ಲೋಕಸಭೆ ವಿರೋಧ ಪಕ್ಷದ ನಾಯಕ ಯಾರಾಗಬೇಕೆಂದು ಕಾಂಗ್ರೆಸ್​ ನಿರ್ಧರಿಸುತ್ತೆ: ಶರದ್​ ಪವಾರ್

s
Published on

ನವದೆಹಲಿ: ಇಂಡಿಯಾ ಮೈತ್ರಿಕೂಟ ಗುಂಪಿನಲ್ಲಿ ಕಾಂಗ್ರೆಸ್​ ಹೆಚ್ಚು ಸ್ಥಾನಗಳನ್ನು ಹೊಂದಿರುವುದರಿಂದ ಲೋಕಸಭೆ ವಿರೋಧ ಪಕ್ಷದ ನಾಯಕನ (ಎಲ್‌ಒಪಿ) ಆಯ್ಕೆ ಕುರಿತು ಕಾಂಗ್ರೆಸ್​ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಎನ್​ಸಿಪಿ ( ಎಸ್​ಪಿ) ವರಿಷ್ಠ ಶರದ್​ ಪವಾರ್ ಹೇಳಿದ್ದಾರೆ.

ಜೂನ್ 24ರಿಂದ ಪ್ರಾರಂಭವಾಗುವ ಲೋಕಸಭೆ ಅಧಿವೇಶನಕ್ಕೆ ಮೊದಲು, ಇಂಡಿಯಾ ಮೈತ್ರಿಕೂಟದ ಪಕ್ಷಗಳು ಸಭೆ ನಡೆಸಿ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಹೆಸರನ್ನು ಅಂತಿಮಗೊಳಿಸುತ್ತಾರೆ. ನಾವು ನಿರ್ಧಾರವನ್ನು ಅನುಮೋದಿಸುತ್ತೇವೆ ಎಂದು ಇಂಡಿಯಾ ಬಣದ ಪಾಲುದಾರ ಶರದ್​ ಪವರ್​ ತಿಳಿಸಿದ್ದಾರೆ.

ಲೋಕಸಭೆಯ ಡೆಪ್ಯುಟಿ ಸ್ಪೀಕರ್ ಹುದ್ದೆಯು ವಿರೋಧ ಪಕ್ಷಗಳ ಪಾಲಾಗುವ ಸಾಧ್ಯತೆ ಕಡಿಮೆ ಇದೆ ಎಂದ ಅವರು, 'ಕಳೆದ ಬಾರಿ, ಪ್ರಧಾನಿ ನರೇಂದ್ರ ಮೋದಿ ಅವರು ವಿಪಕ್ಷಗಳಿಗೆ ಉಪಸಭಾಪತಿ ಸ್ಥಾನ ನೀಡುವ ಭರವಸೆಯನ್ನು ಈಡೇರಿಸಲಿಲ್ಲ. ಮೋದಿ ಅವರು ಈ ಬಾರಿಯೂ ಇದನ್ನು ಒಪ್ಪದ ಕಾರಣ ಅದು ಈಡೇರುವ ಬಗ್ಗೆ ನನಗೆ ಅನುಮಾನವಿದೆ. ಆದರೂ ನಾವು ಆ ಬಗ್ಗೆ ಚರ್ಚಿಸಲಿದ್ದೇವೆ' ಎಂದು ಹೇಳಿದರು.

ನಾಲ್ಕು ಬಾರಿ ಮಹಾರಾಷ್ಟ್ರದ ಮುಖ್ಯಮಂತ್ರಿ ಮತ್ತು ಮೂರು ಅವಧಿಯ ಕೇಂದ್ರ ಸಚಿವರಾಗಿದ್ದ ಪವಾರ್, ಲೋಕಸಭೆಯ ಉಪ ಸಭಾಪತಿ ಹುದ್ದೆಯು ವಿರೋಧ ಪಕ್ಷಗಳಿಗೆ ಸಿಗುವ ಸಾಧ್ಯತೆಯಿಲ್ಲ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ಲೋಕಸಭೆ ವಿರೋಧ ಪಕ್ಷದ ನಾಯಕ ?

288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ಮುಂದೆ ನಡೆಯಲಿರುವ ಚುನಾವಣೆಯನ್ನು ಗೆಲ್ಲಲು ವಿಪಕ್ಷಗಳ ಮಹಾ ವಿಕಾಸ್ ಅಘಾಡಿ (ಎಂವಿಎ) ಸಜ್ಜಾಗಿದೆ. ಲೋಕಸಭಾ ಚುನಾವಣೆಯಲ್ಲಿ, ಎಂವಿಎ ಮಿತ್ರಪಕ್ಷಗಳು ಒಟ್ಟು 48 ಸ್ಥಾನಗಳ ಪೈಕಿ 31 ಸ್ಥಾನಗಳನ್ನು ಗೆದ್ದಿವೆ. ಈ ಫಲಿತಾಂಶವನ್ನು ಗಮನಿಸಿದರೆ ನಾವು 155ಕ್ಕೂ ಹೆಚ್ಚು ವಿಧಾನಸಭಾ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದೇವೆ' ಎಂದು ಅವರು ಪವಾರ್ ವಿಶ್ವಾಸ ವ್ಯಕ್ತಪಡಿಸಿದರು.

ಈ ಬಾರಿ ವಿರೋಧ ಪಕ್ಷದ ನಾಯಕನ ಜವಾಬ್ದಾರಿಯನ್ನು ರಾಹುಲ್ ಗಾಂಧಿ ನಿಭಾಯಿಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಈ ಬಾರಿ ಅತಿದೊಡ್ಡ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷದ ನಾಯಕನಿಗೆ ಅಧಿಕೃತವಾಗಿ ವಿರೋಧ ಪಕ್ಷದ ನಾಯಕನ ಸ್ಥಾನಮಾನ ಸಿಗಲಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ 99 ಸ್ಥಾನಗಳನ್ನು ಗೆದ್ದಿದ್ದು, ವಿರೋಧ ಪಕ್ಷದ ನಾಯಕರಾಗಲು, ಅತಿದೊಡ್ಡ ವಿರೋಧ ಪಕ್ಷವು ಒಟ್ಟು ಸ್ಥಾನಗಳಲ್ಲಿ ಕನಿಷ್ಠ 10% ಅಂದರೆ 55 ಸ್ಥಾನಗಳನ್ನು ಹೊಂದಿರಬೇಕು. ಇದೀಗ ಈ ಹುದ್ದೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ದೊಡ್ಡ ಸ್ಪರ್ಧಿ ಎಂದು ಪರಿಗಣಿಸಲಾಗುತ್ತಿದ್ದು, ಪಕ್ಷದ ನಾಯಕರಾಗಿ ರಾಹುಲ್ ಗಾಂಧಿ ಅಧಿಕಾರ ವಹಿಸಿಕೊಳ್ಳಬೇಕು ಎಂಬ ಧ್ವನಿಯೂ ಪಕ್ಷದೊಳಗಿನಿಂದಲೇ ಕೇಳಿ ಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net