

ಬೆಂಗಳೂರು: ದಿನದಿಂದ ದಿನಕ್ಕೆ ಸೈಬರ್ ಕಳ್ಳರ ಹಾವಳಿ ಹೆಚ್ಚಾಗುತ್ತಿದೆ. ಎಷ್ಟೇ ಚುರುಕಾಗಿ ಕೆಲಸ ಮಾಡಿದರೂ, ಎಲ್ಲೋ ಕೂತು ನಡೆಯುವ ಸೈಬರ್ ವಂಚನೆಯನ್ನು ಭೇಧಿಸುವುದು ಮಾತ್ರ ಪೊಲೀಸ್ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.
ಫೋನ್ ಕರೆ ಮಾಡಿ ಒಟಿಪಿ ಹೇಳುವಂತೆ ಒತ್ತಾಯಿಸುವುದು, ಆನ್ಲೈನ್ ವಂಚನೆ, ಫೇಸ್ಬುಕ್ ಹ್ಯಾಕ್ ಮಾಡಿ ಹಣ ಕೇಳುವುದು, ಬ್ಯಾಂಕ್ನಿಂದ ಕರೆ ಮಾಡಿದ್ದೇವೆ ಎಂದು ಹೇಳಿ ಎಟಿಎಮ್ ಪಾಸ್ವರ್ಡ್ ಕೇಳುವುದು. ಇಂತಹ ಖಾಸಗಿ ಮಾಹಿತಿಗಳನ್ನು ಪಡೆದುಕೊಂಡು ವಂಚನೆ ಮಾಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದೀಗ ಆನ್ಲೈಲ್ ಖದೀಮರು ಹೊಸದೊಂದು ವಂಚನೆಗೆ ಇಳಿದಿದ್ದಾರೆ. ಆನ್ಲೈನ್ನಲ್ಲಿ ಫುಡ್ ಆರ್ಡರ್ ಮಾಡುವಂತೆ ಒತ್ತಾಯಿಸಿ, ಬ್ಯಾಂಕ್ ಖಾತೆಗೆ ಖನ್ನ ಹಾಕುತ್ತಿದ್ದಾರೆ ಸೈಬರ್ ಕಳ್ಳರು.
ಸಾಮಾಜಿಕ ಜಾಲತಾಣವನ್ನು ಬಳಕೆ ಮಾಡಿಕೊಂಡು, ಆನ್ಲೈನ್ ಮೂಲಕ ಫುಡ್ ಆರ್ಡರ್ ಮಾಡುವಂತೆ ಗ್ರಾಹಕರನ್ನು ಮೊದಲು ಪ್ರೇರೇಪಿಸುತ್ತಾರೆ. ಜತೆಗೆ ಆರ್ಡರ್ ಮಾಡಲು ಲಿಂಕ್ ಕೂಡ ನೀಡುತ್ತಾರೆ. ಇದು ಅಧಿಕೃತ ಎಂದು ಗ್ರಾಹಕರು ನಂಬಿದರೆ, ಮೋಸ ಗ್ಯಾರೆಂಟಿ. ಲಿಂಕ್ ಕ್ಲಿಕ್ ಮಾಡುತ್ತಿದ್ದಂತೆ, ಬ್ಯಾಂಕ್ ಖಾತೆಯಲ್ಲಿರುವ ಅಷ್ಟೂ ಹಣ ವಂಚಕರ ಪಾಲಾಗಿಬಿಡುತ್ತದೆ.
ಸೈಬರ್ ವಂಚಕರು ಖಾಂಧಾನಿ ರಾಜಧಾನಿ ಫುಡ್, ರುಚಿ ಸಾಗರ್ ಫುಡ್ ಮುಂತಾದ ಹೆಸರಿನಲ್ಲಿ ನಕಲಿ ಫುಡ್ ಆರ್ಡರ್ ಆ್ಯಪ್ಗಳನ್ನು ರಚಿಸಿದ್ದಾರೆ. ಝೊಮಾಟೋ, ಸ್ವಿಗ್ಗಿ ಮುಂತಾದ ಫುಡ್ ಆರ್ಡರ್ ಆ್ಯಪ್ ಶೈಲಿಯಲ್ಲಿ ಇದು ಕಾರ್ಯನಿರ್ವಹಿಸುತ್ತದೆ. ಆ್ಯಪ್ಗಳನ್ನು ತೆರೆಯುತ್ತಿದ್ದಂತೆ, ಲಿಂಕ್ಗೆ ಕ್ಲಿಕ್ ಮಾಡಿ ಕ್ರೆಡಿಟ್ ಕಾರ್ಡ್ ನಂಬರ್ ಹಾಕಲು ಸೂಚನೆ ನೀಡುತ್ತಾರೆ.
ಈ ಆ್ಯಪ್ಗಳು ಅಸಲಿ ಎಂದು ನಂಬಿ, ಕಾರ್ಡ್ ನಂಬರ್ ನೀಡಿದ ಕೂಡಲೇ, ಹಂತ ಹಂತವಾಗಿ ಹಣ ಸೈಬರ್ ವಂಚಕರ ಖಾತೆಗೆ ಜಮೆ ಆಗಲು ಆರಂಭವಾಗುತ್ತದೆ. ಇದೀಗ ಈ ನಕಲಿ ಜಾಲಕ್ಕೆ ಸಿಲುಕಿ ಇಮ್ರಾನ್ ಉಲ್ಲಾ ಖಾನ್ ಎಂಬುವವರು 2 ಲಕ್ಷದ 23 ಸಾವಿರ ರೂ. ಹಣ ಕಳೆದುಕೊಂಡಿದ್ದಾರೆ. ದೀಪಿಕಾ ಎಂಬುವವರ ಅಕೌಂಟ್ನಿಂದಲೂ ಹಣ ಕಳವಾಗಿರುವ ಬಗ್ಗೆ ದೂರು ಕೇಳಿ ಬಂದಿವೆ. ಈ ಬಗ್ಗೆ ಬೆಂಗಳೂರು ಪೂರ್ವ ವಿಭಾಗದ ಸೈಬರ್ ಕ್ರೈ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ.