ಮಕ್ಕಳಿಗೆ ಸೈಬರ್ ಕಳ್ಳರ ಗಾಳ: ಮೊಬೈಲ್ ಗೇಮ್ ವ್ಯಸನಿಗಳನ್ನಾಗಿಸಿ ಬಳಿಕ ದುಡ್ಡಿಗೆ ಬ್ಲ್ಯಾಕ್​ಮೇಲ್​

Cyber Crime
Published on

| ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

ಮಕ್ಕಳ ಸ್ಮಾರ್ಟ್​ಫೋನ್ ಕ್ರಿಯೆಟಿವಿಟಿ ಬಗ್ಗೆ ಹೆಮ್ಮೆ ಪಡುವ ಪಾಲಕರು ಗಮನಿಸಲೇಬೇಕಾದ ಸುದ್ದಿ ಇದು! ಹೌದು, ಕರೊನಾ ಕಾಲಘಟ್ಟ ಹಾಗೂ ನಂತರದ ದಿನಗಳಲ್ಲಿ ಕಲಿಕೆ, ಹೋಮ್ರ್ಕ್ ಜತೆಗೆ ರೀಲ್ಸ್, ಯೂಟ್ಯೂಬ್ ಚಾನೆಲ್​ನಂಥ ಹವ್ಯಾಸ, ಫೇಸ್​ಬುಕ್, ಇನ್​ಸ್ಟಾಗ್ರಾಂ, ಸ್ನ್ಯಾಪ್​ ಚ್ಯಾಟ್​ ಮತ್ತಿತರ ಗೀಳು ಹತ್ತಿಸಿಕೊಂಡಿರುವ ಮಕ್ಕಳು ಸೈಬರ್ ವಂಚಕರ ಖೆಡ್ಡಾಕ್ಕೆ ಬೀಳುವ ಅಪಾಯ ಹೆಚ್ಚಾಗಿದೆ. ಇದರಿಂದ ಮಕ್ಕಳು ಮಾತ್ರವಲ್ಲ, ಇಡೀ ಕುಟುಂಬವೇ ಸಂಕಷ್ಟಕ್ಕೀಡಾಗುವ ಪರಿಸ್ಥಿತಿ ಎದುರಾಗಬಹುದು.

ಆಂಡ್ರಾಯ್್ಡ ಫೋನ್ ಬಳಕೆಯಲ್ಲಿ ತೊಡಗಿರುವ ಮಕ್ಕಳಿಗೆ ವಿವಿಧ ಆಕರ್ಷಕ ಗೇಮ್​ಗಳ ಲಿಂಕ್​ಗಳನ್ನು ಕಳುಹಿಸಿ, ಮಾನಸಿಕ ವ್ಯಸನಿಗಳನ್ನಾಗಿಸುವ ಜಾಲ ದೇಶಾದ್ಯಂತ ಸಕ್ರಿಯವಾಗಿದೆ. ವಿವಿಧ ಆಮಿಷವೊಡ್ಡಿ ಮಕ್ಕಳನ್ನು ಕೈಗೊಂಬೆ ಮಾಡಿಕೊಳ್ಳುತ್ತಿರುವ ವಂಚಕರು, ಕುಟುಂಬಸ್ಥರ ಅಶ್ಲೀಲ ಪೋಟೋ -ವಿಡಿಯೋಗಳನ್ನು ಪಡೆದು ಬ್ಲಾ್ಯಕ್​ವೆುೕಲ್ ಮಾಡುತ್ತಿದ್ದಾರೆ.

ಸೈಬರ್ ಕ್ರಿಮಿನಲ್​ಗಳು ಮಕ್ಕಳನ್ನೇ ಟಾರ್ಗೆಟ್ ಮಾಡಿ ಆನ್​ಲೈನ್​ನಲ್ಲೇ ಬಲೆ ಬೀಸುತ್ತಿದ್ದಾರೆ. ಇದಕ್ಕೆ ಸೈಬರ್ ಕ್ರೖೆಂ ಭಾಷೆಯಲ್ಲಿ ‘ಆನ್​ಲೈನ್ ಗ್ರೂಮಿಂಗ್’ ಎನ್ನಲಾಗುತ್ತಿದೆ. ಕೋವಿಡ್ ಲಾಕ್​ಡೌನ್ ಮತ್ತು ನಂತರದ ದಿನಗಳಲ್ಲಿ ಸ್ಮಾರ್ಟ್​ಫೋನ್​ಗಳು ಮಕ್ಕಳ ಕೈ ಸೇರಿವೆ. ಆನ್​ಲೈನ್ ಗೇಮ್ ಇನ್​ಸ್ಟಾಗ್ರಾಂ ಇನ್ನಿತರ ಜಾಲತಾಣದಲ್ಲಿ ಮಕ್ಕಳು ಹೆಚ್ಚು ನಿರತರಾಗಿದ್ದಾರೆ. ಇವರನ್ನೇ ಟಾರ್ಗೆಟ್ ಮಾಡಿರುವ ಸೈಬರ್ ಕಳ್ಳರು, ಸಾಮಾಜಿಕ ಜಾಲತಾಣಗಳ ಮೂಲಕವೇ ಪರಿಚಯ ಮಾಡಿಕೊಂಡು ಹೊಸ ಹೊಸ ಗೇಮ್ಳು ಹಾಗೂ ಇನ್ನಿತರ ಚಟುವಟಿಕೆಗಳ ಲಿಂಕ್​ಗಳನ್ನು ಕಳುಹಿಸುತ್ತಿದ್ದಾರೆ.

