More

    ಕಥೆಯಲ್ಲ-ಜೀವನ: ಅನಾರೋಗ್ಯಪೀಡಿತ ಪೋಲಿಸಪ್ಪನ ನೋವಿನ ಕಥೆ-ವ್ಯಥೆ

    ಬೆಂಗಳೂರು: ಕ್ವಾರ್ಟರ್ಸ್​ನಲ್ಲಿ ವಾಸ ಮಾಡದೆ 7 ವರ್ಷ ಹಾಗೂ ಅನಾರೋಗ್ಯದಿಂದ ಕರ್ತವ್ಯಕ್ಕೆ ಹಾಜರಾಗದೆ 3 ವರ್ಷವಾಗಿದ್ದರೂ ಪೊಲೀಸ್ ಹೆಡ್​ಕಾನ್ಸ್​ಟೆಬಲ್​ಗೆ ವಸತಿ ಸಮುಚ್ಚಯದ ಕಿರಿಕಿರಿ ತಪ್ಪಿಲ್ಲ.

    ಕ್ವಾರ್ಟರ್ಸ್ ಹಂಚಿಕೆ ಆದೇಶ ರದ್ದಾದರೂ ವೇತನದಲ್ಲಿ ಮನೆ ಬಾಡಿಗೆ ಕಡಿತ ಮಾಡಿದರು. ಇದೀಗ ನೀವೇ ಖಾಲಿ ಮಾಡಿಸಿ ಎಂದು ಸೂಚನೆ ಕೊಡುತ್ತಿದ್ದಾರೆ. ಈ ಮಾತನ್ನು 2014ರಲ್ಲೇ ಹೇಳಿದ್ದರೆ ಆ ಕೆಲಸವನ್ನೂ ಮಾಡುತ್ತಿದ್ದೆ. ಹಾಸಿಗೆಯಿಂದ ಮೇಲೇಳಲಾಗದ ಸಮಯದಲ್ಲಿ ಹೇಳಿದರೆ ಹೇಗೆ?
    | ರಾಮು ಹೆಡ್​ಕಾನ್ಸ್​ಟೆಬಲ್

    ಮೂಡಲಪಾಳ್ಯ ನಿವಾಸಿ ಹೈಗ್ರೌಂಡ್ಸ್ ಹೆಡ್​ಕಾನ್ಸ್​ಟೆಬಲ್ ರಾಮು ಅವರ ನೋವಿನ ಕಥೆ ಇದು.. 2004ರಲ್ಲಿ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಕೆಂಗೇರಿ ವಳಗೆರೆಹಳ್ಳಿ ವಸತಿ ಸಮುಚ್ಚಯದಲ್ಲಿ ಎಫ್ ಬ್ಲಾಕ್​ನಲ್ಲಿರುವ ಮನೆ ನಂ.02 ಹಂಚಿಕೆಯಾಗಿತ್ತು. ಅದರಲ್ಲಿ ಪತ್ನಿ ಮತ್ತು ಮಕ್ಕಳ ಜತೆ ನೆಲೆಸಿದ್ದರು. ಕೌಟುಂಬಿಕ ಕಲಹದಿಂದ 2012ರಲ್ಲೇ ಖಾಲಿ ಮಾಡಿದ್ದ ರಾಮು, ಮನೆ ಹಿಂಪಡೆಯುವಂತೆ ಇಲಾಖೆಗೆ ಪತ್ರ ಬರೆದಿದ್ದರು. ನಂತರ ಕೆಲವೇ ದಿನದಲ್ಲಿ ಅಂದಿನ ಪೊಲೀಸ್ ಆಯುಕ್ತರು ಮನೆ ರದ್ದು ಮಾಡಿ ಆದೇಶಿಸಿದ್ದರು.

    ಆದರೆ, ರಾಮು ಅವರ ಪತ್ನಿ ಆ ಮನೆಯನ್ನು ಖಾಲಿ ಮಾಡಿಲ್ಲ. ಆ ವಿಚಾರ ಅಧಿಕಾರಿಗಳ ಮಟ್ಟಕ್ಕೂ ತಲುಪಿತ್ತು. ಮನೆ ಬಾಡಿಗೆಯೆಂದು ರಾಮು ವೇತನದಲ್ಲಿ ಪ್ರತಿ ತಿಂಗಳು 11 ಸಾವಿರ ರೂ. (ಎಚ್​ಆರ್​ಎ) ಕಡಿತವಾಗುತ್ತಿತ್ತು. ಈ ಬಗ್ಗೆ ರಾಮು ಮತ್ತೆ ಪತ್ರ ಬರೆದು ಮನವಿ ಮಾಡಿದಾಗ ಅಂದಿನ ಕಮಿಷನರ್, ಮನೆ ವಶಕ್ಕೆ ಪಡೆದು ವೇತನದಲ್ಲಿ ಕಡಿತವಾಗಿರುವ ಎಚ್​ಆರ್​ಎ ಹಣ ವಾಪಸ್ ಕೊಡುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದರು. ಆದರೆ, ಆ ಆದೇಶ ಪಾಲಿಸದ ಅಧಿಕಾರಿಗಳು ಎಚ್​ಆರ್​ಎ ಕಡಿತ ಮಾಡುವುದನ್ನು ಮುಂದುವರಿಸಿದ್ದರು.

    ಹೊಸ ವರಸೆ ತೆಗೆದ ಅಧಿಕಾರಿ

     ಮನೆ ಬಗೆಗಿನ ಗೊಂದಲ ಬಗೆಹರಿಸುವಂತೆ ಹಾಗೂ ತಮ್ಮ ಅನಾರೋಗ್ಯದ ಬಗ್ಗೆಯೂ ವಿವರಿಸಿ ಮತ್ತೆ 2020ರ ಮಾ.20ರಂದು ರಾಮು ಬರೆದಿದ್ದರು. ಅಲ್ಲದೆ, ಅದರೊಂದಿಗೆ ಈ ಹಿಂದೆ ಪೊಲೀಸ್ ಕಮಿಷನರ್​ಗಳು ಮಾಡಿರುವ ಆದೇಶ ಪ್ರತಿಗಳನ್ನೂ ಲಗತ್ತಿಸಿದ್ದರು. ಅದಕ್ಕೆ ಕಳೆದ ಮೇ 19ರಂದು ಪ್ರತಿಕ್ರಿಯಿಸಿರುವ ಪಶ್ಚಿಮ ವಿಭಾಗ ಡಿಸಿಪಿ ರಮೇಶ್ ಬಾನೋತ್, ವಸತಿ ಗೃಹದಲ್ಲಿ ನೆಲೆಸಿರುವ ನಿಮ್ಮ ಪತ್ನಿ ಮತ್ತು ಮನೆಯ ಸಾಮಗ್ರಿಗಳನ್ನು ಖಾಲಿ ಮಾಡಿಸಿ. ವಿದ್ಯುತ್ ಬಿಲ್, ನೀರಿನ ಬಿಲ್ ಬಾಕಿ ಪಾವತಿ ಮಾಡಿ ಎನ್​ಒಸಿ ಪಡೆದು ಮನೆ ಬೀಗ ಕೀಯನ್ನು ಸಂಬಂಧ ಪಟ್ಟವರಿಗೆ ಒಪ್ಪಿಸಿ ಎಂದು ಹಿಂಬರಹ ಕೊಟ್ಟಿದ್ದಾರೆ.

    2017ರಲ್ಲಿ ಹೈಗ್ರೌಂಡ್ಸ್ ಸಂಚಾರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಪಾರ್ಶ್ವ ವಾಯುಗೆ ತುತ್ತಾಗಿ ಹಾಸಿಗೆ ಹಿಡಿದರು. ದೀರ್ಘಕಾಲ ಕರ್ತವ್ಯಕ್ಕೆ ಗೈರಾಗಿರುವ ಕಾರಣ ಇದೀಗ ವೇತನ ಬರುತ್ತಿಲ್ಲ. ತಾಯಿ ಮತ್ತು ಸಹೋದರಿ ರಾಮು ಅವರ ಅವಲಂಬನೆಯಲ್ಲಿದ್ದಾರೆ. ದೈನಂದಿನ ಜೀವನಕ್ಕೂ ಹಣವಿಲ್ಲದೆ ಪರದಾಡುತ್ತಿದ್ದಾರೆ.

    ಪೊಲೀಸ್ ಆಯುಕ್ತರ ಆದೇಶಕ್ಕೂ ಕಿಮ್ಮತ್ತಿಲ್ಲ!: ರಾಮು ಮನವಿ ಮೇರೆಗೆ 2014ರ ನ. 18ರಂದು ಮನೆ ಖಾಲಿ ಮಾಡುವಂತೆ ರಾಮು ಪತ್ನಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ರಾಮು ಪತ್ನಿ ಕ್ವಾರ್ಟರ್ಸ್ ಬೇಕೆಂದು ಕಮಿಷನರ್​ಗೆ ಮನವಿ ಪತ್ರ ನೀಡಿದ್ದರು. ಪರಿಶೀಲನೆ ನಡೆಸಿದ್ದ ಆಯುಕ್ತರು, ಸರ್ಕಾರಿ ನೌಕರರಿಗೆ ಮಾತ್ರ ವಾಸಕ್ಕೆ ಅವಕಾಶವಿದೆ. ನೌಕರರೇ ರದ್ದುಪಡಿಸುವಂತೆ ಕೋರಿದಾಗ ಅವರ ಪತ್ನಿ ವಾಸವಿರಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದರು. ರಾಮು, ವೇತನದಲ್ಲಿ ಕಡಿತ ವಾದ ಎಚ್​ಆರ್​ಎ ಹಿಂದಿರುಗಿಸುವಂತೆ 2015ರ ಜ.26ರಂದು ಅಂದಿನ ಪೊಲೀಸ್ ಕಮಿಷನರ್ ಆದೇಶಿಸಿದ್ದರು. ಇದ್ಯಾವುದೂ ಪಾಲನೆ ಆಗಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts