ಸೈಬರ್ ವಂಚನೆ 5 ಪಟ್ಟು ಹೆಚ್ಚಳ! ರಾಜ್ಯದಲ್ಲಿ 54 ಕೋಟಿ ರೂ. ಕಳ್ಳರ ಪಾಲು

ವಿಜಯವಾಣಿ-2024-07-29T102825.142
Published on

| ಕೀರ್ತಿನಾರಾಯಣ ಸಿ., ಬೆಂಗಳೂರು

ಬೆಂಗಳೂರು: ಸರ್ಕಾರ, ಪೊಲೀಸರ ಜಾಗೃತಿ ಕಾರ್ಯಕ್ರಮಗಳ ಹೊರತಾಗಿಯೂ ರಾಜ್ಯದಲ್ಲಿ ಸೈಬರ್ ಅಪರಾಧ ತಗ್ಗಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ದೇಶದಲ್ಲಿ ಡೆಬಿಟ್, ಕ್ರೆಡಿಟ್ ಕಾರ್ಡ್, ಆನ್​ಲೈನ್ ಬ್ಯಾಂಕಿಂಗ್ ವಂಚನೆ ಪ್ರಕರಣಗಳು 5 ಪಟ್ಟು ಹೆಚ್ಚಾಗಿವೆ. ಒಟ್ಟಾರೆ 1457 ಕೋಟಿ ರೂ. ಸೈಬರ್ ಕಳ್ಳರ ಪಾಲಾಗಿದೆ. ಇನ್ನು ಈ ಜಾಲದಲ್ಲಿ ಕರ್ನಾಟಕದವರು ಕಳೆದುಕೊಂಡ ಮೊತ್ತ 54 ಕೋಟಿ ರೂ.

ಆರ್​ಬಿಐ ಮಾಹಿತಿ ಪ್ರಕಾರ 2022-23ರಲ್ಲಿ 6669 ಸೈಬರ್ ವಂಚನೆ ಪ್ರಕರಣ ದೃಢಪಟ್ಟಿತ್ತು. ಒಟ್ಟಾರೆ 277 ಕೋಟಿ ರೂ. ಎಗರಿಸಲಾಗಿತ್ತು. 2023-24ರಲ್ಲಿ 29082 ಕೇಸ್ ವರದಿಯಾಗಿದ್ದು, ಬರೋಬ್ಬರಿ 1457 ಕೋಟಿ ರೂ. ವಂಚನೆಯಾಗಿದೆ. ಅಂದರೆ ಒಂದೇ ವರ್ಷದಲ್ಲಿ ವಂಚನೆ ಪ್ರಮಾಣ 5 ಪಟ್ಟು ಏರಿಕೆಯಾಗಿದೆ. ಅದರಲ್ಲೂ 1 ಲಕ್ಷ ರೂ. ಮೇಲ್ಪಟ್ಟು ವಂಚನೆಯಾದ ಪ್ರಕರಣಗಳನ್ನಷ್ಟೇ ಪರಿಗಣಿಸಲಾಗಿದೆ. ಹೀಗಾಗಿ 1 ಲಕ್ಷಕ್ಕಿಂತ ಕಡಿಮೆ ವಂಚನೆ ಪ್ರಕರಣ ಲೆಕ್ಕಕ್ಕೆ ಪಡೆದುಕೊಂಡರೆ ವಂಚನೆ ಪ್ರಮಾಣ ಇನ್ನಷ್ಟು ಏರಿಕೆ ಆಗುತ್ತದೆ.

