

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ (Cyclone Effect) ಬುಧವಾರ (ಅ.23) ಚಂಡಮಾರುತ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಾಹಿತಿ ನೀಡಿದೆ.
ಇದನ್ನೂ ಓದಿ: https://www.vijayavani.net/learn-kannada
ಪೂರ್ವ-ಮಧ್ಯ ಬಂಗಾಳಕೊಲ್ಲಿಯಲ್ಲಿ ಹಾಗೂ ಅಂಡಮಾನ್ ಸಮುದ್ರದ ಉತ್ತರಕ್ಕೆ ವಾಯುಭಾರ ಕುಸಿತವಾಗಿದ್ದು, ಮಾರುತಗಳು ಪಶ್ಚಿಮ-ವಾಯುವ್ಯ ದಿಕ್ಕುಯತ್ತ ಸಾಗಲಿವೆ. ಒಡಿಶಾ, ಪಶ್ಚಿಮ ಬಂಗಾಳಕ್ಕೆ ಹೆಚ್ಚು ಮಳೆ ಬೀಳುವ ಸಾಧ್ಯತೆ ಇದೆ. ಪ್ರತಿ ಗಂಟೆಗೆ 120 ಕಿ.ಮೀ.ವೇಗದಲ್ಲಿ ಗಾಳಿ ಬೀಸಲಿದೆ. ಸಮುದ್ರದಕ್ಕೆ ಇಳಿಯದಂತೆ ಮೀನುಗಾರರಿಕೆ ಐಎಂಡಿ ಎಚ್ಚರಿಕೆ ನೀಡಿದೆ. 4 ದಿನ ಮುಂದುವರಿಕೆ:ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಮುಂದಿನ 4 ದಿನ ಮುಂದುವರಿಯಲಿದೆ. ಬೆಂಗಳೂರು ನಗರ, ಬೆಂ.ಗ್ರಾಮಾಂತರದ ದೊಡ್ಡಬಳ್ಳಾಪುರ, ಚಾಮರಾಜನಗರದ ಹರದನಹಳ್ಳಿ, ಚಿತ್ರದುರ್ಗದ ಹಿರಿಯೂರು, ದಾವಣಗೆರೆ, ಗದಗ, ಹಾಸನ, ಹಾವೇರಿಯ ಹನುಮಾನಮಟ್ಟಿ, ರಾಮನಗರ, ಶಿವಮೊಗ್ಗದ ಆಗುಂಬೆ, ಯಾದಗಿರಿಯ ಭೀಮರಾಯನಗುಡಿ ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ಸೋಮವಾರವೂ ವರ್ಷಧಾರೆಯಾಯಿತು.
ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರಿನಲ್ಲಿ ಮುಂದಿನ 3 ದಿನ ಹಾಗೂ ದಾವಣಗೆರೆ, ಶಿವಮೊಗ್ಗ, ಬೆಳಗಾವಿ, ಧಾರವಾಡ, ಗದಗ, ಹಾವೇರಿಯಲ್ಲಿ ಅ.22ರಂದು ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಈಗಾಗಲೇ ಯೆಲ್ಲೋ ಅರ್ಲಟ್ ಘೋಷಿಸಿದೆ. ಬಾಗಲಕೋಟೆ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ವಿಜಯನಗರದಲ್ಲಿ ಮುಂದಿನ 4 ದಿನ ಗುಡುಗು ಸಹಿತ ಸಾಧಾರಣ ಪ್ರಮಾಣದಲ್ಲಿ ಮಳೆ ಸುರಿಯಲಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಹಗುರ ವರ್ಷಧಾರೆಯಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
21 ಜಿಲ್ಲೆಗಳಲ್ಲಿ ಅಧಿಕ ಮಳೆ: ಅ.1ರಿಂದ ಅ.21ರವರೆಗೆ 21 ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ವರ್ಷಧಾರೆಯಾದರೆ, 9 ಜಿಲ್ಲೆಗಳಲ್ಲಿ ವಾಡಿಕೆಯಷ್ಟೇ ಬಿದ್ದಿದೆ. ರಾಯಚೂರಿನಲ್ಲಿ ಮಾತ್ರ ಮಳೆ ಕುಂಠಿತವಾಗಿದೆ. ದಕ್ಷಿಣ ಕರ್ನಾಟಕದಲ್ಲಿ ಶೇ.69, ಉತ್ತರ ಕರ್ನಾಟಕ ವ್ಯಾಪ್ತಿಯಲ್ಲಿ ಶೇ.35, ಮಲೆನಾಡಲ್ಲಿ ಶೇ.66 ಹಾಗೂ ಕರಾವಳಿಯಲ್ಲಿ ಶೇ.57ರಷ್ಟು ವಾಡಿಕೆಗಿಂತ ಅಧಿಕ ವರ್ಷಧಾರೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ. "ಚಂಡಮಾರುತದಿಂದ ಕರ್ನಾಟಕ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ, ಮುರ್ನಾಲ್ಕು ದಿನಗಳ ಬಳಿಕ ರಾಜ್ಯದಲ್ಲಿ ಮಳೆ ಕಡಿಮೆಯಾಗಲಿದೆ" ಎಂದು ರಾಜ್ಯ ಹವಾಮಾನ ಇಲಾಖೆ ನಿರ್ದೇಶಕರಾದ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.