

ಪ್ಯಾರಿಸ್: ಫ್ರೆಂಚ್ ಹಿಂದೂ ಮಹಾಸಾಗರದ ಪ್ರದೇಶವಾದ ಮಯೊಟ್ಟೆ ಶನಿವಾರ ಅಪ್ಪಳಿಸಿದ ಚಿಡೋ ಚಂಡಮಾರುತಕ್ಕೆ ಸಂಪೂರ್ಣ ತತ್ತರಿಸಿದ್ದು, ಚಂಡಮಾರುತದ ಹೊಡೆತಕ್ಕೆ ಕನಿಷ್ಠ 14 ಜನರು ದುರ್ಮರಣ ಹೊಂದಿದ್ದು, ಒಂಬತ್ತಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಚಂಡಮಾರುತದ ಪ್ರಬಲವಾದ ಗಾಳಿಯು ಗಂಟೆಗೆ 226 ಕಿಲೋಮೀಟರ್ ವೇಗದಲ್ಲಿ ಅಪ್ಪಳಿಸಿದ್ದು, ಮನೆಗಳು, ಮರಗಳು ಸೇರಿದಂತೆ ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. 15,000ಕ್ಕೂ ಅಧಿಕ ಮನೆಗಳು ವಿದ್ಯುತ್ ಮತ್ತು ದೂರವಾಣಿ ಸೇವೆಗಳ ಕಡಿತದಿಂದ ಸಹಾಯಕ್ಕೆ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯ ಸೈಕ್ಲೋನ್ ಅಬ್ಬರಕ್ಕೆ ಅನೇಕರು ಸಾವಿಗೀಡಾಗಿದ್ದು, ಮೃತರ ಸಂಖ್ಯೆಯಲ್ಲಿ ಏರಿಕೆ ಕಂಡುಬರುವ ಸಾಧ್ಯತೆಗಳು ಹೆಚ್ಚಿವೆ ಎಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
ಪ್ರಸ್ತುತ ಚಂಡಮಾರುತ ಅಪ್ಪಳಿಸಿದ ಸ್ಥಳದಲ್ಲಿ ಬೀಡುಬಿಟ್ಟಿರುವ ವೈದ್ಯಕೀಯ, ಅಗ್ನಿಶಾಮಕ ಸಿಬ್ಬಂದಿ ಮತ್ತು 160 ಸೈನಿಕರು 110ಕ್ಕೂ ಅಧಿಕ ಮಂದಿಯ ಅಗತ್ಯ ನೆರವಿಗೆ ಮುಂದಾಗಿದ್ದಾರೆ. ಸದ್ಯದ ಮಟ್ಟಿಗೆ 1000ಕ್ಕಿಂತ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ,(ಏಜೆನ್ಸೀಸ್).