

ಬೆಂಗಳೂರು: ಬ್ಯಾಂಕ್ಗಳಲ್ಲಿ ಸಾಲ ಮಾಡಿದವರಿಗೆ ಇಎಂಐ (ಮಾಸಿಕ ಕಂತು) ಪಾವತಿಗೆ ಆರ್ಬಿಐ ನೀಡಿದ ಕಂತು ಮುಂದೂಡಿಕೆ ಅವಕಾಶವನ್ನೇ ದುರುಪಯೋಗ ಪಡಿಸಿಕೊಂಡು ಸೈಬರ್ ಕಳ್ಳರು ವಂಚನೆಗೆ ಬಲೆ ಬೀಸುತ್ತಿದ್ದಾರೆ.
ಏನಿದು ವಂಚಕ ಆಪ್? ಕ್ವಿಕ್ ಸಪೋರ್ಟ್ ಆಪ್ ಎನಿಡೆಸ್ಕ್ ಆಪ್ ಮಾದರಿಯಲ್ಲಿ ಕೆಲಸ ಮಾಡುತ್ತದೆ. ಮೊಬೈಲ್ಗೆ ಡೌನ್ಲೋಡ್ ಮಾಡಿಕೊಳ್ಳುವಾಗ ಮೊಬೈಲ್ ನಂಬರ್ ನಮೂದು ಮಾಡಿರುತ್ತೇವೆ. ಆಪ್ ಇನ್ಸ್ಟಾಲ್ ಆದ ಕೂಡಲೇ ಮೊಬೈಲ್ ಕಂಟ್ರೋಲ್ ಸೈಬರ್ ಕಳ್ಳರ ಕೈಗೆ ಸಿಗುತ್ತದೆ. ಆಗ ಕಳ್ಳರು ಅಜ್ಞಾತ ಸ್ಥಳದಿಂದಲೇ ನಮ್ಮ ಮೊಬೈಲ್ನ್ನು ರಿಮೋಟ್ ಕಂಟ್ರೋಲ್ ಮಾದರಿ ಬಳಸುತ್ತಾರೆ. ಮೊಬೈಲ್ ಬ್ಯಾಂಕಿಂಗ್, ವ್ಯಾಲೆಟ್ನ್ನು ಆಪರೇಟ್ ಮಾಡಿ ತಮ್ಮ ಖಾತೆಗೆ ಹಣ ವರ್ಗಾವಣೆ ಮಾಡಿಕೊಳ್ಳುತ್ತಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬ್ಯಾಂಕ್ ಅಧಿಕಾರಿ ಸೋಗಿನಲ್ಲಿ ವ್ಯಕ್ತಿಯೊಬ್ಬರ ಮೊಬೈಲ್ಗೆ ಕರೆ ಮಾಡಿ 3 ತಿಂಗಳ ಇಎಂಐ ಮುಂದೂಡಲು ಸೌಲಭ್ಯ ಕಲ್ಪಿಸುವ ಸೋಗಿನಲ್ಲಿ 20 ಸಾವಿರ ರೂ. ದೋಚಿದ್ದಾರೆ. ಈ ಸಂಬಂಧ ಸುಂಕದಕಟ್ಟೆಯ ವೈ.ಸಿ. ಪ್ರಕಾಶ್ ಎಂಬುವರು ಪಶ್ಚಿಮ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿ ರಾಹುಲ್ ಶರ್ಮಾ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿ ಬಂಧನಕ್ಕೆ ಪೊಲೀಸರು ಬಲೆಬೀಸಿದ್ದಾರೆ. ಲಾಕ್ಡೌನ್ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಬ್ಯಾಂಕ್ ಸಾಲಗಾರರಿಗೆ ಇಎಂಐ ಪಾವತಿ ಮಾಡಲು ಆರ್ಬಿಐ, ಹಂತ ಹಂತವಾಗಿ 6 ತಿಂಗಳ ವಿನಾಯಿತಿ ನೀಡಿ ಬ್ಯಾಂಕ್ಗಳಿಗೆ ಆದೇಶಿಸಿದೆ. ಬ್ಯಾಂಕ್ ಗ್ರಾಹಕರು ಸಹ ತಮಗೆ ಸೌಲಭ್ಯ ಬೇಕಾದರೆ ಸಂಬಂಧಪಟ್ಟ ಬ್ಯಾಂಕ್ಗೆ ಆನ್ಲೈನ್ ಮೂಲಕ ಪತ್ರ ರವಾನಿಸಬೇಕಾಗಿದೆ. ಇಲ್ಲವಾದರೆ, ತಿಂಗಳ ಕಂತು ಕಡಿತವಾಗುತ್ತದೆ. ಆರ್ಬಿಐ ನೀಡಿದ ಈ ಸೌಲಭ್ಯವನ್ನೇ ದುರುಪಯೋಗಪಡಿಸಿಕೊಂಡ ಸೈಬರ್ ಕಳ್ಳರು ಅಮಾಯಕರಿಗೆ ವಂಚನೆ ಮಾಡುತ್ತಿದ್ದಾರೆ.
