ನಕಲಿ ಶ್ಯೂರಿಟಿಗೆ ಕಡಿವಾಣ

Justice
Published on

ಆಧಾರ್ ಕಾರ್ಡ್, ಗುರುತಿನ ಚೀಟಿ, ಭೂ ದಾಖಲೆ ಪತ್ರಗಳಿಗೆ ಎಷ್ಟೇ ಡಿಜಿಟಲ್ ಸ್ಪರ್ಶ ನೀಡಿದರೂ ಮತ್ತೆ ಮತ್ತೆ ನಕಲಿ ಮಾಡಿ ಕಾನೂನುಬಾಹಿರ ಚಟುವಟಿಕೆಗಳಿಗೆ ದುರ್ಬಳಕೆ ಮಾಡುವುದು ಪದೇಪದೆ ಸಾಬೀತಾಗುತ್ತಿದೆ. ಇತ್ತೀಚೆಗೆ ಅಪರಾಧ ಪ್ರಕರಣಗಳಲ್ಲಿ ನ್ಯಾಯಾಲಯಗಳಿಗೆ ಆರೋಪಿಗಳ ಪರವಾಗಿ ಸಲ್ಲಿಸುವ ಶ್ಯೂರಿಟಿಗಾಗಿ ನಕಲಿ ಭೂದಾಖಲೆ ಮತ್ತು ಆಧಾರ್ ಸಲ್ಲಿಸುವವರ ಹಾವಳಿ ಮಿತಿಮೀರಿದೆ. ಒಬ್ಬನೇ ವ್ಯಕ್ತಿ ಒಂದಕ್ಕಿಂತ ಹೆಚ್ಚು ಕೇಸ್​ಗಳಲ್ಲಿ ಶ್ಯೂರಿಟಿ ಕೊಡುವುದು ಅಥವಾ ನಕಲಿ ದಾಖಲೆ ಸೃಷ್ಟಿಸಿ ಕೋರ್ಟ್​ಗೆ ಸಲ್ಲಿಸುತ್ತಿರುವುದು ಹೆಚ್ಚಾಗಿದೆ.

ಇವರಿಗೆ ಭಯವೇ ಇಲ್ಲದಂತೆ ಆಗಿದೆ. ಕೊಲೆ, ಸುಲಿಗೆ, ವಂಚನೆ, ದರೋಡೆ ಸೇರಿದಂತೆ ಅಪರಾಧ ಪ್ರಕರಣಗಳಲ್ಲಿ ಬಂಧನಕ್ಕೆ ಒಳಗಾಗುವ ಆರೋಪಿಗಳು ಜಾಮೀನು ಪಡೆಯುವುದು ಕಾನೂನು ಪ್ರಕ್ರಿಯೆ ಆಗಿರುತ್ತದೆ. ಜಾಮೀನು ಷರತ್ತು ತುಂಬಲು ಶ್ಯೂರಿಟಿದಾರರು ಸಿಗದೆ ಇದ್ದಾಗ ಅಂತಹ ಆರೋಪಿಗಳಿಗೆ ಶ್ಯೂರಿಟಿ ಕೊಡಿಸುವ ಏಜೆಂಟ್​ಗಳು ಹುಟ್ಟಿಕೊಂಡಿದ್ದಾರೆ. ಒಂದೊಂದು ಪ್ರಕರಣದಲ್ಲಿ ಒಂದೊಂದು ರೀತಿ ಬೆಲೆ ನಿಗದಿ ಮಾಡಿಕೊಂಡಿದ್ದಾರೆ. ಶ್ಯೂರಿಟಿ ಬೇಕೆಂದು ಫೋನ್ ಬಂದ ಕೂಡಲೇ ತನ್ನ ಸಂಪರ್ಕದಲ್ಲಿ ಇರುವ ವ್ಯಕ್ತಿಗೆ ತಿಳಿಸಿ ಆನ್​ಲೈನ್​ನಲ್ಲಿ ಪಹಣಿ, ಮ್ಯುಟೇಷನ್ ಇನ್ನಿತರ ಭೂದಾಖಲೆಗಳನ್ನು ಡೌನ್​ಲೋಡ್ ಮಾಡಿಕೊಂಡು ಅದಕ್ಕೆ ತಕ್ಕಂತೆ ಆಧಾರ್ ಎಡಿಟ್ ಮಾಡಿಕೊಡುವ ಗ್ಯಾಂಗ್ ಬೇರೆ ಇದೆ.