2022-23ರಲ್ಲಿ ಕರ್ನಾಟಕದಲ್ಲಿ ದಾಖಲಾದ 244 ಕೇಸ್​ಗಳಲ್ಲಿ 11.50 ಕೋಟಿ ರೂ. ಲೂಟಿಯಾಗಿತ್ತು. 2023-24ರಲ್ಲಿ 1336 ಪ್ರಕರಣ ವರದಿಯಾಗಿದ್ದು, ಇದರಲ್ಲಿ 54.84 ಕೋಟಿ ರೂ. ಸೈಬರ್ ಕಳ್ಳರ ಜೇಬು ಸೇರಿದೆ. ಉಳಿದಂತೆ 2023-24ರಲ್ಲಿ ಮಹಾರಾಷ್ಟ್ರದಲ್ಲಿ 6514 ಪ್ರಕರಣಗಳಲ್ಲಿ 282.42 ಕೋಟಿ ರೂ., ದೆಹಲಿಯಲ್ಲಿ 2487 ಪ್ರಕರಣಗಳಲ್ಲಿ 62.12 ಕೋಟಿ ರೂ., ತಮಿಳುನಾಡಿನಲ್ಲಿ 6871 ಪ್ರಕರಣಗಳಲ್ಲಿ 553.28 ಕೋಟಿ ರೂ. ಹಾಗೂ ಉತ್ತರಪ್ರದೇಶದಲ್ಲಿ 1462 ಕೇಸ್​ಗಳಲ್ಲಿ 83.91 ಕೋಟಿ ರೂ. ಮೋಸ ಆಗಿದೆ.

1930ಗೆ ಕರೆ ಮಾಡಿ ದೂರು ಕೊಡಿ: ಸೈಬರ್ ಅಪರಾಧಕ್ಕೆ ತುತ್ತಾಗಿರುವುದು ಗೊತ್ತಾದ ತಕ್ಷಣ ನ್ಯಾಷನಲ್ ಸೈಬರ್ ಕ್ರೖೆಂ ರಿಪೋರ್ಟಿಂಗ್ ಪೋರ್ಟಲ್ (ಎನ್​ಸಿಆರ್​ಪಿ) ಸಹಾಯವಾಣಿ ಸಂಖ್ಯೆ 1930ಗೆ ಕರೆ ಮಾಡಿ ದೂರು ಕೊಡಿ. ಮುಂದೇನು ಮಾಡಬೇಕು ಎಂಬುದರ ಕುರಿತಾಗಿಯೂ ಸಹಾಯವಾಣಿ ಸಿಬ್ಬಂದಿಯೇ ತಿಳಿಸುತ್ತಾರೆ.

1930ಗೆ ಕರೆ ಮಾಡಿ

ಸೈಬರ್ ಅಪರಾಧಕ್ಕೆ ತುತ್ತಾಗಿರು ವುದು ಗೊತ್ತಾದ ತಕ್ಷಣ ನ್ಯಾಷನಲ್ ಸೈಬರ್ ಕ್ರೖೆಂ ರಿಪೋರ್ಟಿಂಗ್ ಪೋರ್ಟಲ್ (ಎನ್​ಸಿಆರ್​ಪಿ) ಸಹಾಯವಾಣಿ ಸಂಖ್ಯೆ 1930ಗೆ ಕರೆ ಮಾಡಿ ದೂರು ಕೊಡಿ. ಮುಂದೇನು ಮಾಡಬೇಕು ಎಂಬುದರ ಕುರಿತಾಗಿಯೂ ಸಹಾಯವಾಣಿ ಸಿಬ್ಬಂದಿಯೇ ತಿಳಿಸುತ್ತಾರೆ.

ಸೈಬರ್ ಪೊಲೀಸರ ಟಿಪ್ಸ್ ಏನು?