ಬ್ಯಾಂಕ್ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ ಬ್ಯಾಂಕ್ ಖಾತೆ ವಿವರ ಕೇಳಿದರೆ ಹಾಗೂ ಲಿಂಕ್, ಆಪ್ ಕಳುಹಿಸಿ ಮಾಹಿತಿ ಕೋರಿದರೆ ಹಂಚಿಕೊಳ್ಳಬೇಡಿ. ಇದು ಸೈಬರ್ ಕಳ್ಳರ ವಂಚನೆ ಜಾಲ. | ಭಾಸ್ಕರ್ ರಾವ್ ನಗರ ಪೊಲೀಸ್ ಆಯುಕ್ತ
ಜೂ.6ರ ಮಧ್ಯಾಹ್ನ 12.15ರಲ್ಲಿ ಪ್ರಕಾಶ್ ಅವರ ಮೊಬೈಲ್ಗೆ ಕರೆ ಮಾಡಿದ ವ್ಯಕ್ತಿ, ಎಚ್ಡಿಎಫ್ಸಿ ಬ್ಯಾಂಕ್ ಅಧಿಕಾರಿ ಎಂದು ಪರಿಚಯ ಮಾಡಿಕೊಂಡಿದ್ದಾನೆ. ಪ್ರಕಾಶ್ ಕೂಡ ಅದೇ ಬ್ಯಾಂಕ್ನಲ್ಲಿ ಸಾಲ ಪಡೆದಿದ್ದರು. ಹಾಗಾಗಿ ಅಪರಿಚಿತ ವ್ಯಕ್ತಿಯನ್ನೇ ಬ್ಯಾಂಕ್ ಅಧಿಕಾರಿ ಎಂದು ನಂಬಿ ಸಂಭಾಷಣೆ ಮುಂದುವರಿಸಿದ್ದಾರೆ. ಆತ, ‘ನಿಮ್ಮ ಸಾಲದ ಇಎಂಐ 3 ತಿಂಗಳು ಮುಂದೂಡಲಾಗುತ್ತದೆ. ಈ ಸೌಲಭ್ಯ ಬೇಕಾದರೆ ಮೊದಲು ಕ್ವಿಕ್ ಸಪೋರ್ಟ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ’ ಎಂದು ಹೇಳಿದ್ದಾನೆ. ಅದರಂತೆ ಪ್ರಕಾಶ್ ಮೊಬೈಲ್ನಲ್ಲಿ ಆಪ್ ಡೌನ್ಲೋಡ್ ಮಾಡಿಕೊಂಡು ಬ್ಯಾಂಕ್ ಖಾತೆ ವಿವರ ಭರ್ತಿ ಮಾಡಿದ್ದರು. ಇದಾದ ಬಳಿಕ ಪ್ರಕಾಶ್ ಖಾತೆಯಿಂದ ಹಂತ ಹಂತವಾಗಿ 19,998 ರೂ. ಗಳನ್ನು ಸೈಬರ್ ಕಳ್ಳ ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾನೆ. ಮೋಸಗಾರರ ಕೈಗೆ ಸಿಲುಕಿರು ವುದಾಗಿ ತಿಳಿದ ಪ್ರಕಾಶ್ ದೂರು ದಾಖಲಿಸಿದ್ದಾರೆ.
ಎಚ್ಚರ ವಹಿಸದಿದ್ದರೆ ಕನ್ನ: ಇಎಂಐ ಪಾವತಿ ಕಂತು ಮುಂದೂಡಿಕೆ ಪಡೆಯಬೇಕಾದರೆ ಸಂಬಂಧಪಟ್ಟ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಅಥವಾ ಸಂಬಂಧಪಟ್ಟ ಬ್ಯಾಂಕ್ನ ಆನ್ಲೈನ್ ಸೇವೆಯಲ್ಲಿ ಅರ್ಜಿಯನ್ನು ಸಲ್ಲಿಸಿ. ಯಾವುದೇ ಬ್ಯಾಂಕ್ ಅಧಿಕಾರಿಗಳು ಕರೆ ಮಾಡುವುದಿಲ್ಲ. ಒಂದು ವೇಳೆ ಯಾರಾದರೂ ತಾವು ಅಧಿಕಾರಿಗಳೆಂದು ಕರೆ ಮಾಡಿದರೆ ಎಚ್ಚರ ವಹಿಸಿ. ಅನಗತ್ಯವಾಗಿ ಆಪ್ಗಳನ್ನು ಡೌನ್ಲೋಡ್ ಮಾಡಿಕೊಳ್ಳಬೇಡಿ. ಅಲ್ಲದೆ, ಯಾರೊಂದಿಗೂ ಬ್ಯಾಂಕ್ ಖಾತೆ ವಿವರ ಹಂಚಿಕೊಳ್ಳಬೇಡಿ.