

ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಮುಂದಿನ 48 ಗಂಟೆಗಳಲ್ಲಿ ಚಂಡಮಾರುತವಾಗಿ ಪರಿವರ್ತನೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಭಾನುವಾರ (ಅ.10) ಉಂಟಾಗಿದ್ದ ಹವಾಮಾನ ಲಕ್ಷಣಗಳು ಪ್ರಕಾರ ಸೈಕ್ಲೋನ್ ಉಂಟಾಗಿ ಉತ್ತರ ಆಂಧ್ರಪ್ರದೇಶ ಅಥವಾ ಒಡಿಶಾಗೆ ಅಪ್ಪಳಿಸುವ ಸಾಧ್ಯತೆ ಇದೆ. ಒಂದು ವೇಳೆ ಮಾರುತಗಳು ದುರ್ಬಲಗೊಂಡರೆ ಸೈಕ್ಲೋನ್ ಆಗುವುದಿಲ್ಲ ಎಂದು ಹವಾಮಾನ ತಜ್ಞ ಡಾ. ಶ್ರೀನಿವಾಸರೆಡ್ಡಿ ತಿಳಿಸಿದ್ದಾರೆ.
ಸದ್ಯ ವಾಯುಭಾರ ಕುಸಿತದಿಂದ ರಾಜ್ಯದ ವಿವಿಧೆಡೆ ಸುರಿಯುತ್ತಿರುವ ಮಳೆ ಮುಂದಿನ 4 ದಿನ ಮುಂದುವರಿಯಲಿದೆ. ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಅ.11ರಿಂದ ಅ.14ರವರೆಗೆ ವ್ಯಾಪಕ ಮಳೆ ಬೀಳಲಿರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.
ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗದಲ್ಲಿ ಮುಂದಿನ 72 ಗಂಟೆ, ದಕ್ಷಿಣ ಒಳನಾಡಿನ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ರಾಮನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ದಾವಣಗೆರೆ ಮತ್ತು ಬಳ್ಳಾರಿಯಲ್ಲಿ ಮುಂದಿನ 48 ಗಂಟೆ ಹಾಗೂ ಉತ್ತರ ಒಳನಾಡಿನ ವಿಜಯಪುರ, ಯಾದಗಿರಿ, ರಾಯಚೂರು, ಕೊಪ್ಪಳ, ಗದಗ, ಬಾಗಲಕೋಟೆ, ಬೆಳಗಾವಿ, ಧಾರವಾಡ ಮತ್ತು ಹಾವೇರಿಯಲ್ಲಿ ಮುಂದಿನ 24 ಗಂಟೆ ವ್ಯಾಪಕ ಮಳೆಯಾಗಲಿದೆ. ಈ ಹಿನ್ನೆಲೆಯಲ್ಲಿ ಇಲಾಖೆ ಯೆಲ್ಲೋ ಅಲರ್ಟ್ ನೀಡಿದೆ.