ಅವಕಾಶದ ನಿರೀಕ್ಷಣೆ, ಶಿವಕುಮಾರ್ ಸುತ್ತ ಪ್ರದಕ್ಷಿಣೆ: ನೂತನ ಅಧ್ಯಕ್ಷರ ತಂಡ ಸೇರಲು ಅತ್ಯುತ್ಸಾಹ

DKS
Published on

ಬೆಂಗಳೂರು: ಎರಡು ದೊಡ್ಡ ಚುನಾವಣೆಗಳ ಸೋಲಿನಿಂದ ನೆಲ ಕಚ್ಚಿದ್ದ ರಾಜ್ಯ ಕಾಂಗ್ರೆಸ್​ನಲ್ಲೀಗ ಕೊಂಚ ಚೇತೋಹಾರಿ ಬೆಳವಣಿಗೆ ಕಾಣಿಸಿದೆ. ಕೆಪಿಸಿಸಿಗೆ ಡಿ.ಕೆ.ಶಿವಕುಮಾರ್ ಅಧ್ಯಕ್ಷರು ಎಂದು ಹೆಸರು ಘೋಷಣೆಯಾಗುತ್ತಿದ್ದಂತೆ ಪಕ್ಷದಲ್ಲಿ ಚಟುವಟಿಕೆ ಗರಿಗೆದರಿದೆ. ಶೀಘ್ರವೇ ಪದಾಧಿಕಾರಿಗಳ ನೇಮಕ, ವಿವಿಧ ಘಟಕಗಳ ಪುನಾರಚನೆ ಆಗುವ ಕಾರಣ ಈ ಅವಕಾಶಕ್ಕೆ ಕಾಯ್ದಿರುವವರು ಹೊಸ ಅಧ್ಯಕ್ಷರ ಸುತ್ತಮುತ್ತ ಗಿರಕಿ ಹೊಡೆಯಲಾರಂಭಿಸಿದ್ದಾರೆ. ಜತೆಗೆ ಅವಕಾಶ ಪಡೆದುಕೊಳ್ಳಲು ವಿವಿಧ ಮಾರ್ಗಗಳ ಮೂಲಕ ಒತ್ತಡ ತರಲು ಮುಂದಾಗಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಪಕ್ಷ ಮುಗ್ಗರಿಸಿದ ಬೆನ್ನಲ್ಲೇ 2019ರ ಜೂ.19ರಂದು ಎಐಸಿಸಿ ದುಬಾರಿ ನಿರ್ಧಾರ ತೆಗೆದುಕೊಂಡಿತ್ತು. ಪಕ್ಷದ ಅಧ್ಯಕ್ಷ, ಕಾರ್ಯಾಧ್ಯಕ್ಷರನ್ನು ಹೊರತುಪಡಿಸಿ ಉಳಿದ ಪದಾಧಿಕಾರಿಗಳನ್ನು ಜವಾಬ್ದಾರಿಯಿಂದ ಮುಕ್ತಗೊಳಿಸಿತ್ತು. ಜಿ.ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾಗಿದ್ದ ಅವಧಿಯಿಂದಲೂ ಪದಾಧಿಕಾರಿಯಾಗಿದ್ದವರು 2019ರವರೆಗೂ ಮುಂದುವರಿದಿದ್ದರು. ಯಾರನ್ನೂ ಕೈಬಿಡದೆ ಹೊಸದಾಗಿ ಸೇರಿಸಿಕೊಂಡ ಪರಿಣಾಮ ಪದಾಧಿಕಾರಿ ಸಂಖ್ಯೆ 450ಕ್ಕಿಂತ ಹೆಚ್ಚಿತ್ತು. ಇವರಲ್ಲಿ ಮುಕ್ಕಾಲುಪಾಲು ಸಕ್ರಿಯರಾಗಿರಲಿಲ್ಲ. ‘ವಿಸಿಟಿಂಗ್ ಕಾರ್ಡ್’ ಪದಾಧಿಕಾರಿಗಳೇ ಹಲವರಿದ್ದರು. ಪಕ್ಷದ ಯಾವುದೇ ಜವಾಬ್ದಾರಿಯನ್ನೂ ತೆಗೆದುಕೊಳ್ಳುತ್ತಿರಲಿಲ್ಲ. ಈ ಕಾರಣಕ್ಕೆ ಎಲ್ಲರಿಗೂ ಸಾರಾಸಗಟಾಗಿ ಗೇಟ್​ಪಾಸ್ ನೀಡಲಾಗಿತ್ತು. 2023ರ ವಿಧಾನಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಡಿ.ಕೆ.ಶಿವಕುಮಾರ್ ತಂಡ ಕಟ್ಟಲಿದ್ದು, ಈ ತಂಡದಲ್ಲಿ ತಾವಿರಬೇಕೆಂಬ ಆಸೆ ಹೊತ್ತವರು ಈ ಪ್ರಯತ್ನದಲ್ಲಿ ತೊಡಗಿದ್ದಾರೆ.

