ಪ್ರೇಯಸಿ ಮೇಲಿನ ದ್ವೇಷ: ಅಶ್ಲೀಲ ವೆಬ್​ಸೈಟ್​ಗೆ ಪ್ರಾಂಶುಪಾಲರು, ಪ್ರಾಧ್ಯಾಪಕರು, ಹಳೇ ವಿದ್ಯಾರ್ಥಿಗಳ ಫೋಟೋ ಅಪ್ಲೋಡ್

cyber crime
Published on

ಬೆಂಗಳೂರು: ಪ್ರೇಯಸಿ ಮೇಲಿನ ದ್ವೇಷಕ್ಕೆ ಸಾಫ್ಟ್ ವೇರ್ ಇಂಜಿನಿಯರ್​ವೊಬ್ಬ ತಾನು ಓದಿದ್ದ ಕಾಲೇಜಿನ ಪ್ರಾಂಶುಪಾಲರು, ಪ್ರಾಧ್ಯಾಪಕರು ಮತ್ತು ಹಳೇ ವಿದ್ಯಾರ್ಥಿಗಳ ಫೋಟೋವನ್ನು ​ಅಶ್ಲೀಲ ವೆಬ್​ಸೈಟ್​ಗೆ ಅಪ್ಲೋಡ್​ ಮಾಡಿ ಸಿಕ್ಕಿಬಿದ್ದಿದ್ದಾನೆ.

ಅಶ್ಲೀಲ ವೆಬ್​ಸೈಟ್​ಗೆ ಫೋಟೋ ಅಪ್ಲೋಡ್​ ಮಾಡಿದ ಆರೋಪದ ಮೇರೆಗೆ ಸಿ.ವಿ.ರಾಮನ್​ನಗರದ ಅಜಯ್​ ತನಿಕಾಚಲಂ(37) ಮತ್ತು ರಾಜಾಜಿನಗರದ ವಿಶ್ವಕ್​ ಸೇನ್​(27) ಎಂಬುವವರನ್ನು ಸೈಬರ್​ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಪ್ರತಿಷ್ಠಿತ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದ ಅಜಯ್​ ತನಿಕಾಚಲಂ, ಪ್ರಸ್ತುತ ಸಾಫ್ಟ್ವೇರ್ ​ ಇಂಜಿನಿಯರ್. ವ್ಯಾಸಂಗದ ವೇಳೆ ಸಹಪಾಠಿ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ, ಆಕೆ ಈತನನ್ನು ನಿರಾಕರಿಸಿದ್ದಳು. ಕುಪಿತಗೊಂಡಿದ್ದ ಆರೋಪಿ, ಸೇಡು ತೀರಿಸಿಕೊಳ್ಳುವ ಸಲುವಾಗಿ ಅದೇ ಕಾಲೇಜಿನ ವಿದ್ಯಾರ್ಥಿ ವಿಶ್ವಕ್​ನನ್ನು ಪರಿಚಯ ಮಾಡಿಕೊಂಡಿದ್ದ. ಆತನ ಮೂಲಕ ಕಾಲೇಜಿನ ಪ್ರಾಂಶುಪಾಲರ, ಪ್ರಾಧ್ಯಾಪಕರ, ಪ್ರೇಯಸಿ ಸೇರಿದಂತೆ ಹಳೆಯ 30 ವಿದ್ಯಾರ್ಥಿಗಳ ಫೇಸ್​ಬುಕ್​, ಇನ್​ಸ್ಟಾಗ್ರಾಂ​, ಟ್ವಿಟರ್​ ಖಾತೆಗಳಲ್ಲಿ ಫೋಟೋಗಳನ್ನು ಕಳವು ಮಾಡಿಸಿದ್ದ.

ಇದೇ ಪೋಟೋಗಳನ್ನು ಎಡಿಟ್​ ಮಾಡಿ ಅಶ್ಲೀಲ ವೆಬ್​ಸೈಟ್​ಗೆ ಅಪ್ಲೋಡ್​ ಮಾಡಿ ವೈರಲ್​ ಮಾಡಿದ್ದ. ಇದನ್ನು ಗಮನಿಸಿದ ಹಳೇ ವಿದ್ಯಾರ್ಥಿಗಳು ಪ್ರಾಧ್ಯಾಪಕರಿಗೆ ವಿಷಯ ಮುಟ್ಟಿಸಿದ್ದರು. ಪ್ರಾಂಶುಪಾಲರು, ಪ್ರಾಧ್ಯಾಪಕರ ಮತ್ತು ಹಳೇ ವಿದ್ಯಾರ್ಥಿಗಳು ಸೇರಿ 30 ಜನರ ಫೋಟೋಗಳನ್ನು ಅಶ್ಲೀಲ ವೆಬ್​ಸೈಟ್​ಗೆ ಅಪ್ಲೋಡ್​ ಮಾಡಲಾಗಿತ್ತು. ಈ ಬಗ್ಗೆ ಸಹಾಯಕ ಪ್ರಾಧ್ಯಾಪಕಿ ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಿರುವುದಾಗಿ ಸೈಬರ್​ ಕ್ರೈಂ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net