ರಾಹುಲ್ ಗಾಂಧಿ ಒಳನುಸುಳುಕೋರರ ರಕ್ಷಣೆ ಯಾತ್ರೆ ನಡೆಸುತ್ತಿದ್ದಾರೆ: ಅಮಿತ್ ಷಾ ಆರೋಪ | Amit Shah

Amit Shah
Published on

ಪಾಟ್ನಾ: ಬಿಹಾರದ ಮಾಜಿ ಮುಖ್ಯಮಂತ್ರಿ ಆರ್​ಜೆಡಿ ನಾಯಕ ಲಾಲು ಯಾದವ್ ಮತ್ತು ರಾಹುಲ್ ಗಾಂಧಿ ಒಳನುಸುಳುಕೋರರನ್ನು ರಕ್ಷಿಸಲು ಬಯಸುತ್ತಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್​ ಷಾ(Amit Shah) ಮಂಗಳವಾರ (ನ.4) ರಂದು ಆರೋಪಿಸಿದ್ದಾರೆ.

ಈ ಬಗ್ಗೆ ದರ್ಭಾಂಗಾದ ಜಲೇಯಲ್ಲಿ ನಡೆದ ಬೃಹತ್ ಸಾರ್ವಜನಿಕ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಷಾ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎರಡೂವರೆ ತಿಂಗಳ ಹಿಂದೆ ಬಿಹಾರಕ್ಕೆ ಭೇಟಿ ನೀಡಿದ್ದರು ಮತ್ತು ಸೇವ್ ಇನ್ಫಿಲ್ಟ್ರೇಟರ್ಸ್ ಯಾತ್ರೆಯನ್ನು ಕೈಗೊಂಡಿದ್ದರು. ಅಲ್ಲದೆ, ಮಾಜಿ ಸಿಎಂ ಲಾಲು ಯಾದವ್ ಮತ್ತು ರಾಹುಲ್ ಗಾಂಧಿ ಒಳನುಸುಳುಕೋರರನ್ನು ರಕ್ಷಿಸಲು ಬಯಸುತ್ತಾರೆ. ಅದರೆ ಬಿಜೆಪಿಯು ಒಳನುಸುಳುಕೋರರನ್ನು ದೇಶದಿಂದ ಒಬ್ಬೊಬ್ಬರಾಗಿ ಗುರುತಿಸಿ ತೆಗೆದುಹಾಕುತ್ತದೆ ಎಂದು ವಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಈಗಾಗಲೇ ಬಿಹಾರ ಲಾಲು ಪ್ರಸಾದ್ ಯಾದವ್ ಮತ್ತು ರಾಬ್ರಿ ದೇವಿ ನೇತೃತ್ವದಲ್ಲಿ 15 ವರ್ಷಗಳ ಜಂಗಲ್ ರಾಜ್ ಅನ್ನು ಕಂಡಿದೆ. ಇದೇ ಮಾದರಿಯನ್ನು ಈಗ ಮತ್ತೆ ಬಳಸಲಾಗುತ್ತಿದೆ. ಎನ್‌ಡಿಎಯ ಆದ್ಯತೆಯೆಂದರೆ ಜಂಗಲ್ ರಾಜ್ ಮರಳುವುದನ್ನು ನಿಲ್ಲಿಸುವುದು ಮತ್ತು ದರ್ಭಾಂಗಾವನ್ನು ಅಭಿವೃದ್ಧಿ ಹೊಂದಿದ ಜಿಲ್ಲೆಯನ್ನಾಗಿ ಮಾಡುವತ್ತ ಕೆಲಸ ಮಾಡುವುದು ಎಂದು ಷಾ ಭರವಸೆ ನೀಡಿದ್ದಾರೆ.

