

ತಮಿಳುನಾಡಿನ ಕಲ್ಲಕುರಿಚಿ ಬಳಿಯ ಕರುಣಾಪುರಂ ಗ್ರಾಮ ಕಳೆದ ಮೂರು ದಿನಗಳಿಂದ ಸ್ಮಶಾನಸದೃಶವಾಗಿದೆ. ಗ್ರಾಮದ ಪ್ರತಿಯೊಂದು ಮನೆಯ ಮುಂದೆಯೂ ಶಾಮಿಯಾನಾಗಳು ಮತ್ತು ಅವುಗಳಲ್ಲಿ ಶವಗಳು ಕಾಣಿಸುತ್ತಿವೆ. ಕುಟುಂಬದವರ ರೋದನ ಮುಗಿಲುಮುಟ್ಟಿದೆ. ಇದಕ್ಕೆಲ್ಲ ಕಾರಣವಾಗಿರುವುದು ಅಕ್ರಮ ಸಾರಾಯಿ ಅರ್ಥಾತ್ ಕಳ್ಳಬಟ್ಟಿ. ಮಂಗಳವಾರ ಶುರುವಾಗಿರುವ ಮರಣಮೃದಂಗ ಗುರುವಾರವೂ ಮುಂದುವರಿದಿದೆ. ಈವರೆಗೆ 38 ಜನ ಪ್ರಾಣ ಕಳೆದುಕೊಂಡಿದ್ದು, ನೂರಕ್ಕೂ ಹೆಚ್ಚು ಜನ ಆಸ್ಪತ್ರೆಯಲ್ಲಿದ್ದಾರೆ. ಮೃತರಲ್ಲಿ ಮಹಿಳೆಯರೂ ಸೇರಿದ್ದಾರೆ. ಕೆಲವು ಮಕ್ಕಳು ತಮ್ಮ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥವಾಗಿವೆ. ಸತ್ತವರಲ್ಲಿ ಬಹುತೇಕರು ಕೂಲಿಕಾರ್ವಿುಕರು. ದುಬಾರಿ ಮದ್ಯ ಖರೀದಿಸುವ ಸಾಮರ್ಥ್ಯವಿಲ್ಲದ ಈ ಬಡವರು ಪ್ರತಿದಿನ ಸ್ಥಳೀಯವಾಗಿ ಲಭ್ಯವಿದ್ದ ಕಳಪೆ ಗುಣಮಟ್ಟದ ‘ಪ್ಯಾಕೆಟ್ ಮದ್ಯ’ದ ಮೊರೆ ಹೋಗುತ್ತಿದ್ದರು. ದುರದೃಷ್ಟವಶಾತ್ ಈ ಬಾರಿ ಆ ಮದ್ಯವೇ ಅವರಿಗೆ ವಿಷವಾಗಿ ಪರಿಣಮಿಸಿದೆ. ಸ್ಥಳೀಯರು ಹೇಳುವ ಪ್ರಕಾರ, ಈ ಗ್ರಾಮದಲ್ಲಿ ಹಲವು ವರ್ಷಗಳಿಂದಲೂ ಕಳ್ಳಬಟ್ಟಿ ತಯಾರಿಕೆ ಮತ್ತು ಮಾರಾಟ ವ್ಯಾಪಕವಾಗಿ ನಡೆಯುತ್ತಿದೆ. ಇದು ಪೊಲೀಸರಿಗೂ ಗೊತ್ತಿದೆ. ಸ್ಥಳೀಯ ರಾಜಕಾರಣಿಗಳಿಗೂ ತಿಳಿದಿದೆ. ಅಮಾಯಕ ಗ್ರಾಮಸ್ಥರಿಗೆ ದುಷ್ಕರ್ವಿುಗಳು ರಾಜಾರೋಷವಾಗಿ ಕಳಪೆ ಸಾರಾಯಿ ಮಾರಾಟ ಮಾಡುತ್ತಿದ್ದರೂ ಪೊಲೀಸರು ಮೌನವಾಗಿದ್ದಾರೆ.
ಕಳೆದ ವರ್ಷದ ಮೇ ತಿಂಗಳಲ್ಲಿಯೂ ತಮಿಳುನಾಡಿನಲ್ಲಿ ಕಳ್ಳಬಟ್ಟಿ ದುರಂತ ಸಂಭವಿಸಿ 12 ಜನ ಮೃತಪಟ್ಟಿದ್ದರು. ಅದಕ್ಕೆ ಆ ಭಾಗದಲ್ಲಿ ಮಿಥೆನಾಲ್ ಯಥೇಚ್ಛವಾಗಿ ಸಿಗುತ್ತಿರುವುದು ಮತ್ತು ಅದನ್ನು ಕಳ್ಳಬಟ್ಟಿ ತಯಾರಿಕೆಯಲ್ಲಿ ಬಳಸಿಕೊಳ್ಳುತ್ತಿರುವುದು ಕಾರಣ ಎಂಬುದು ಆಗ ತನಿಖೆಯಿಂದ ದೃಢಪಟ್ಟಿತ್ತು. ಈಗಿನ ದುರಂತದಲ್ಲೂ ಮಿಥೆನಾಲ್ ಪಾತ್ರ ಇದೆಯೇ ಎಂಬ ಬಗ್ಗೆ ತನಿಖೆ ಆರಂಭವಾಗಿದೆ. ಈ ಪ್ರಕರಣ ನಡೆದ ಬಳಿಕ, ಕಣ್ಣೊರೆಸುವ ತಂತ್ರವೆಂಬಂತೆ ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿ, ಕೆಳಮಟ್ಟದ ಅಧಿಕಾರಿಗಳನ್ನು ಅಮಾನತು ಮಾಡಿ, ಕೆಲವು ದುಷ್ಕರ್ವಿುಗಳನ್ನು ಬಂಧಿಸಿ ಕೈತೊಳೆದುಕೊಂಡಿದೆ. ಇಂತಹ ತಾತ್ಕಾಲಿಕ ಕ್ರಮಗಳಿಂದ ಈ ಪಿಡುಗಿಗೆ ಕಡಿವಾಣ ಹಾಕುವುದು ಸಾಧ್ಯವಿಲ್ಲ. ಕಳ್ಳಬಟ್ಟಿ ತಯಾರಿಕೆಯ ಜಾಲಗಳನ್ನು ನಿರ್ದಾಕ್ಷಿಣ್ಯವಾಗಿ ಮಟ್ಟ ಹಾಕಬೇಕು. ಅವುಗಳ ಜತೆ ಶಾಮೀಲಾಗಿರುವ ಪೊಲೀಸ್ ಅಧಿಕಾರಿಗಳನ್ನು ಸೇವೆಯಿಂದ ವಜಾ ಮಾಡಬೇಕು. ಇಲ್ಲದಿದ್ದರೆ ಇಂತಹ ಘಟನೆಗಳು ಮರುಕಳಿಸುತ್ತಲೇ ಇರುತ್ತವೆ.