ರಾಜ್ಯ ಘಟಕದಲ್ಲಿ ಅಧ್ಯಕ್ಷ, ಕಾರ್ಯಾಧ್ಯಕ್ಷ ಹುದ್ದೆ ಹೊರತಾಗಿ ಉಪಾಧ್ಯಕ್ಷ, ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಹುದ್ದೆಗಳಿವೆ. ಈ ಮೂರು ಹುದ್ದೆಗಳಿಗೆ ನೂರು ಸಂಖ್ಯೆಯೊಳಗೆ ನೇಮಕ ಮಾಡಿಕೊಳ್ಳಬೇಕೆಂಬುದು ಎಐಸಿಸಿ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಇಚ್ಛೆಯಾಗಿತ್ತು. ಈಗಲೂ ಅದೇ ಪ್ರಕಾರ ತೀರ್ವನವಾದರೆ, ಸಾಕಷ್ಟು ಪೈಪೋಟಿ ಏರ್ಪಡಲಿದೆ. ಸಹಜವಾಗಿ ಡಿಕೆಶಿ ಸದಾ ತಮ್ಮೊಂದಿಗೆ ಗುರುತಿಸಿಕೊಂಡೇ ಬಂದಿರುವ ಯುವಕರಿಗೆ ಮಣೆ ಹಾಕುತ್ತಾರೆ. ಪಕ್ಷದ ವಿವಿಧ ಜವಾಬ್ದಾರಿ ನಿಭಾಯಿಸಿರುವ ಹಿರಿಯ ನಾಯಕರು ತಮ್ಮ ಬೆಂಬಲಿಗರನ್ನು ಪದಾಧಿಕಾರಿ ವೃಂದಕ್ಕೆ ತಳ್ಳಲು ಪ್ರಯತ್ನ ಮಾಡುತ್ತಾರೆ. ಈ ಸಂದರ್ಭದಲ್ಲಿ ಒಂದಷ್ಟು ತಿಕ್ಕಾಟದ ಸಾಧ್ಯತೆಯೂ ಇದೆ.

