ಪಾಕಿಸ್ತಾನದ ಸುಪ್ರೀಂ ಕೋರ್ಟ್‌ನಲ್ಲಿ ಸಿಲಿಂಡರ್ ಸ್ಫೋಟ: 12 ಜನರಿಗೆ ಗಾಯ, ನಲುಗಿದ ಕಟ್ಟಡ | Cylinder Blast

Cylinder Blast
Published on

ಇಸ್ಲಾಮಾಬಾದ್​: ಪಾಕಿಸ್ತಾನದ ಸುಪ್ರೀಂ ಕೋರ್ಟ್‌ನ ನೆಲಮಾಳಿಗೆಯಲ್ಲಿ ಗ್ಯಾಸ್ ಸಿಲಿಂಡರ್ (Cylinder Blast) ಸ್ಫೋಟಗೊಂಡಿದೆ. ಈ ಘಟನೆಯಲ್ಲಿ ಕನಿಷ್ಠ 12 ಜನರು ಗಾಯಗೊಂಡಿದ್ದಾರೆ ಎಂದು ಮಂಗಳವಾರ (ನ.4) ವರದಿಗಳು ಉಲ್ಲೇಖಿಸಿವೆ.

ವರದಿಗಳ ಪ್ರಕಾರ, ಸುಪ್ರೀಂ ಕೋರ್ಟ್ ಕಟ್ಟಡದ ಕೇಂದ್ರ ಹವಾನಿಯಂತ್ರಣ ವ್ಯವಸ್ಥೆಯ ದುರಸ್ತಿ ಕಾರ್ಯದ ಸಮಯದಲ್ಲಿ ಸ್ಫೋಟ ಸಂಭವಿಸಿದೆ ಎಂದು ಮೂಲ ತಿಳಿಸಿವೆ. ಅಲ್ಲದೆ, ಹಠಾತ್ ಸ್ಫೋಟವು ಕಟ್ಟಡದಲ್ಲಿ ಅವ್ಯವಸ್ಥೆಗೆ ಕಾರಣವಾಗಿದ್ದು, ಸ್ಫೋಟದ ಪರಿಣಾಮವು ಸುಪ್ರೀಂ ಕೋರ್ಟ್‌ನ ಆವರಣವನ್ನು ನಡುಗಿಸಿದೆ. ಶಬ್ದ ಕೇಳುತ್ತಿದ್ದಂತೆ ಸ್ಥಳದಲ್ಲಿದ್ದ ವಕೀಲರು, ನ್ಯಾಯಾಧೀಶರು ಮತ್ತು ಇತರ ಸಿಬ್ಬಂದಿ ಹೊರಗೆ ಓಡಿಹೋಗಿದ್ದಾರೆ.

ಈ ಸ್ಫೋಟದಿಂದಾಗಿ ನ್ಯಾಯಾಲಯದ ಕೊಠಡಿ ಸಂಖ್ಯೆ 6ಕ್ಕೆ ದೊಡ್ಡ ಹಾನಿಯಾಗಿದೆ ಎಂದು ವರದಿಯಾಗಿದೆ. ಪಾಕ್​ ಮೂಲದ SAMAA ಟಿವಿ ಪ್ರಕಾರ, ನ್ಯಾಯಮೂರ್ತಿಗಳಾದ ಅಲಿ ಬಕರ್ ನಜಾಫಿ ಮತ್ತು ಶಹಜಾದ್ ಮಲಿಕ್ ಸ್ಫೋಟದ ಮೊದಲು ಪ್ರಕರಣವೊಂದನ್ನು ವಿಚಾರಣೆ ನಡೆಸುತ್ತಿದ್ದರು.

ನ್ಯಾಯಾಲಯದ ಸಂಕೀರ್ಣದ ಕೆಳ ಮಹಡಿಗಳಲ್ಲಿ ಜೋರಾದ ಸ್ಫೋಟದ ಸದ್ದು ಕೇಳಿಸಿದ್ದು, ಇದು ತುರ್ತು ಕ್ರಮಗಳನ್ನು ತ್ವರಿತವಾಗಿ ಸಕ್ರಿಯಗೊಳಿಸಲು ಕಾರಣವಾಗಿದೆ. ಅಲ್ಲದೆ, ಪಾಕ್​ ಭದ್ರತಾ ಪಡೆಗಳು ಮತ್ತು ರಕ್ಷಣಾ ತಂಡಗಳು ಕೆಲವೇ ನಿಮಿಷಗಳಲ್ಲಿ ಸುಪ್ರೀಂ ಕೋರ್ಟ್‌ಗೆ ತಲುಪಿದವು ಎಂದು ವರದಿಯಾಗಿದೆ.

ಈ ಘಟನೆಯಲ್ಲಿ ನೆಲಮಾಳಿಗೆಯಲ್ಲಿರುವ ಹವಾನಿಯಂತ್ರಣ ಸ್ಥಾವರದ ಬಳಿ ಕೆಲಸ ಮಾಡುತ್ತಿದ್ದ ಗಾಯಾಳುಗಳನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕೆಲಸದವರು ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net