More

  ಹನ್ನೊಂದು ತಿಂಗಳ ಮಗು ನೀರಿನ ತೊಟ್ಟಿಗೆ ಬಿದ್ದು ಸಾವು!; ಇನ್ನೊಂದು ವಾರ ಕಳೆದಿದ್ದರೆ ಫಸ್ಟ್​ ಬರ್ತ್​ಡೇ..

  ಶಿವಮೊಗ್ಗ: ಶಿಕಾರಿಪುರ ತಾಲೂಕಿನ ಚಿಕ್ಕಜೋಗಿಹಳ್ಳಿಯಲ್ಲಿ ಭಾನುವಾರ ಹನ್ನೊಂದು ತಿಂಗಳ ಮಗುವೊಂದು ನೀರಿನ ತೊಟ್ಟಿಯಲ್ಲಿ ಬಿದ್ದು ಮೃತಪಟ್ಟಿದೆ. ಚಿಕ್ಕಜೋಗಿಹಳ್ಳಿಯ ಛಾಯಾಗ್ರಾಹಕ ದೇವರಾಜ್ ಹಾಗೂ ಅನುಷಾ ದಂಪತಿಯ ದ್ವಿತೀಯ ಪುತ್ರ ಅಕ್ಷಯ್ ಮನೆ ಮುಂದಿನ ತೊಟ್ಟಿಯಲ್ಲಿ ಬಿದ್ದು ಸಾವಿಗೀಡಾಗಿದ್ದಾನೆ.

  ಮುಂದಿನ ವಾರ ಒಂದನೇ ವರ್ಷಕ್ಕೆ ಕಾಲಿಡುತ್ತಿದ್ದು ಮಗುವಿನ ಜನ್ಮ ದಿನವನ್ನು ಅದ್ಧೂರಿಯಾಗಿ ಆಚರಿಸಲು ಯೋಜನೆ ಹಾಕಿಕೊಂಡಿದ್ದ ಮನೆಯಲ್ಲೀಗ ಸ್ಮಶಾನ ಮೌನ ಆವರಿಸಿದೆ.

  ಮಹಾಲಯ ಅಮವಾಸ್ಯೆಯಾದ ಭಾನುವಾರ ತಂದೆ ಮನೆ ಮುಂದಿದ್ದ ತೊಟ್ಟಿ (ಸಂಪ್) ಮುಚ್ಚಳ ತೆಗೆದಿದ್ದು ಬೈಕ್ ತೊಳೆಯುತ್ತಿದ್ದರು. ಮನೆಯೊಳಗಿಂದ ಅಂಬೆಗಾಲಿಡುತ್ತ ಹೊರ ಬಂದ ಮಗು ನೀರಿನ ತೊಟ್ಟಿಗೆ ಬಿದ್ದಿದೆ. ತಂದೆ ದೇವರಾಜ್ ಅವರು ಬೈಕ್ ತೊಳೆದು ಪೂಜೆ ಪುನಸ್ಕಾರದ ಕಡೆ ಗಮನ ಕೊಟ್ಟ ಸಂದರ್ಭ ದುರ್ಘಟನೆ ಸಂಭವಿಸಿದೆ.

  ಸ್ವಲ್ಪ ಹೊತ್ತಿನ ನಂತರ ಮಗುವಿನ ಅಜ್ಜ ವಾಹನ ತೊಳೆಯಲು ತೊಟ್ಟಿಯಲ್ಲಿ ಬಗ್ಗಿದಾಗ ಮಗುವನ್ನು ಕಂಡು ದಿಗ್ಭ್ರಾಂತರಾಗಿದ್ದಾರೆ. ತಕ್ಷಣ ಶಿಕಾರಿಪುರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದರೂ ಪ್ರಯೋಜನವಾಗಲಿಲ್ಲ. ಮರಣೋತ್ತರ ಪರೀಕ್ಷೆ ಮಾಡಿದ ವೈದ್ಯಾಧಿಕಾರಿಗಳ ತಂಡ ಮಗುವಿನ ಕಳೆಬರಹವನ್ನು ಪಾಲಕರಿಗೆ ಹಸ್ತಾಂತರಿಸಿದೆ.

  ಭಾನುವಾರ ಸಂಜೆಯೇ ಗ್ರಾಮದ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿತು. ಇಡೀ ಊರಿಗೆ ಊರೇ ಶವಸಂಸ್ಕಾರದಲ್ಲಿ ಭಾಗಿಯಾಗಿದ್ದು ಚಿಕ್ಕಜೋಗಿಹಳ್ಳಿ ಗ್ರಾಮದಲ್ಲಿ ಸಂಪೂರ್ಣ ಮೌನ ಆವರಿಸಿತ್ತು. ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  ಶ್ರೀಧರ ಎಂಬ ಯುವಕ ಮೊಹ್ಮದ್ ಸಲ್ಮಾನ್ ಆದ ಕಥೆ-ವ್ಯಥೆ; ಬಲವಂತದ ಖತ್ನಾ, ಮತಾಂತರ..

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts