ಕೋಟಿ ರೂ. ಬೆಲೆಬಾಳುವ ವಾಚ್​​ಗಳ ಕಳ್ಳಸಾಗಣೆ ಪತ್ತೆ ಹಚ್ಚಿದ ಕಸ್ಟಮ್ಸ್ ಅಧಿಕಾರಿಗಳು

Watch
Published on

ನವ ದೆಹಲಿ: ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್​​ ಅಧಿಕಾರಿಗಳು 27 ಕೋಟಿ ರೂ. ಬೆಲೆ ಬಾಳುವ ಕಸ್ಟಮೈಸ್​ ವಾಚ್​​ಗಳನ್ನು ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದ ಇಬ್ಬರು ಭಾರತೀಯ ಪ್ರಜೆಗಳನ್ನು ಬಂಧಿಸಿದ್ದಾರೆ.

ಅ.4 ರಂದು ಎಮಿರೇಟ್ಸ್​ ವಿಮಾನ EK 516ನಲ್ಲಿ ಬಂದಿದ್ದ ಇಬ್ಬರು ಪ್ರಯಾಣಿಕರ ಮೇಲೆ ಅನುಮಾನ ಬಂದು ಕಸ್ಟಮ್ಸ್ ಅಧಿಕಾರಿಗಳು ಪರೀಕ್ಷಿಸಿದ್ದಾರೆ. ಈ ವೇಳೆ ವಜ್ರ ಮತ್ತು ಚಿನ್ನ ಲೇಪಿತವಾದ ಕಸ್ಟಮೈಸ್​ ವಾಚ್​ ಕಳ್ಳಸಾಗಣೆ ಮಾಡುತ್ತಿರುವುದು ಪತ್ತೆಯಾಗಿದೆ.

ಆರಂಭದಲ್ಲಿ ಶಂಕಿತ ಕಳ್ಳಸಾಗಣೆದಾರರು ಯಾರೆಂದು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ನಂತರ ಪ್ರಯಾಣಿಕರ ವಿವಿರಗಳನ್ನು ಪಡೆದು, ಅವುಗಳ ಆಧಾರದ ಮೇಲೆ ಎಲ್ಲರನ್ನು ತಪಾಸಣೆ ಮಾಡಲಾಯಿತು. ಈ ಮೂಲಕ ಶಂಕಿತರನ್ನು ಪತ್ತೆಹಚ್ಚಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಂಕಿತರ ಬಳಿ ರೋಲೆಕ್ಸ್​ ಆಯ್ಸ್ಟರ್​ ವಾಚ್​ಗಳು, ಪಿಯಾಗೆಟ್ ಲೈಮ್​ಲೈಟ್​ ಸ್ಟೆಲ್ಲಾ ವಾಚ್ ಮತ್ತು ಐಫೋನ್​ 14 pro ಮೊಬೈಲ್ ಇರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಈ ವೇಳೆ ವಜ್ರದ ಬ್ರೇಸ್​ಲೆಟ್​​ನ್ನು ಪತ್ತೆ ಹಚ್ಚಿದ್ದಾರೆ.

ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿರುವ ವಾಚ್​ ಜೇಮ್ಸ್​ & ಕೋ ಅವರ ಬಿಲಿಯನೇರ್​ ವಾಚ್​ ಆಗಿದೆ. ಈ ಆವೃತ್ತಿಯಲ್ಲಿ ಕೇವಲ 18 ವಾಚ್​ಗಳನ್ನು ಮಾತ್ರ ತಯಾರಿಸಲಾಗಿದೆ ಎಂದು ಕಂಪೆನಿಯ ಅಧಿಕೃತ ವೆಬ್​ಸೈಟ್ ಮೂಲಕ ಕಸ್ಟಮ್ಸ್​ ಅಧಿಕಾರಿಗಳು ಮಾಹಿತಿ ಪಡೆದುಕೊಂಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net