ನಿಧಾನವಾಗಿ ಅವರನ್ನು ಆನ್​ಲೈನ್ ಗೇಮ್ಳ ವ್ಯಸನಿಗಳಾಗಿಸಿದ ನಂತರ ಮಾನಸಿಕವಾಗಿ ಹಿಡಿತಕ್ಕೆ ತೆಗೆದುಕೊಳ್ಳುತ್ತಾರೆ. ನಂತರ ಹೆದರಿಸಿ ಕುಟುಂಬದ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ರಹಸ್ಯವಾಗಿ ಪಡೆದು, ಅದನ್ನು ಪಾಲಕರಿಗೆ ಕಳುಹಿಸಿ, ಬ್ಲಾ್ಯಕ್​ವೆುೕಲ್ ಮೂಲಕ ಹಣ ಸುಲಿಗೆ ಮಾಡುತ್ತಿದ್ದಾರೆ. ಅಲ್ಲದೆ, ಕೆಲವೊಂದು ಪ್ರಕರಣಗಳಲ್ಲಿ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಪಾಲಕರಿಗೆ ಕಳುಹಿಸುವುದಾಗಿ ಮಕ್ಕಳಿಗೇ ಹೆದರಿಸಿ ಅವರಿಂದಲೇ ಬ್ಯಾಂಕ್ ಖಾತೆಗಳ ವಿವರಗಳನ್ನು ಪಡೆದುಕೊಂಡು ಹಣ ಎಗರಿಸಿರುವ ಪ್ರಕರಣಗಳೂ ವರದಿಯಾಗಿವೆ.

ಖಾಸಗಿ ವಿಡಿಯೋ ಸೆರೆ: ಮೊದಲು ಮಕ್ಕಳಿಗೆ ಹೊಸ ಗೇಮ್ ಅಥವಾ ಅವರ ಅಶ್ಲೀಲ ವಿಡಿಯೋ ಮುಂದಿಟ್ಟುಕೊಂಡು ಬ್ಲ್ಯಾಕ್​ಮೇಲ್​ ಮಾಡುತ್ತಾರೆ. ತಂದೆ-ತಾಯಿಯ ಖಾಸಗಿ ಕ್ಷಣವನ್ನು ವಿಡಿಯೋ ಸೆರೆಹಿಡಿದು ಕಳುಹಿಸುವಂತೆ ಪ್ರಚೋದಿಸಿ ಪಡೆಯುತ್ತಾರೆ. ಪಾಲಕರ ಮೊಬೈಲ್​ಗೆ ಕರೆ ಮಾಡಿ ಬೆದರಿಕೆ ಒಡ್ಡಿ ಹಣ ವಸೂಲಿ ಶುರು ಮಾಡುತ್ತಾರೆ. ಇತ್ತೀಚೆಗೆ 13 ವರ್ಷದ ಬಾಲಕ, ತಂದೆ-ತಾಯಿ ಖಾಸಗಿ ವಿಡಿಯೋ ಸೈಬರ್ ಕಳ್ಳರಿಗೆ ಕಳುಹಿಸಿ ಪೇಚಿಗೆ ಸಿಲುಕಿದ್ದ. ಈ ಬಗ್ಗೆ ಸಿಐಡಿಯಲ್ಲಿ ಕೇಸ್ ದಾಖಲಾಗಿತ್ತು.

ಆನ್​ಲೈನ್ ಗೇಮ್ ಜಾಲತಾಣದಿಂದ ಮಕ್ಕಳನ್ನು ಆದಷ್ಟು ದೂರ ಇರಿಸಿ. ಆನ್​ಲೈನ್​ನಲ್ಲಿ ಯಾವುದೇ ರೀತಿಯ ವಂಚನೆಗೆ ಒಳಗಾಗಿದ್ದರೆ ತಕ್ಷಣ ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಮಾಡಿ. | ರಮಣ್ ಗುಪ್ತ ಜಂಟಿ ಪೊಲೀಸ್ ಆಯುಕ್ತ (ಅಪರಾಧ)

ಟಾರ್ಗೆಟ್​ ಯಾರು?: ಸೈಬರ್ ಕ್ರಿಮಿನಲ್​ಗಳು ಆನ್​ಲೈನ್ ಗ್ರೂಮಿಂಗ್​ನಲ್ಲಿ 10 ರಿಂದ 16 ವರ್ಷದ ಮಕ್ಕಳನ್ನೇ ಟಾರ್ಗೆಟ್ ಮಾಡಿದ್ದಾರೆ. ರಾಜ್ಯದಲ್ಲಿ ಈ ಸಂಬಂಧ 159 ಪ್ರಕರಣಗಳು ದಾಖಲಾಗಿವೆ.

ಪಾಲಕರು ಮಾಡಬೇಕಾದ್ದೇನು?
  • ಮಕ್ಕಳು ಆನ್​ಲೈನ್​ನಲ್ಲಿ ಹೆಚ್ಚು ಹೊತ್ತು ಕಳೆಯದಂತೆ ನೋಡಿಕೊಳ್ಳಿ
  • ಆನ್​ಲೈನ್​ನಲ್ಲಿ ಮಕ್ಕಳು ಏನೆಲ್ಲ ಮಾಡುತ್ತಿದ್ದಾರೆ ಎಂಬುದರ ಮೇಲೆ ಕಣ್ಣಿಡಿ
  • ಡಿವೈಎಸ್​ಗಳಲ್ಲಿ ಭದ್ರತೆ, ಗೌಪ್ಯತೆಗೆ ಕಾಪಾಡುವ ಫೀಚರ್ ಸಕ್ರಿಯಗೊಳಿಸಿ
  • ಆನ್​ಲೈನ್​ನಲ್ಲಿ ಹೊಸಬರ ಒಡನಾಟದ ಬಗ್ಗೆ ನಿಗಾ ವಹಿಸಿ
  • ರಾತ್ರಿ ಸಮಯದಲ್ಲಿ ಮಕ್ಕಳ ಕೈಗೆ ಮೊಬೈಲ್ ಸಿಗದಂತೆ ಎಚ್ಚರ ವಹಿಸಿ
  • ಮಕ್ಕಳ ವ್ಯಾಲೆಟ್, ಮೊಬೈಲ್ ಬ್ಯಾಂಕಿಂಗ್​ನಲ್ಲಿ ಹೆಚ್ಚು ಹಣ ಇಡಬೇಡಿ
  • ತಮ್ಮ ಬ್ಯಾಂಕಿಂಗ್ ಪಾಸ್​ವರ್ಡ್ ಮಕ್ಕಳಿಗೆ ಗೊತ್ತಾಗದಂತೆ ಕಾಪಾಡಿ

ಟಾರ್ಗೆಟ್ ಹೇಗೆ?

  • ಫೇಸ್​ಬುಕ್, ಇನ್​ಸ್ಟಾಗ್ರಾಂ ಸೇರಿ ಇನ್ನಿತರ ಸಾಮಾಜಿಕ ಜಾಲತಾಣಗಳ ಮೂಲಕ ಮಕ್ಕಳ ಪರಿಚಯ
  • ಮಕ್ಕಳಿಗೆ ಇಷ್ಟವಾಗುವಂತಹ ವಿವಿಧ ರೀತಿ ಹೊಸ ಗೇಮ್​ಗಳ ಆನ್​ಲೈನ್ ಲಿಂಕ್ ಕಳುಹಿಸುವುದು
  • ಮೊದಲು ಆ ಗೇಮ್​ಗಳನ್ನು ಇಷ್ಟಪಡುವ ಮಕ್ಕಳು ಆಟದಲ್ಲಿ ನಿರತರಾಗುತ್ತಾರೆ
  • ಸ್ವಲ್ಪ ದಿನಕ್ಕೆ ಆ ಗೇಮ್ ಮೇಲಿನ ಆಸಕ್ತಿ ಕಡಿಮೆಯಾಗಿ ಹೊಸ ಆಟದ ಲಿಂಕ್ ಕಳಿಸುವಂತೆ ಕೇಳುತ್ತಾರೆ
  • ಇದನ್ನೇ ಲಾಭ ಮಾಡಿಕೊಳ್ಳುವ ಸೈಬರ್ ಕ್ರಿಮಿನಲ್ಸ್ ಗಳು ಆಕರ್ಷಕ ಗೇಮ್ ಲಿಂಕ್ ಕಳುಹಿಸುತ್ತಾರೆ
  • ಆಟವನ್ನು ಯಾವ ರೀತಿ ಆಟವಾಡಬೇಕೆಂಬ ಮಾಹಿತಿ ಬಗ್ಗೆ ಗೌಪ್ಯತೆ ಕಾಪಾಡಿ ಅವರನ್ನು ಕಾಡುತ್ತಾರೆ
  • ಆಟವಾಡಲು ತಿಳಿಯದಿದ್ದಾಗ ಮಕ್ಕಳು ಮತ್ತೆ ಸೈಬರ್ ಕಳ್ಳನ ಸಹಾಯ ಕೋರುತ್ತಾರೆ.
  • ಆಗ ಅರೆಬೆತ್ತಲೆ ಫೋಟೋ ಅಥವಾ ವಿಡಿಯೋವನ್ನು ಕಳುಹಿಸಿದರೆ ಹೇಳಿಕೊಡುವುದಾಗಿ ಗಾಳ ಹಾಕುತ್ತಾರೆ
  • ಗೇಮ್ಸ್​ ವ್ಯಸನಿಗಳಾಗಿರುವ ಮಕ್ಕಳು ನಗ್ನ ಫೋಟೋ ಅಥವಾ ವಿಡಿಯೋವನ್ನು ಕಳುಹಿಸಿ ಸಿಕ್ಕಿಬೀಳುತ್ತಾರೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net