ಸಂಪಾದಕೀಯ | ಶ್ವಾನ ಹಾವಳಿಗೆ ಕಡಿವಾಣ

photo
Published on

ನಮ್ಮಲ್ಲಿ ಸ್ಥಳೀಯ ಆಡಳಿತ ವ್ಯವಸ್ಥೆ ಎಷ್ಟು ನಿಷ್ಕ್ರಿಯಗೊಂಡಿದೆ ಎಂದರೆ ಬೀದಿನಾಯಿಗಳ ಹಾವಳಿ ತಡೆಯುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು, ಈ ನಿಟ್ಟಿನಲ್ಲಿ ಖಡಕ್ ಸೂಚನೆ ನೀಡಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಬೀದಿನಾಯಿ ಕಡಿತ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದು, ಇತ್ತೀಚೆಗೆ ಆರು ವರ್ಷದ ಬಾಲಕಿ ರೇಬಿಸ್​ಗೆ ಬಲಿಯಾದ ಪ್ರಕರಣವನ್ನು ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸಿದೆ. ದೆಹಲಿಯಲ್ಲಿರುವ ಬೀದಿನಾಯಿಗಳನ್ನು ಎಂಟು ವಾರಗಳಲ್ಲಿ ಹಿಡಿದು, ಸಂತಾನ ಶಕ್ತಿ ಹರಣ ಮಾಡಿ, ಶಾಶ್ವತ ಆಶ್ರಯ ತಾಣಗಳಿಗೆ ಸ್ಥಳಾಂತರಿಸುವಂತೆ ಸೋಮವಾರ ಸೂಚನೆ ನೀಡಿದೆ.

ಬೀದಿನಾಯಿಗಳ ಸಮಸ್ಯೆ ಕುರಿತು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ಮತ್ತು ಆರ್. ಮಹಾದೇವನ್ ಅವರಿದ್ದ ನ್ಯಾಯಪೀಠವು, ‘ಮಕ್ಕಳು ಯಾವುದೇ ಕಾರಣಕ್ಕೂ ಬೀದಿನಾಯಿಗಳಿಗೆ ಬಲಿಯಾಗಬಾರದು. ಜನರು ಬೀದಿನಾಯಿಗಳ ಭಯವಿಲ್ಲದೆ ಆತ್ಮವಿಶ್ವಾಸದಿಂದ ಬದುಕುವಂತಾಗಬೇಕು. ಈ ಹಿನ್ನೆಲೆಯಲ್ಲಿ ದೆಹಲಿ ಮಹಾನಗರ ಪಾಲಿಕೆ ಬೀದಿನಾಯಿಗಳನ್ನು ಹಿಡಿಯುವ ಅಭಿಯಾನ ಆರಂಭಿಸಬೇಕು’ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ. ಅಷ್ಟೇ ಅಲ್ಲ, ಈ ಕಾರ್ಯಾಚರಣೆಗೆ ಅಡ್ಡಿಪಡಿಸುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆಯನ್ನೂ ನೀಡಿದೆ. ಸುಪ್ರೀಂ ಕೋರ್ಟ್ ನೀಡಿರುವ ಸೂಚನೆ ಮಹತ್ವದ್ದಾಗಿದ್ದು, ಶ್ವಾನಗಳನ್ನು ಶಾಶ್ವತ ಆಶ್ರಯ ತಾಣಗಳಿಗೆ ಕಳಿಸುವುದು ಉತ್ತಮ ಪರಿಹಾರ.

