

ಬೆಂಗಳೂರು: ಕನ್ನಡದ ‘ಐರಾವತ’ ಸೇರಿ ಹಿಂದಿ, ತೆಲುಗು ಹಾಗೂ ತಮಿಳು ಚಿತ್ರದಲ್ಲಿ ನಟಿಸಿರುವ ನಟಿ ಊರ್ವಶಿ ರೌಟೇಲಾರ ಮುಂದಿನ ಸಿನಿಮಾ ‘ಘುಸ್ಪೈಠಿಯಾ’. ಸೈಬರ್ ಕ್ರೈಂ ಆಧಾರಿತ ಚಿತ್ರ ಇದಾಗಿದ್ದು, ‘ತಿರುತ್ತಾ ಪಾಯಲೇ’, ‘ಕಾಂತಾಸ್ವಾಮಿ’ ನಿರ್ದೇಶಕ ಸುಸಿ ಗಣೇಶನ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ‘ಪಿಕು’, ‘ಮೇಡ್ಂ ಚೀಫ್ ಮಿನಿಸ್ಟರ್’, ‘ಗ್ಯಾಸ್ಲೈಟ್’, ಫೈಟರ್’ ನಟ ಅಕ್ಷಯ್ ಒಬೆರಾಯ್ ಹಾಗೂ ‘ಗುಂಜನ್ ಸಕ್ಸೇನಾ: ದ ಕಾರ್ಗಿಲ್ ಗರ್ಲ್’ ಖ್ಯಾತಿಯ ವಿನೀತ್ಕುಮಾರ್ ಸಿಂಗ್ ಮುಖ್ಯಭೂಮಿಕೆಯಲ್ಲಿದ್ದಾರೆ. ಮುಂಬೈನಲ್ಲಿ ಇತ್ತೀಚೆಗೆಷ್ಟೇ ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಲಾಯಿತು. ಇನ್ನೊಂದು ವಿಶೇಷ ಏನೆಂದರೆ, ಕನ್ನಡದ ‘ಉಪ್ಪು ಹುಳಿ ಖಾರ’, ‘ನಾತಿಚರಾಮಿ’, ‘ಪಡ್ಡೆಹುಲಿ’ ಸೇರಿ ‘ಗಾಳಿಪಟ 2’ ನಿರ್ಮಿಸಿದ್ದ ನಿರ್ಮಾಪಕ ರಮೇಶ್ ರೆಡ್ಡಿ ‘ಘುಸ್ಪೈಠಿಯಾ’ಗೆ ಬಂಡವಾಳ ಹೂಡಿದ್ದಾರೆ. ಈ ಮೂಲಕ ಕನ್ನಡ ಮೂಲದ ಮತ್ತೊಬ್ಬರು ಬಾಲಿವುಡ್ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಕನ್ನಡದಲ್ಲೇ ಮಾತನಾಡಿ, ‘ಈ ಚಿತ್ರಕ್ಕೆ ನಿಮ್ಮೆಲ್ಲರ ಸಹಕಾರವಿರಲಿ. ಮುಂದೆ ಕೂಡ ಹಿಂದಿ ಚಿತ್ರಗಳನ್ನು ನಿರ್ಮಿಸುತ್ತೇನೆ’ ಎಂದರು. ಆಗಸ್ಟ್ 9ರಂದು ‘ಘುಸ್ಪೈಠಿಯಾ’ ಬಿಡುಗಡೆಯಾಗಲಿದೆ.
ಬಾಲಿವುಡ್ಗೆ ಕನ್ನಡದ ಮತ್ತೊಂದು ಸಂಸ್ಥೆ:
‘ಘುಸ್ಪೈಠಿಯಾ’ ನಿರ್ಮಾಣಕ್ಕೆ ಮುಂದಾಗಿರುವ ರಮೇಶ್ ರೆಡ್ಡಿ ಕನ್ನಡದ ಮೂಲದವರು ಎಂಬುದು ವಿಶೇಷ. ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾ ನಿರ್ಮಾಣಕ್ಕೆ ಕರ್ನಾಟಕ ಮೂಲದ ಸಂಸ್ಥೆಗಳು ಮುಂದಾಗುತ್ತಿದ್ದಾವೆ. ಇದೀಗ ರಮೇಶ್ ರೆಡ್ಡಿ ಹೊಸ ಸೇರ್ಪಡೆ. ಈ ಹಿಂದೆ ಹೊಂಬಾಳೆ (ಸಲಾರ್, ಧೂಮಂ), ರಾಕ್ಲೈನ್ ಪ್ರೊಡಕ್ಷನ್ (ಲಿಂಗ, ಭಜರಂಗಿ ಬಾಯಿಜಾನ್), ಕೆಆರ್ಜಿ ಪ್ರೊಡಕ್ಷನ್ (ಉಲ್ಲೋರೆಕು), ಕೆವಿಎನ್ ಸಂಸ್ಥೆ (ಕಲ್ಕಿ 2898 ಎಡಿ, ಕಾಂಗುವಾ) ಸಿನಿಮಾಗಳನ್ನು ನಿರ್ಮಿಸಿವೆ. ಕನ್ನಡದ ‘45’ ಸಿನಿಮಾ ಕೂಡ ರಮೇಶ್ ರೆಡ್ಡಿ ಅವರ ಬ್ಯಾನರಡಿಯಲ್ಲಿ ನಿರ್ಮಾಣವಾಗುತ್ತಿದೆ.
ಎರಡೂವರೆ ಲಕ್ಷ ವೀಕ್ಷಣೆ: ಊರ್ವಶಿ ರೌಟೇಲಾ, ಅಕ್ಷಯ್ ಒಬೇರಾಯ್ ಹಾಗೂ ವಿನೀತ್ ಕುಮಾರ್ ಸಿಂಗ್ ಅಭಿನಯದ ‘ಘುಸ್ಪೈಠಿಯಾ’ ಸೈಬರ್ ಕ್ರೈಂ ಆಧಾರಿತವಾಗಿದೆ. ಹನಿಟ್ರ್ಯಾಪ್, ಡಿಜಿಟಲ್ ಮೋಸ ಸೇರಿ ಹಲವು ಅಂಶಗಳನ್ನು ತೋರಿಸಲಾಗಿದೆ. ಚಿತ್ರದ ಟ್ರೇಲರ್ ಈಗಾಗಲೇ ಬಿಡುಗಡೆಯಾಗಿದ್ದು, ಎರಡೂವರೆ ಲಕ್ಷ ವೀಕ್ಷಣೆ ಕಂಡಿದೆ.