

Coolie Craze: ತಮಿಳು ಚಿತ್ರರಂಗದ ಸೂಪರ್ಸ್ಟಾರ್, ಅಭಿಮಾನಿಗಳ ನೆಚ್ಚಿನ ‘ತಲೈವಾ’ ರಜಿನಿಕಾಂತ್ ಅಭಿನಯದ ಬಹುನಿರೀಕ್ಷಿತ ‘ಕೂಲಿ’ ಚಿತ್ರದ ಕ್ರೇಜ್ ಇದೀಗ ದುಪ್ಪಟ್ಟಲ್ಲ ನಾಲ್ಕು ಪಟ್ಟು ಹೆಚ್ಚಾಗಿದೆ. ಇದೇ ಆ.14ರಂದು ತೆರೆ ಕಾಣಲಿರುವ ಸಿನಿಮಾಗೆ ಮುಂಗಡ ಬುಕ್ಕಿಂಗ್ಗಳು ಭರ್ಜರಿಯಾಗಿವೆ. ಜಾಗತಿಕವಾಗಿ ರಿಲೀಸ್ ಆಗಲಿರುವ ರಜಿನಿ ಚಿತ್ರಕ್ಕೆ ಸದ್ಯ ಫ್ಯಾನ್ಸ್ಗಳಲ್ಲಿ ಕುತೂಹಲ ಕೆರಳಿದ್ದು, ನೆಚ್ಚಿನ ನಟನನ್ನು ಬೆಳ್ಳಿಪರದೆಯ ಮೇಲೆ ಸಂಭ್ರಮಿಸಲು ತೀವ್ರ ಕಾತರತೆ ಹೆಚ್ಚಾಗಿದೆ. ಈ ಮಧ್ಯೆ ಮೂರು ಕಂಪನಿಗಳು ಈಗಾಗಲೇ ತನ್ನ ಉದ್ಯೋಗಿಗಳಿಗೆ 'ಕೂಲಿ' ಸಿನಿಮಾ ನೋಡಲು ರಜೆ ಘೋಷಿಸಿದೆ.
'ಕೂಲಿ' ಬಿಡುಗಡೆಗೆ ಸಿಂಗಾಪುರದಲ್ಲಿರುವ ಕಂಪನಿಯೊಂದು ತನ್ನ ತಮಿಳು ಉದ್ಯೋಗಿಗಳಿಗೆ ವೇತನ ಸಹಿತ ರಜೆ ಘೋಷಿಸಿದೆ. ಸಿಂಗಾಪುರ ಕಂಪನಿಗೂ ಮೊದಲು, ಕೆಲವು ಭಾರತೀಯ ಸಂಸ್ಥೆಗಳು ತನ್ನ ಕಾರ್ಮಿಕರಿಗೆ ರಜೆ ನೀಡಿದೆ. 'ಫಾರ್ಮರ್ ಕನ್ಸ್ಟ್ರಕ್ಷನ್ಸ್ ಪಿಟಿಇ ಲಿಮಿಟೆಡ್' ಎಂಬ ಸಂಸ್ಥೆ, ಮೊದಲ ದಿನದ ಮೊದಲ ಪ್ರದರ್ಶನದ ಟಿಕೆಟ್‌ಗಳು, ಆಹಾರ ಮತ್ತು ಕೂಲ್ ಡ್ರಿಂಕ್ಸ್ಗೆ 30 ಸಿಂಗಾಪುರ ಡಾಲರ್ ಭತ್ಯೆಯನ್ನು ಉದ್ಯೋಗಿಗಳಿಗೆ ನೀಡಿದೆ ಎಂಬ ಸಂಗತಿ ನಿಜಕ್ಕೂ ವಿಶೇಷ.
SB MART ಎಂಬ ಮತ್ತೊಂದು ಸಂಸ್ಥೆಯು ಆಗಸ್ಟ್ 14ರಂದು ತೆರೆ ಕಾಣಲಿರುವ ಕೂಲಿ ಚಿತ್ರಕ್ಕೆ ಬೆಳಗ್ಗೆ 7ರಿಂದ 11:30 ರವರೆಗೆ ಕಂಪನಿಯನ್ನು ಮುಚ್ಚಲಾಗುವುದು ಎಂದು ತಿಳಿಸಿದೆ. ಕಂಪನಿಯ ನಿರ್ದೇಶಕ ಕೃಷ್ಣ ಪ್ರಕಾಶ್ ನಂಬಿಯಾರ್ ಈ ಬಗ್ಗೆ ಮಾತನಾಡಿದ್ದು, "ಮಾರ್ನಿಂಗ್ ಶೋ ಮುಗಿದ ಬಳಿಕ 11.30ರಿಂದ ವ್ಯವಹಾರವು ಎಂದಿನಂತೆ ನಡೆಯಲಿದೆ" ಎಂದು ತಿಳಿಸಿದ್ದಾರೆ.
ಆಗಸ್ಟ್ 14ರಂದು ತಮ್ಮ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ರಜೆಯನ್ನು ಘೋಷಿಸಿರುವ ಯುನೊ ಅಕ್ವಾ ಕೇರ್, ರಜಿನಿಕಾಂತ್ ಅವರ ಚಿತ್ರವನ್ನು ನೋಡುವ ಹಪಾಹಪಿಯಲ್ಲಿರುವ ಉದ್ಯೋಗಿಗಳು ಖುಷಿಯಿಂದ ಸಿನಿಮಾ ನೋಡಿ ಬರಲಿ ಎಂಬುದು ಸಂಸ್ಥೆಯ ನಿರ್ಧಾರ ಎಂದು ತಿಳಿಸಿದೆ. ಇದು ಕೇವಲ ತಮಿಳುನಾಡಿಗೆ ಮಾತ್ರವಲ್ಲ! ಬೆಂಗಳೂರು, ತಿರುಚ್ಚಿ, ತಿರುನಲ್ವೇಲಿ, ಚೆಂಗಲ್ಪಟ್ಟು, ಮಟ್ಟುತಾವಣಿ ಮತ್ತು ಅರಪಾಲಯಂ ಸೇರಿದಂತೆ ತನ್ನೆಲ್ಲಾ ಶಾಖೆಗಳಿಗೂ ಕಂಪನಿ ರಜೆ ಘೋಷಿಸಿದೆ.