್ನಿ ಏಕದಿನ ಪಂದ್ಯದ ಟಿಕೆಟ್ ಖರೀದಿಸಿರುವವರಿಗೆ ಸಂಪೂರ್ಣ ಹಣವನ್ನು ವಾಪಸ್ ನೀಡುವುದಾಗಿ ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ. ಆಸೀಸ್ನಲ್ಲಿ ಇದುವರೆಗೆ 150ಕ್ಕೂ ಅಧಿಕ ಕರೊನಾ ಪ್ರಕರಣಗಳು ಪತ್ತೆಯಾಗಿವೆ.
ಕರೊನಾ ಭೀತಿಯಿಂದ ಪಾರಾದ ಆಸೀಸ್ ಕ್ರಿಕೆಟಿಗ ರಿಚರ್ಡ್ಸನ್!
ಸಿಡ್ನಿ: ಆಸ್ಟ್ರೇಲಿಯಾದ ವೇಗದ ಬೌಲರ್ ಕೇನ್ ರಿಚರ್ಡ್ಸನ್ ಅನಾರೋಗ್ಯದಿಂದ ಬಳಲಿದ ಕಾರಣ ಅವರಿಗೆ ಕರೊನಾ ಹರಡಿರುವ ಬಗ್ಗೆ ಶಂಕೆ ಮೂಡಿತ್ತು. ಆದರೆ ಅವರ ಪರೀಕ್ಷಾ ವರದಿಯಲ್ಲಿ ಸೋಂಕು ಇಲ್ಲದಿರುವುದು ದೃಢಪಟ್ಟಿದ್ದು, ಕರೊನಾ ಭೀತಿಯಿಂದ ಮುಕ್ತಿ ದೊರೆತಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ. ಕೇನ್ ರಿಚರ್ಡ್ಸನ್ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಈ ವಾರವಷ್ಟೇ ವಾಪಸಾಗಿದ್ದು, ಶೀತಬಾಧೆ ಮತ್ತು ಗಂಟಲು ಬೇನೆಯಿಂದ ಬಳಲುತ್ತಿದ್ದರು. ಇದರಿಂದಾಗಿ ಆಸೀಸ್ ತಂಡದ ವೈದ್ಯಕೀಯ ಸಿಬ್ಬಂದಿ ಮುನ್ನೆಚ್ಚರಿಕೆಯ ಕ್ರಮವಾಗಿ ಅವರನ್ನು ಕೋವಿಡ್-19 ಪರೀಕ್ಷೆಗೆ ಕಳುಹಿಸಿದ್ದರು. ಆದರೆ ಪರೀಕ್ಷಾ ವರದಿಯಲ್ಲಿ ನೆಗೆಟಿವ್ ಬಂದಿದ್ದು, ಅದರ ಬೆನ್ನಲ್ಲೇ ಅವರನ್ನು ಹೋಟೆಲ್ ರೂಮ್ ಗೃಹಬಂಧನದಿಂದ ಬಿಡುಗಡೆಗೊಳಿಸಲಾಗಿದೆ ಮತ್ತು ಸಿಡ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯ ಆಡುತ್ತಿದ್ದ ಆಸೀಸ್ ತಂಡವನ್ನು ಕೂಡಿಕೊಂಡಿದ್ದಾರೆ. ಈ ಮುನ್ನ ಅವರ ಬದಲಿಗೆ ಸೀನ್ ಅಬೋಟ್ ಅವರನ್ನು ಬದಲಿ ಆಟಗಾರರಾಗಿ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. 29 ವರ್ಷದ ಕೇನ್ ರಿಚರ್ಡ್ಸನ್ ಐಪಿಎಲ್ನಲ್ಲಿ ಆರ್ಸಿಬಿ ತಂಡದ ಪರ ಆಡಬೇಕಿದೆ.
ಚೆಂಡು ಹುಡುಕಲು ಫೀಲ್ಡರ್ಗಳ ಪರದಾಟ!
ಸಾಮಾನ್ಯವಾಗಿ ಪಂದ್ಯದಲ್ಲಿ ಸಿಕ್ಸರ್ ಸಿಡಿದ ಚೆಂಡು ಗ್ಯಾಲರಿ ಸೇರಿದಾಗ ಪ್ರೇಕ್ಷಕರೇ ಚೆಂಡನ್ನು ಹೆಕ್ಕಿ ಹಿಂದಿರುಗಿಸುತ್ತಾರೆ. ಆದರೆ ಆಸೀಸ್-ಕಿವೀಸ್ ಏಕದಿನಕ್ಕೆ ಪ್ರೇಕ್ಷಕರಿಲ್ಲದ ಕಾರಣ, ಸಿಕ್ಸರ್ ಸಿಡಿದಾಗ ಆಟಗಾರರೇ ಗ್ಯಾಲರಿಗೆ ಹೋಗಿ ಚೆಂಡು ಹುಡುಕಲು ಪರದಾಡಬೇಕಾಯಿತು. ಇಡೀ ಕ್ರೀಡಾಂಗಣದಲ್ಲಿ ಇದ್ದುದು ಒಬ್ಬನೇ ಪ್ರೇಕ್ಷಕ. ಅದುವೇ ಸಿಡ್ನಿ ಕ್ರೀಡಾಂಗಣದ ಪ್ರಸಿದ್ಧ ಪ್ರೇಕ್ಷಕ ಸ್ಟೀಫನ್ ಹರಾಲ್ಡ್ ಗಾಸ್ಕೋನ್ ಪ್ರತಿಮೆ!