

ತಿ.ನರಸೀಪುರ: ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಬುಧವಾರ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ನಿರ್ಧರಿಸಲಾಯಿತು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಆಚರಣೆ ಬಗ್ಗೆ ಚರ್ಚಿಸಲಾಯಿತು. ಆ.20ರಂದು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದಲೇ ವೇದಿಕೆ ಕಾರ್ಯಕ್ರಮ ಆಯೋಜಿಸಿ, ಕಳೆದ ಶೈಕ್ಷಣಿಕ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ, ಡಿ.ದೇವರಾಜ ಅರಸು ಅವರ 109ನೇ ಜಯಂತಿ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಸುರೇಶಾಚಾರ್ ಮಾತನಾಡಿ, ಹಿಂದುಳಿದ ವರ್ಗಗಳ ಇಲಾಖೆ ಸಹಭಾಗಿತ್ವದಲ್ಲಿ ಸಂಘ ಸಂಸ್ಥೆಗಳ ಸಲಹೆ, ಸಹಕಾರ ಪಡೆದು ಆ.20ರಂದು ಡಿ.ದೇವರಾಜ ಅರಸು ಅವರ ಜಯಂತಿಯನ್ನು ತಾಲೂಕು ಆಡಳಿತ ವತಿಯಿಂದ ಆಚರಿಸಲಾಗುವುದು ತಿಳಿಸಿದರು.
ತಾ.ಪಂ ಕಾರ್ಯನಿರ್ವಹಣಾಧಿಕಾರಿ ಸಿ.ಕೃಷ್ಣ, ಬಿಇಒ ಶಿವಮೂರ್ತಿ, ಸೆಸ್ಕ್ ಎಇಇ ವೀರೇಶ್, ಬಿಆರ್‌ಸಿ ಎಸ್.ನಾಗೇಶ್, ಹಿಂದುಳಿದ ವರ್ಗಗಳ ಇಲಾಖೆಯ ವಿಸ್ತರಣಾಧಿಕಾರಿ ರಾಜಣ್ಣ, ಪುರಸಭೆ ಮುಖ್ಯಧಿಕಾರಿ ಬಿ.ಕೆ.ವಸಂತಕುಮಾರಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸುಹಾಸಿನಿ, ಮುಖಂಡ ಕರೋಹಟ್ಟಿ ಮಹದೇವಯ್ಯ, ಪುಟ್ಟಮಲ್ಲಯ್ಯ, ಬಿ.ಮನ್ಸೂರ್ ಅಲಿ, ಅಕ್ಬರ್ ಪಾಷ ಇತರರು ಇದ್ದರು.