ಲಾಲು ಹಗರಣಗಳ ರಾಜ ಎಂದ ಷಾ

ಬಿಹಾರವನ್ನು ಅಳಿದ ಹಿಂದಿನ ಸರ್ಕಾರಗಳ ಅವಧಿಯಲ್ಲಿ ಹಲವಾರು ಹಗರಣಗಳು ಮತ್ತು ಭ್ರಷ್ಟಾಚಾರಗಳನ್ನು ಪಟ್ಟಿ ಮಾಡಿದ್ದೇವೆ. ಲಾಲು ಯಾದವ್ ಮೇವು ಹಗರಣ, ಉದ್ಯೋಗಕ್ಕಾಗಿ ಭೂಮಿ ಹಗರಣ, ಹೋಟೆಲ್ ಮಾರಾಟ ಹಗರಣ, ಬಿಟುಮೆನ್ ಹಗರಣ, ಪ್ರವಾಹ ಪರಿಹಾರ ಹಗರಣ, ನೇಮಕಾತಿ ಹಗರಣ ಮತ್ತು ಎಬಿ ರಫ್ತು ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಷಾ ಆರೋಪಿಸಿದ್ದಾರೆ. ಅಲ್ಲದೆ, ಕಾಂಗ್ರೆಸ್ ಸರ್ಕಾರವೂ 12 ಲಕ್ಷ ಕೋಟಿ ರೂ.ಗಳ ಭ್ರಷ್ಟಾಚಾರದಲ್ಲಿ ಭಾಗಿಯಾಗಿದೆ. ಮೋದಿ 11 ವರ್ಷ ಮತ್ತು ನಿತೀಶ್ ಕುಮಾರ್ 20 ವರ್ಷ ಆಡಳಿತ ನಡೆಸಿದ್ದರೂ, ಅವರ ವಿರುದ್ಧ ಯಾವುದೇ ಭ್ರಷ್ಟಾಚಾರ ಆರೋಪಗಳು ಸಾಬೀತಾಗಿಲ್ಲ ಎಂದು ಶಾ ಹೇಳಿದ್ದಾರೆ.

ಮೋದಿ ಸರ್ಕಾರದ ಕಲ್ಯಾಣ ಅಭಿಯಾನ- ಷಾ

ಆಯುಷ್ಮಾನ್ ಭಾರತ್ ಯೋಜನೆಯಡಿ ಬಿಹಾರದ 3.60 ಕೋಟಿ ಜನರಿಗೆ ಪ್ರಧಾನಿ ನರೇಂದ್ರ ಮೋದಿ 5 ಲಕ್ಷ ರೂ.ಗಳವರೆಗೆ ಉಚಿತ ಚಿಕಿತ್ಸೆಯನ್ನು ಖಚಿತಪಡಿಸಿದ್ದಾರೆ. ಪ್ರಧಾನಿ ಮೋದಿ ಇತ್ತೀಚೆಗೆ ದರ್ಭಾಂಗದಲ್ಲಿ ಬಿಹಾರದ ಎರಡನೇ ಐಟಿ ಪಾರ್ಕ್ ಅನ್ನು ಉದ್ಘಾಟಿಸಿದರು. ಇದು ಮಿಥಿಲಾದಲ್ಲಿ ಯುವಕರಿಗೆ ಹೊಸ ಉದ್ಯೋಗಗಳು ಮತ್ತು ಉದ್ಯೋಗಾವಕಾಶಗಳನ್ನು ನೀಡುತ್ತದೆ. ಮೋದಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ 1.41 ಕೋಟಿ ಜೀವಿಕಾ ದೀದಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ 10,000 ರೂ.ಗಳನ್ನು ಜಮಾ ಮಾಡಿದ್ದಾರೆ ಎಂದು ಗೃಹ ಸಚಿವ ತಿಳಿಸಿದ್ದಾರೆ.

ಬಿಹಾರ ವಿಧಾನಸಭಾ ಚುನಾವಣೆ

ಈ ತಿಂಗಳ ಆರಂಭದಲ್ಲಿ, ಚುನಾವಣಾ ಆಯೋಗವು ಬಿಹಾರ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಿತು. 243 ವಿಧಾನಸಭಾ ಸ್ಥಾನಗಳಿಗೆ ನವೆಂಬರ್ 6 ಮತ್ತು ನವೆಂಬರ್ 11 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 14 ರಂದು ಮತ ಎಣಿಕೆ ನಡೆಯಲಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net