

Mandatory Tests: ಪುರುಷರು 40 ವರ್ಷ ವಯಸ್ಸು ದಾಟುತ್ತಿದ್ದಂತೆ ತಮ್ಮ ಆರೋಗ್ಯದ ಬಗ್ಗೆ ಹಿಂದಿನಕ್ಕಿಂತ ಹೆಚ್ಚಾಗಿ ಗಮನ ಹರಿಸುವುದು ಬಹಳ ಮುಖ್ಯ. ಕಾರಣ, ಈ ವಯಸ್ಸಿನಲ್ಲಿ ದೇಹದಲ್ಲಿ ಹಾರ್ಮೋನ್ಗಳ ಬದಲಾವಣೆ, ಜೀವನಶೈಲಿಯ ಪ್ರಭಾವ ಮತ್ತು ವಯಸ್ಸಾದ ಲಕ್ಷಣಗಳು ಗೋಚರಿಸಲು ಪ್ರಾರಂಭವಾಗುತ್ತದೆ. ಆದ್ದರಿಂದ, ಆರೋಗ್ಯವನ್ನು ಆದಷ್ಟು ಸುಧಾರಿಸಲು ಮತ್ತು ಆರಂಭಿಕ ಹಂತದಲ್ಲೇ ರೋಗಗಳನ್ನು ಪತ್ತೆಹಚ್ಚಲು ಹಾಗೂ ಅವುಗಳನ್ನು ತಡೆಗಟ್ಟಲು ಒಂದಷ್ಟು ಪ್ರಮುಖ ಪರೀಕ್ಷೆಗಳನ್ನು ನಿಯಮಿತವಾಗಿ ಮಾಡಿಸಿಕೊಳ್ಳುವುದು ಅವಶ್ಯ.
40ರ ಆಸುಪಾಸಿನಲ್ಲಿ ದೇಹದಲ್ಲಿ ಸಾಕಷ್ಟು ಬದಲಾವಣೆಗಳು ಕಾಣಿಸಿಕೊಳ್ಳುತ್ತದೆ. ಇದು ಕೆಲವರಿಗೆ ಗೊತ್ತಾದರೆ, ಹಲವರಿಗೆ ಏನಾಗುತ್ತಿದೆ ಎಂಬುದರ ಅರಿವೇ ಇರುವುದಿಲ್ಲ. ತಮ್ಮ ಕೆಲಸದ ದಿನಚರಿ, ಒತ್ತಡದ ಬದುಕಿನಲ್ಲಿ ಉತ್ತಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯಿಸುವವರ ಸಂಖ್ಯೆಯೇ ಹೆಚ್ಚು. ಹಾಗಿದ್ದರೆ, ಯಾವ ಐದು ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು? ಎಂಬ ವಿವರವಾದ ಮಾಹಿತಿ ಹೀಗಿದೆ ನೋಡಿ.
ಅಧಿಕ ರಕ್ತದೊತ್ತಡ (ಬಿಪಿ) ಇದು ಹೃದಯಾಘಾತ, ಪಾರ್ಶ್ವವಾಯು ಮತ್ತು ಮೂತ್ರಪಿಂಡದ ಕಾಯಿಲೆಗಳಿಗೆ ಪ್ರಮುಖ ಕಾರಣವಾಗಿದೆ. ಹೀಗಾಗಿ, ವರ್ಷಕ್ಕೊಮ್ಮೆಯಾದರೂ ಈ ಪರೀಕ್ಷೆ ಮಾಡಿಸಿಕೊಳ್ಳುವುದು ಒಳಿತು. ಅಧಿಕ ಬಿಪಿ ಇರುವವರು ವೈದ್ಯರ ಸಲಹೆಯ ಪ್ರಕಾರ ಪರೀಕ್ಷೆಗಳಿಗೆ ಒಳಪಡುವುದು ಉತ್ತಮ.
ಟೈಪ್ 2 ಮಧುಮೇಹವು 40 ವರ್ಷಗಳ ನಂತರ ಹೆಚ್ಚಾಗಿ ಕಂಡುಬರುವ ಸಾಮಾನ್ಯ ಕಾಯಿಲೆ. ಆರಂಭಿಕ ಹಂತಗಳಲ್ಲಿ ಪತ್ತೆಯಾಗದಿದ್ದರೆ, ಇದು ಕಣ್ಣು, ಮೂತ್ರಪಿಂಡ ಮತ್ತು ನರಗಳ ಸಮಸ್ಯೆಗಳಿಗೆ ಕಾರಣವಾಗಬಹುದು. ಪ್ರತಿ 3ರಿಂದ 5 ವರ್ಷಗಳಿಗೊಮ್ಮೆ HbA1c ಪರೀಕ್ಷೆ ಅಥವಾ ಪ್ರತಿವರ್ಷ ಉಪವಾಸದಲ್ಲಿ ರಕ್ತದಲ್ಲಿನ ಸಕ್ಕರೆ ಪರೀಕ್ಷೆ ಮಾಡಿಸಿಕೊಳ್ಳುವುದು ಸೂಕ್ತ.
ದೇಹದಲ್ಲಿ ಕೆಟ್ಟ ಕೊಬ್ಬಿನಾಂಶ (LDL) ಹೆಚ್ಚಿದ್ದರೆ, ಹೃದ್ರೋಗದ ಅಪಾಯ ಕಾಡುತ್ತದೆ. ಒಳ್ಳೆಯ ಕೊಲೆಸ್ಟ್ರಾಲ್ (HDL) ಕಡಿಮೆಯಿದ್ದರೆ, ಅದು ಕೂಡ ಅಪಾಯ. ಆದ್ದರಿಂದ, 40 ವರ್ಷ ವಯಸ್ಸಿನ ನಂತರ ಪ್ರತಿ 1 ಅಥವಾ 2 ವರ್ಷಗಳಿಗೊಮ್ಮೆ ಲಿಪಿಡ್ ಪ್ರೊಫೈಲ್ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದು ಒಳಿತು.
ಪ್ರಾಸ್ಟೇಟ್ ಹಿಗ್ಗುವಿಕೆ ಅಥವಾ ಕ್ಯಾನ್ಸರ್ನಂತಹ ಸಮಸ್ಯೆಗಳು ವೃದ್ಧಾಪ್ಯದಲ್ಲಿ ಪ್ರಾರಂಭವಾಗುತ್ತವೆ. ಇವುಗಳನ್ನು ಆರಂಭಿಕ ಹಂತದಲ್ಲಿ ಪತ್ತೆಹಚ್ಚಿದರೆ, ಚಿಕಿತ್ಸೆ ನೀಡುವುದು ಸುಲಭವಾಗಲಿದೆ. ಹೀಗಾಗಿ, ವೈದ್ಯರ ಸಲಹೆಯ ಪ್ರಕಾರ, ಪಿಎಸ್ಎ ಪರೀಕ್ಷೆಯನ್ನು 45 ರಿಂದ 50 ವರ್ಷ ವಯಸ್ಸಿನಲ್ಲಿ ಪ್ರಾರಂಭಿಸಬೇಕು. ಈ ವಿಚಾರದಲ್ಲಿ ಕುಟುಂಬದ ಇತಿಹಾಸವಿದ್ದರೆ, ಮೊದಲೇ ಎಚ್ಚರವಹಿಸುವುದು ಉತ್ತಮ.
ಕೊಲೊನ್ ಕ್ಯಾನ್ಸರ್ 50 ವರ್ಷಕ್ಕಿಂತ ಮೊದಲು ಸಂಭವಿಸುವ ಕ್ಯಾನ್ಸರ್‌ಗಳಲ್ಲಿ ಒಂದಾಗಿದೆ. ಆರಂಭಿಕ ಹಂತಗಳಲ್ಲಿ ಇದು ಲಕ್ಷಣರಹಿತವಾಗಿದ್ದರೆ, ಕೊಲೊನೋಸ್ಕೋಪಿ ಮೂಲಕ ಅದನ್ನು ಮೊದಲೇ ಪತ್ತೆಹಚ್ಚಬಹುದು. ಮೊದಲ ಕೊಲೊನೋಸ್ಕೋಪಿಯನ್ನು 50ನೇ ವಯಸ್ಸಿನಲ್ಲಿ ಮಾಡಿಸಬೇಕು. ಅಪಾಯಕಾರಿ ಅಂಶಗಳಿದ್ದರೆ, ಅದನ್ನು 45ನೇ ವಯಸ್ಸಿನಿಂದಲೂ ಮಾಡಿಸಬಹುದು.
ಅಪಾಯ ಹಂತಕ್ಕೆ ಹೋಗುವ ಬದಲಿಗೆ ಮೊದಲೇ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ನಿಮ್ಮ ಆರೋಗ್ಯವನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು ಉತ್ತಮ ನಿರ್ಧಾರ. ದೇಹದಲ್ಲಿ ಯಾವುದೋ ಸಮಸ್ಯೆ ಕಾಣಿಸಿಕೊಳ್ಳುವವರೆಗೂ ನನಗೆ ಯಾವ ಸಮಸ್ಯೆಯೂ ಇಲ್ಲ. ಎಂಥಾ ರೋಗಲಕ್ಷಣಗಳು ಪತ್ತೆಯಾಗಿಲ್ಲ ಎಂದು ಸುಮ್ಮನಿದ್ದರೆ, ಮುಂದೊಂದು ದಿನ ದೊಡ್ಡ ಅಚ್ಚರಿ, ಆತಂಕಕ್ಕೆ ಒಳಗಾಗಬೇಕಾಗುತ್ತದೆ. ಈ ಮೇಲ್ಕಂಡ ಪರೀಕ್ಷೆಗಳನ್ನು 40ರ ನಂತರ ಮಾಡಿಸಿಕೊಳ್ಳುವುದು ಒಳ್ಳೆಯದು,(ಏಜೆನ್ಸೀಸ್).ವಿಶೇಷ ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.