ಗಂಡ ಸತ್ತು 2 ತಿಂಗಳಾಯ್ತು, ಕಡುಬಡತನಕ್ಕೆ ಹೆದರಿ ಹಸುಗೂಸನ್ನೇ ದತ್ತು ಕೊಡಲು ಬಯಸಿದಳು... ಕೊನೆಗೆ ಆ ದಂಧೆಗೆ ಸಿಲುಕಿದಳು

baby 20 APR 20
Published on

ಶಿವಮೊಗ್ಗ: ಪತ್ನಿ ಏಳೂವರೆ ತಿಂಗಳ ಗರ್ಭಿಣಿಯಾಗಿದ್ದಾಗಲೇ ಪತಿ ಇಹಲೋಕ ತ್ಯಜಿಸಿದ. ಈ ದಂಪತಿಗೆ ಈಗಾಗಲೇ ಒಂದು ಗಂಡು ಮಗು ಇದ್ದು, 15 ದಿನದ ಹಿಂದಷ್ಟೇ ಮತ್ತೊಂದು ಗಂಡು ಮಗುವಿಗೆ ಆ ಮಹಿಳೆ ಜನ್ಮ ನೀಡಿದಳು. ಕಿತ್ತುತಿನ್ನುವ ಬಡತನದಲ್ಲಿ ಬೇಯುತ್ತಿರುವ ಆಕೆಗೆ ಗಂಡನೂ ಇಲ್ಲದೆ ಅತ್ತ ಎರಡು ಪುಟ್ಟ ಮಕ್ಕಳನ್ನು ಸಾಕುವುದು ದುಸ್ತರವಾಗಿತ್ತು. ಹೀಗಾಗಿ ಎರಡನೆಯ ಮಗು ಅಂದರೆ ಹದಿನೈದು ದಿನದ ಹಸುಗೂಸನ್ನು ಯಾರಾದರೂ ಸಾಕಿಕೊಳ್ಳುವವರಿಗೆ ದತ್ತು ಕೊಡಬೇಕೆಂಬುದು ಅವಳ ಬಯಕೆಯಾಗಿತ್ತು...

ಇದನ್ನೇ ದುರ್ಬಳಕೆ ಮಾಡಿಕೊಂಡ ಕಿಡಿಗೇಡಿಗಳು ಹಸುಗೂಸನ್ನು 3 ಲಕ್ಷ ರೂ.ಗೆ ಮಾರಾಟ ಮಾಡಲು ಯತ್ನಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಏನೀ ಪ್ರಕರಣ?: ಶಿವಮೊಗ್ಗದ ಟಿಪ್ಪುನಗರದ ಮಹಿಳೆಯೊಬ್ಬರು ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಗಂಡ ಮೃತಪಟ್ಟ ಬಳಿಕ ಮಗು ಜನಿಸಿದ್ದು ಹಾಗೂ ಬಡತನವಿದ್ದ ಕಾರಣಕ್ಕೆ ನವಜಾತ ಶಿಶುವನ್ನು ಸಂಬಂಧಿ ಸುಮಾ ಎಂಬುವರ ಮುಖಾಂತರ ದತ್ತು ನೀಡಲು ಶ ತಾಯಿ ಮುಂದಾಗಿದ್ದರು. ಈ ಬಗ್ಗೆ ಟಿಪ್ಪುನಗರದಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿರುವ ತರಿಕೆರೆ ತಾಲೂಕು ಇಟಗಿ ಗ್ರಾಮದ ಶೈಲಾ ಬಳಿ ಸುಮಾ ಪ್ರಸ್ತಾಪಿಸಿದ್ದರು. ಈ ವೇಳೆ ಶೈಲಾ, ಮಗುವಿನ ತಾಯಿಯ ಸಂಬಂಧಿ ಸುಮಾ, ತುಳಸಿ ಹಾಗೂ ಷಣ್ಮುಖ ಎಂಬುವವರು ಶಿಶು ಮಾರಾಟಕ್ಕೆ ಪ್ಲ್ಯಾನ್​ ಮಾಡಿದ್ದರು.

ಅದರಂತೆ, ಮಗು ದತ್ತು ನೀಡುವ ಬದಲು ಮಾರಾಟ ಮಾಡಲು ಶೈಲಾ, ಸುಮಾ ಹಾಗೂ ಇತರರು ಮುಂದಾಗಿದ್ದು ಒಂದೂವರೆಯಿಂದ 3 ಲಕ್ಷ ರೂ.ವರೆಗೆ ಡಿಮಾಂಡ್ ಮಾಡಿದ್ದರು. ಈ ಬಗ್ಗೆ ಹಲವು ಬಾರಿ ಮಾತುಕತೆಯೂ ನಡೆದಿತ್ತು. ವ್ಯಕ್ತಿಯೊಬ್ಬರು ಶಿಶು ಖರೀದಿಸಲು ಮುಂದಾಗಿದ್ದರು ಎನ್ನಲಾಗಿದೆ. ಮಾಹಿತಿ ತಿಳಿದು ಶೈಲಾ ಮನೆ ಮೇಲೆ ದಾಳಿ ನಡೆಸಿದ ತುಂಗಾ ನಗರದ ಪೊಲೀಸರು ಮಕ್ಕಳ ಸಹಾಯವಾಣಿ ಸಿಬ್ಬಂದಿ ನೆರವಿನೊಂದಿಗೆ ಶೈಲಾ, ಸುಮಾ, ತುಳಸಿ ಹಾಗೂ ಷಣ್ಮುಖ ಎಂಬುವವರನ್ನು ಬಂಧಿಸಿದ್ದಾರೆ.

ಈ ಹಿಂದೆಯೂ ಶೈಲಾ ನೇತೃತ್ವದಲ್ಲಿ ಇದೇ ರೀತಿ ಎರಡು ಮಕ್ಕಳ ಮಾರಾಟ ಮಾಡಲಾಗಿದೆ ಎಂಬ ಆರೋಪ ಇದೀಗ ಕೇಳಿ ಬಂದಿದೆ. ನಾಲ್ವರನ್ನು ವಶಕ್ಕೆ ಪಡೆದಿರುವ ಪೊಲೀಸರು, ಶಿಶುವನ್ನು ಸುರಭಿ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಿದ್ದಾರೆ. ಶಿಶುವನ್ನು ಯಾರಿಗೆ ಮಾರಾಟ ಮಾಡುತ್ತಿದ್ದರು ಎಂಬುದು ಇನ್ನೂ ಬಹಿರಂಗಗೊಂಡಿಲ್ಲ. ತನಿಖೆ ಪ್ರಗತಿಯಲ್ಲಿದ್ದು, ತುಂಗಾನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net