ಇತ್ತೀಚೆಗೆ ಬೆಂಗಳೂರು ನಗರ ಕೇಂದ್ರ ಅಪರಾಧ ವಿಭಾಗ ಕಾರ್ಯಾಚರಣೆ ನಡೆಸಿದಾಗ ಆರೋಪಿಗಳ ಬಳಿ ನಕಲಿ ಆಧಾರ್, ಪಹಣಿ, ಮ್ಯುಟೇಷನ್ ಪತ್ತೆ ಆಗಿದ್ದವು. ಬಂಧನಕ್ಕೆ ಒಳಗಾದವರೆಲ್ಲ ಕೂಲಿ, ಸಣ್ಣಪುಟ್ಟ ನೌಕರಿ ಮಾಡುವವರೇ. ಕೋರ್ಟ್​ಗೆ ಹಾಜರಾಗಿ ಶ್ಯೂರಿಟಿ ಸಲ್ಲಿಸಿ ಸಹಿ ಮಾಡಿ ಬಂದರೆ ದಿನಗೂಲಿಗಿಂತ ಸ್ವಲ್ಪ ಹೆಚ್ಚಿನ ಆದಾಯ ಸಿಗುತ್ತಿತ್ತು. ಇವರನ್ನು ಕರೆತರುವ ಏಜೆಂಟ್​ಗಳು ಮಾತ್ರ ಎಲ್ಲಿಯೂ ಕಾಣಿಸಿಕೊಳ್ಳದೆ ಅರ್ಧದಷ್ಟು ಹಣವನ್ನು ಜೇಬಿಗೆ ಬಿಟ್ಟುಕೊಳ್ಳುತ್ತಿದ್ದರು. ಇನ್ನು ನ್ಯಾಯಾಲಯ ಕಲಾಪದ ವೇಳೆ ಆರೋಪಿಗಳು ಮತ್ತು ಶ್ಯೂರಿಟಿದಾರರು ಸತತವಾಗಿ ಗೈರು ಹಾಜರಾದಾಗ ನಿಜ ಸಂಗತಿ ಬಯಲಿಗೆ ಬರುತ್ತಿದೆ. ಇದರಿಂದ ಕೋರ್ಟ್ ಕಲಾಪದ ಸಮಯ ವ್ಯರ್ಥವಾಗುವುದಷ್ಟೇ ಅಲ್ಲದೇ, ಕೋರ್ಟ್​ಗಳನ್ನೂ ವಂಚಕರು ಲಘುವಾಗಿ ಪರಿಗಣಿಸುತ್ತಿರುವುದಕ್ಕೆ ಇದು ದ್ಯೋತಕ. ಕೋರ್ಟ್ ನೀಡುವ ದೂರಿನ ಮೇರೆಗೆ ಪೊಲೀಸರು ತನಿಖೆ ಕೈಗೊಂಡಾಗ ಆಧಾರ್ ಮತ್ತು ಭೂದಾಖಲೆಗಳ ಅಸಲಿ ವ್ಯಕ್ತಿಗಳು ಕಾನೂನು ಕಟ್ಟಳೆಗಳಿಗೆ ಸಿಲುಕಿ ತೊಂದರೆ ಅನುಭವಿಸುವಂತೆ ಆಗಿದೆ.

ಈ ವಿಷಯವನ್ನು ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡು ನಕಲಿ ಶ್ಯೂರಿಟಿ ಕೊಡುವವರ ಹೆಡೆಮುರಿಕಟ್ಟಿ ಕಠಿಣ ಶಿಕ್ಷೆ ನೀಡುವುದರ ಮೂಲಕ ಈ ಹಾವಳಿಗೆ ಕಡಿವಾಣ ಹಾಕಬೇಕಾಗಿದೆ. ಜತೆಗೆ ಕಂದಾಯ ಇಲಾಖೆ, ಆಧಾರ್ ಇನ್ನಿತರ ಜಾಲತಾಣಗಳ ಮಾಹಿತಿ ನ್ಯಾಯಾಲಯಕ್ಕೂ ಸುಲಭವಾಗಿ ಸಿಗುವಂತೆ ಆಗಬೇಕಾಗಿದೆ. ಶ್ಯೂರಿಟಿಗೆ ಸಲ್ಲಿಸುವ ದಾಖಲೆಗಳನ್ನು ಸ್ಥಳದಲ್ಲಿಯೇ ಆನ್​ಲೈನ್​ನಲ್ಲಿ ಪರಿಶೀಲನೆ ನಡೆಸಿ ದೃಢೀಕರಿಸುವ ವ್ಯವಸ್ಥೆ ಜರೂರಾಗಿ ಆಗಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net