·ಕೆವೈಸಿ ಅಪ್​ಡೇಟ್, ಖಾತೆ ನವೀಕರಣ ಕರೆ, ಸಂದೇಶ, ವಾಟ್ಸ್​ಆಪ್ ಮಾಹಿತಿ ನಂಬಬೇಡಿ· ಕೆವೈಸಿ ಅಪ್​ಡೇಟ್ ಅಥವಾ ಇನ್ನಾವುದೇ ಮಾಹಿತಿ ಇದ್ದರು ನೇರ ಬ್ಯಾಂಕ್​ಗೆ ಹೋಗಿ ವಿಚಾರಿಸಿ· ಯಾವುದೇ ರೀತಿ ವೈಯಕ್ತಿಕ ವಿವರ, ಒಟಿಪಿಯನ್ನು ಯಾರೊಂದಿಗೂ ಹಂಚಿಕೊಳ್ಳಲೇಬೇಡಿ · ಸೈಬರ್ ವಂಚನೆಗೆ ಒಳಗಾಗಿರುವುದು ಗೊತ್ತಾದರೆ ತಕ್ಷಣ ಕಾರ್ಡ್​ಅನ್ನು ಬ್ಲಾಕ್ ಮಾಡಿಸಿ · ಪದೇಪದೆ ವೆಬ್​ಸೈಟ್​ಗಳಲ್ಲಿ ಆನ್​ಲೈನ್ ಪಾವತಿಯನ್ನು ಸಾಧ್ಯವಾದಷ್ಟು ತಪ್ಪಿಸಿ. ಯಾವಾಗಲೂ ಆನ್​ಲೈನ್ ಬ್ಯಾಂಕ್ ಖಾತೆ ನಿರ್ವಹಣೆಗೆ ಭದ್ರವಾದ ಪಾಸ್​ವರ್ಡ್ ಇಟ್ಟುಕೊಳ್ಳಿ · ಸಾರ್ವಜನಿಕ ಸ್ಥಳಗಳಲ್ಲಿ ವೈಫೈ ಅಥವಾ ಇಂಟರ್​ನೆಟ್ ಸಂಪರ್ಕವನ್ನು ಪಡೆದುಕೊಳ್ಳಬೇಡಿ ·ಕಂಪ್ಯೂಟರ್ ಹಾಗೂ ಮೊಬೈಲ್ ಅಪ್ಲಿಕೇಷನ್ ಅನ್ನು ನಿರಂತರವಾಗಿ ಅಪ್​ಡೇಟ್ ಮಾಡುತ್ತಿರಿ.

ದೂರ ಸಂಪರ್ಕ ಇಲಾಖೆ ಕೆವೈಸಿ ಅಪ್​ಡೇಟ್ ಹಾಗೂ ಬ್ಯಾಂಕ್ ಖಾತೆ ನವೀಕರಣದ ಹೆಸರಲ್ಲಿ ವಂಚನೆ ಪ್ರಕರಣಗಳ ದೂರು ದಾಖಲಿಸಲು ಸಂಚಾರ ಸಾಥಿ ಪೋರ್ಟಲ್​ನಲ್ಲಿ ಡಿಜಿಟಲ್ ಇಂಟಲಿಜೆನ್ಸ್ ಪ್ಲಾಟ್​ಫಾಮ್ರ್ (ಡಿಐಪಿ) ಹಾಗೂ ಚಕ್ಷು ಸೌಲಭ್ಯ ಪರಿಚಯಿಸಿದೆ. ಮೊಬೈಲ್ ಕರೆ, ಸಂದೇಶ ಅಥವಾ ವಾಟ್ಸ್​ಆಪ್ ಮೆಸೇಜ್​ನಲ್ಲಿ ಸೈಬರ್ ವಂಚನೆ ಬಗ್ಗೆ ಅನುಮಾನ ಮೂಡಿಸಿದರೆ ತಕ್ಷಣ ಪೋರ್ಟಲ್​ನಲ್ಲಿ ದೂರು ದಾಖಲಿಸಲು ಸೂಚನೆ ಕೊಡಲಾಗಿದೆ.

ಯಾವ್ಯಾವ ಬ್ಯಾಂಕ್​ನಲ್ಲಿ ವಂಚನೆ?

ಆರ್​ಬಿಐ ಮಾಹಿತಿ ಪ್ರಕಾರ ಆಕ್ಸಿಸ್, ಬ್ಯಾಂಕ್ ಆಫ್ ಬರೋಡ, ಸೆಂಟ್ರಲ್ ಬ್ಯಾಂಕ್ ಆಪ್ ಇಂಡಿಯಾ, ಎಚ್​ಡಿಎಫ್​ಸಿ, ಐಸಿಐಸಿಐ, ಐಡಿಬಿಐ, ಫೆಡರಲ್, ಇಂಡಸ್ ಇಂಡ್, ಕೋಟಕ್ ಮಹೀಂದ್ರ, ಆರ್​ಬಿಎಲ್, ಎಸ್​ಬಿಐ, ಯೂನಿಯನ್, ಯೆಸ್ ಬ್ಯಾಂಕ್ ಸೇರಿ 64 ಬ್ಯಾಂಕ್ ಖಾತೆಗಳಿಗೆ ಸೈಬರ್ ಕಳ್ಳರು ಕನ್ನ ಹಾಕಿರುವ ಮಾಹಿತಿ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net