ರೈಲು ಹರಿದು ದೇಹ ಎರಡು ಭಾಗ! ಇದರಲ್ಲಿ ಯಾರದ್ದೂ ತಪ್ಪಿಲ್ಲ ಎಂದು ಹೇಳುತ್ತಲೇ ಪ್ರಾಣ ಬಿಟ್ಟ ಯುವಕ

train
Published on

ಲಖನೌ: ರೈಲು ಹರಿದು ಯುವಕನ ದೇಹ ಎರಡು ಭಾಗವಾಗಿರುವ ಘಟನೆ ಉತ್ತರ ಪ್ರದೇಶದ ಶಹಜನ್​ಪುರದಲ್ಲಿ ನಡೆದಿದೆ. ಕಾಳುಗಳು ತುಂಡರಿಸಿ ಬಿದ್ದರೂ ಎಚ್ಚರವಿದ್ದ ಯುವಕ ಇದರಲ್ಲಿ ಯಾರದ್ದೂ ತಪ್ಪಿಲ್ಲವೆಂದು ಹೇಳುತ್ತಲೇ ಪ್ರಾಣ ಬಿಟ್ಟಿದ್ದಾಗಿ ಹೇಳಲಾಗಿದೆ.

19 ವರ್ಷದ ಹರ್ಷವರ್ಧನ್​ ಸೋಮವಾರ ಬೆಳಗ್ಗೆ 10 ಗಂಟೆಯ ಹೊತ್ತಿಗೆ ತನ್ನ ತಾಯಿಯ ಬಳಿ ಹಣ ಪಡೆದು ಮನೆಯಿಂದ ಹೊರನಡೆದಿದ್ದಾನೆ. ಅದಾದ ನಂತರ ರೈಲು ಹಳಿಯತ್ತ ಬಂದು ಕುಳಿತ ಆತ ರೈಲಿಗಾಗಿ ಕಾದಿದ್ದಾನೆ. ರೈಲು ಇನ್ನೇನು ಹತ್ತಿರ ಬಂತು ಎನ್ನುವಷ್ಟರಲ್ಲಿ ಹಳಿಯ ಮೇಲೆ ಹಾರಿದ್ದಾನೆ. ಇದರಿಂದಾಗಿ ಯುವಕನ ದೇಹ ಎರಡು ತುಂಡಾಗಿದೆ.

ಎರಡು ಕಾಲುಗಳು ದೇಹದಿಂದ ಬೇರೆಯಾಗಿದ್ದು ಹಳಿಯ ಬಳಿ ಬಿದ್ದಿದೆ. ಕಾಲಿನ ಮೇಲ್ಭಾಗ ರೈಲು ಹೊಡೆದ ಹೊಡೆತಕ್ಕೆ ಹತ್ತಿರದ ಚರಂಡಿಗೆ ಹಾರಿ ಬಿದ್ದಿದೆ. ಅಷ್ಟಾದರೂ ಯುವಕನ ಪ್ರಾಣ ಹೋಗಿಲ್ಲ. ಸುಮಾರಷ್ಟು ಹೊತ್ತು ಆತ ಚರಂಡಿಯಲ್ಲೇ ನರಳಿದ್ದಾನೆ. ಅಷ್ಟರಲ್ಲಿ ಸ್ಥಳೀಯರು ಆತನನ್ನು ಗಮನಿಸಿದ್ದು, ಚರಂಡಿಯಿಂದ ಎಳೆದು ತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಗೆಲ್ಲ ಆತ ಇದರಲ್ಲಿ ಯಾರದ್ದೂ ತಪ್ಪಿಲ್ಲ ಎಂದು ಪದೇ ಪದೆ ಹೇಳಿದ್ದಾನೆ.

ಸುಮಾರು 12-13 ತಾಸುಗಳ ಕಾಲ ಯುವಕನಿಗೆ ಚಿಕಿತ್ಸೆ ನೀಡಲಾಗಿದೆ. ಆದರೆ ಹೆಚ್ಚು ರಕ್ತಸ್ತ್ರಾವ ಆಗಿದ್ದರಿಂದಾಗಿ ಆತ ಕೊನೆಯುಸಿರೆಳೆದಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಯುವಕನ ಈ ನಿರ್ಧಾರಕ್ಕೆ ಕಾರಣವೇನೆಂಬುದು ತನಿಖೆಯಿಂದ ತಿಳಿದುಬರಬೇಕಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net