ಪೈಪೋಟಿ ಏಕೆ?: ಕೆಪಿಸಿಸಿ ಪದಾಧಿಕಾರಿಯಾದರೆ ಪಕ್ಷದ ಜವಾಬ್ದಾರಿ ನಿಭಾಯಿಸಿದ ಆಧಾರದಲ್ಲಿ ಭವಿಷ್ಯದಲ್ಲಿ ಉನ್ನತ ಸ್ಥಾನಮಾನ, ಚುನಾವಣೆ ಸಂದರ್ಭ ಟಿಕೆಟ್ ಪಡೆಯಲು ಮೆರಿಟ್ ಸಿಗುವ ಜತೆಗೆ ತಮ್ಮ ಭಾಗದಲ್ಲಿ ಮುಂಚೂಣಿ ನಾಯಕರಾಗಿ ಕಾಣಿಸಿಕೊಳ್ಳಲು ಅವಕಾಶವಿರುತ್ತದೆ. ಒಂದೊಮ್ಮೆ ಸರ್ಕಾರ ರಚನೆಯಾದರೆ ನಿಗಮ- ಮಂಡಳಿಗಳಲ್ಲಿ ಸ್ಥಾನಗಿಟ್ಟಿಸಲು, ಶಿಫಾರಸುಗಳನ್ನು ಮಾಡಲು ಅನುಕೂಲವಾಗುತ್ತದೆ. ಈ ಕಾರಣಕ್ಕೆ 1:5 ಪ್ರಮಾಣದಲ್ಲಿ ಪದಾಧಿಕಾರಿ ಹುದ್ದೆಗೆ ಒತ್ತಡ ಉಂಟಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಇನ್ನು ಹೊಸ ಅಧ್ಯಕ್ಷರು ತಮ್ಮ ಅನುಕೂಲಕ್ಕೆ ತಕ್ಕಂತೆ ಮುಂಚೂಣಿ ಘಟಕಗಳು, ವಿವಿಧ ಕೋಶಗಳ ಪುನಾರಚನೆಗೆ ಕೈಹಾಕುವುದು ಸಹಜ. ಒಟ್ಟಾರೆ ಈ ನಿರೀಕ್ಷಿತ ಬದಲಾವಣೆ ಎದುರು ನೋಡುತ್ತಿರುವ ಮುಖಂಡರು ಪಕ್ಷದ ಜವಾಬ್ದಾರಿ ತೆಗೆದುಕೊಳ್ಳಲು ಅತ್ಯುತ್ಸಾಹ ತೋರಿಸಿ ಡಿ.ಕೆ.ಶಿವಕುಮಾರ್ ಮನವೊಲಿಸಲು ತರಹವೇರಿಯಾಗಿ ಪ್ರಯತ್ನ ಆರಂಭಿಸಿದ್ದಾರೆ.

ನಿಯೋಜಿತ ಅಧ್ಯಕ್ಷರ ಪದಗ್ರಹಣ ಸದ್ಯಕ್ಕಿಲ್ಲ?

ಕೆಪಿಸಿಸಿ ಅಧ್ಯಕ್ಷ, ಕಾರ್ಯಾಧ್ಯಕ್ಷರ ಪದಗ್ರಹಣ ಸದ್ಯಕ್ಕೆ ಆಗುವ ಲಕ್ಷಣ ಕಾಣಿಸುತ್ತಿಲ್ಲ. ಪದಗ್ರಹಣಕ್ಕೆ ಮುನ್ನ ನವದೆಹಲಿಗೆ ತೆರಳಿ ಕೃತಜ್ಞತೆ ಸಲ್ಲಿಸಲು ಡಿಕೆಶಿ ನಿರ್ಧರಿಸಿದ್ದಾರೆ. ಆದರೆ, ಎಐಸಿಸಿ ನಾಯಕರು ಮಧ್ಯಪ್ರದೇಶ ಸರ್ಕಾರ ಉಳಿಸಿಕೊಳ್ಳುವ ಒತ್ತಡದಲ್ಲಿದ್ದಾರೆ. ಜತೆಗೆ ಕರೋನಾ ಕಾರಣದಿಂದ ತಕ್ಷಣಕ್ಕಂತೂ ಪದಗ್ರಹಣ ಕಾರ್ಯಕ್ರಮ ನಡೆಯುವುದು ಅನುಮಾನ. ತುಮಕೂರಿನ ನೊಣವಿನಕೆರೆ ಮಠಕ್ಕೆ ಭೇಟಿ ನೀಡಿದ ನಂತರ ಮುಂದಿನ ಎಲ್ಲ ನಿರ್ಧಾರಗಳನ್ನು ಕೈಗೊಳ್ಳಲಿದ್ದಾರೆ ಎಂದು ಶಿವಕುಮಾರ್ ಆಪ್ತಮೂಲಗಳು ಖಚಿತಪಡಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net