ಬೀದಿನಾಯಿಗಳ ಸಮಸ್ಯೆ ಬರೀ ದೆಹಲಿಗೆ ಸೀಮಿತವಾಗಿಲ್ಲ. ದೇಶದ ಎಲ್ಲ ನಗರಗಳಲ್ಲೂ ನಾಯಿ ಕಡಿತ ಪ್ರಕರಣ ಹೆಚ್ಚಿದ್ದು, ಬೆಂಗಳೂರಿನಲ್ಲಂತೂ ಶ್ವಾನಗಳು ಸೃಷ್ಟಿಸಿರುವ ಆತಂಕ ಅಷ್ಟಿಷ್ಟಲ್ಲ. ಬೆಳಗ್ಗೆ ವಾಯುವಿಹಾರಕ್ಕೆ ಹೋಗುವವರು, ಮನೆ ಬಳಿ ಆಟವಾಡುವ ಮಕ್ಕಳು, ಶಾಲೆಗೆ ಹೋಗುವ ವಿದ್ಯಾರ್ಥಿಗಳು, ಪಾದಚಾರಿಗಳು ಮತ್ತು ದ್ವಿಚಕ್ರವಾಹನ ಸವಾರರೇ ಈ ಬೀದಿನಾಯಿಗಳ ಕಾಟದಿಂದ ತತ್ತರಿಸಿದ್ದಾರೆ. ರಸ್ತೆ ಅಪಘಾತಗಳಿಗೂ ಬೀದಿನಾಯಿಗಳು ಕಾರಣವಾಗುತ್ತಿವೆ. ಹಾಗಾಗಿ, ಸುಪ್ರೀಂ ಕೋರ್ಟ್ ದೆಹಲಿಗೆ ನೀಡಿರುವ ಸೂಚನೆಯನ್ನು ರಾಷ್ಟ್ರಾದ್ಯಂತ ಜಾರಿಗೆ ತರುವ ಅವಶ್ಯಕತೆಯಿದ್ದು, ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಬೆಂಗಳೂರಿನಲ್ಲಿ ರಾತ್ರಿ ಹೊತ್ತಿನಲ್ಲಿ ಎಲ್ಲಿ ಬೇಕೆಂದರಲ್ಲಿ ಕಸದ ಲಾರಿಗಳನ್ನು ನಿಲ್ಲಿಸುತ್ತಿರುವುದು ಮತ್ತು ವ್ಯಾಪಾರಸ್ಥರು, ಗ್ರಾಹಕರು ಉಳಿದ ತಿಂಡಿಯನ್ನು ರಸ್ತೆಗೆ ಚೆಲ್ಲುವ ಅಪಸವ್ಯಗಳಿಂದ ಬೀದಿನಾಯಿಗಳ ಹಾವಳಿ ಮಿತಿಮೀರಿದೆ.

ಮಾಂಸದ ಅಂಗಡಿ, ಹೋಟೆಲ್​ಗಳ ಬಳಿ ಆಹಾರ ಸಿಗುತ್ತಿರುವ ಕಾರಣ ಅವು ಅಲ್ಲೇ ಠಿಕಾಣಿ ಹೂಡಿರುತ್ತವೆ. ಆಹಾರ ಸಿಗದೇ ಇದ್ದಾಗ ಮನುಷ್ಯರ ಮೇಲೆ ದಾಳಿ ಮಾಡುತ್ತವೆ. ಚಿಕ್ಕಮಗಳೂರಿನಲ್ಲಿ ಬೀದಿನಾಯಿಗಳ ಕಾಟ ಜಾಸ್ತಿಯಾಗಿರುವ ಕಾರಣ ಅವುಗಳಿಗೆ ಸಾರ್ವಜನಿಕ ಸ್ಥಳಗಳಲ್ಲಿ ಆಹಾರ ಹಾಕುವುದನ್ನು ಅಲ್ಲಿನ ನಗರಸಭೆ ಇತ್ತೀಚೆಗೆ ನಿಷೇಧಿಸಿರುವುದು ಉತ್ತಮ ಕ್ರಮ. ಬೀದಿನಾಯಿಗಳ ಬಗ್ಗೆ ಅನುಕಂಪ ಇರಬೇಕು ಎಂಬುದರ ಬಗ್ಗೆ ಯಾರ ಭಿನ್ನಾಭಿಪ್ರಾಯವೂ ಇಲ್ಲ. ಆದರೆ, ಅವುಗಳ ಸಂಖ್ಯೆಯನ್ನು ವೈಜ್ಞಾನಿಕವಾಗಿ ನಿಯಂತ್ರಣ ಮಾಡಬೇಕು. ದೆಹಲಿ ಮಾದರಿ ರಾಷ್ಟ್ರಾದ್ಯಂತ ಜಾರಿಗೆ ಬರಬೇಕು. ಬೀದಿನಾಯಿಗಳಿಗೆ ಶಾಶ್ವತ ಆಶ್ರಯ ತಾಣಗಳಲ್ಲಿ ಸರಿಯಾದ ಆರೈಕೆ, ಆಹಾರ ಸಿಗುತ್ತಿದೆಯೇ ಇಲ್ಲವೇ ಎಂಬುದರ ಮೇಲೆ ಪ್ರಾಣಿ ದಯಾ ಸಂಘಗಳು ನಿಗಾ ವಹಿಸಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net