ಜಂಬೂಸವಾರಿಗೆ ಸಾಂಸ್ಕೃತಿಕ ನಗರಿ ಸಜ್ಜು; ಕರೊನಾ ಬಳಿಕ ಅದ್ದೂರಿ ಆಚರಣೆ

Mysore
Published on

| ಆರ್.ಕೃಷ್ಣ ಮೈಸೂರು

ನಾಡಹಬ್ಬ ಮೈಸೂರು ದಸರಾದ ಜಂಬೂಸವಾರಿಗೆ ಸಾಂಸ್ಕೃತಿಕ ನಗರಿ ಶೃಂಗಾರಗೊಂಡಿದೆ. ಅಂಬಾವಿಲಾಸ ಅರಮನೆ ಅಂಗಳದ ಬಲರಾಮ ದ್ವಾರದ ಬಳಿ ಅ.5ರಂದು ಮಧ್ಯಾಹ್ನ 2.36ರಿಂದ 2.50ರ ವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಲಿದ್ದಾರೆ.

ಬಳಿಕ ಮೆರವಣಿಗೆ ಚಾಲನೆಗೊಳ್ಳಲಿದ್ದು, ಸ್ತಬ್ಧಚಿತ್ರಗಳು, ಕಲಾತಂಡಗಳು ಮೆರವಣಿಗೆಯಲ್ಲಿ ಸಾಗಲಿವೆ. ಸಂಜೆ 5.07ರಿಂದ 5.18ರ ವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಗಜಪಡೆಯ ನಾಯಕ ಅಭಿಮನ್ಯು ಹೊರಲಿರುವ 750 ಕೆ.ಜಿ. ಚಿನ್ನದ ಅಂಬಾರಿ ಮೇಲೆ ಇರಿಸಲಾಗುವ ನಾಡದೇವತೆ ಶ್ರೀಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ನೆರವೇರಿಸಲಿದೆ. ಈ ವೇಳೆ 21 ಕುಶಾಲತೋಪುಗಳ ಸದ್ದು ಮೊಳಗಲಿದ್ದು, ವಾದ್ಯಗೋಷ್ಠಿಯಲ್ಲಿ ರಾಷ್ಟ್ರಗೀತೆ ನುಡಿಸಲಾಗುತ್ತದೆ.

ಜಂಬೂಸವಾರಿ ಮೆರವಣಿಗೆ ಬನ್ನಿಮಂಟಪ ತಲುಪಿದ ಬಳಿಕ ಪಂಜಿನ ಕವಾಯತು (ಟಾರ್ಚ್​ಲೈಟ್ ಪರೇಡ್)ಆರಂಭವಾಗಲಿದೆ. ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಗೌರವ ವಂದನೆ ಸ್ವೀಕರಿಸಲಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಪ್ರಲ್ಹಾದ ಜೋಶಿ, ರಾಜೀವ್ ಚಂದ್ರಶೇಖರ್, ಶೋಭಾ ಕರಂದ್ಲಾಜೆ, ಎ.ನಾರಾಯಣಸ್ವಾಮಿ, ಭಗವಂತ ಖೂಬಾ ಆಗಮಿಸಲಿದ್ದಾರೆ. ಪಂಜಿನ ಕವಾಯತು ಮೂಲಕ ಈ ಬಾರಿಯ ದಸರಾಕ್ಕೆ ರಾಷ್ಟ್ರಗೀತೆಯೊಂದಿಗೆ ತೆರೆ ಬೀಳಲಿದೆ.

ರಾಜವಂಶಸ್ಥರಿಂದ ವಿಜಯದಶಮಿ

ಸರ್ಕಾರದಿಂದ ಆಯೋಜಿಸುವ ನಾಡಹಬ್ಬ ಒಂದೆಡೆಯಾದರೆ ತಲೆತಲಾಂತರದಿಂದ ನಡೆದು ಬರುತ್ತಿರುವ ರಾಜವಂಶಸ್ಥರ ಸಾಂಪ್ರಾಯಿಕ ವಿಜಯದಶಮಿಯೂ ಗಮನ ಸೆಳೆಯುತ್ತದೆ. ಆಯುಧ ಪೂಜೆ ದಿನ (ಅ.4) ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಅರಮನೆಯಲ್ಲಿ ಚಂಡಿ ಹೋಮ ನೆರವೇರಿಸಿ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು, ಆಯುಧಗಳಿಗೆ ಪೂಜೆ ಸಲ್ಲಿಸುವರು. ಪಂಚಲೋಹದ ಪಲ್ಲಕ್ಕಿಯಲ್ಲಿ ಆಯುಧಗಳನ್ನು ಇರಿಸಿ ಅರಮನೆ ಆವರಣದ ಕೋಡಿ ಸೋಮೇಶ್ವರ ದೇವಾಲಯಕ್ಕೆ ಆಗಮಿಸಿ ಮೊದಲ ಪೂಜೆ ಸಲ್ಲಿಸುವರು. ನಂತರ ಅರಮನೆಯ ಒಳಭಾಗದ ಕಲ್ಯಾಣ ಮಂಟಪದಲ್ಲಿ ಆಯುಧ ಪೂಜೆ ನೆರವೇರಿಸಲಾಗುವುದು. ಜಂಬೂಸವಾರಿ ದಿನ (ಅ.5)ರಂದು ಬೆಳಗ್ಗೆ ಪೂಜೆ ಬಳಿಕ ರಾಜಮನೆತನದ ವಿಜಯದಶಮಿ ಮೆರವಣಿಗೆ ಹಿನ್ನೆಲೆಯಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪಟ್ಟದ ಕತ್ತಿಯನ್ನು ಹಿಡಿದು ಪೂಜೆ ಸಲ್ಲಿಸುವರು. ಬೆಳ್ಳಿ ರಥದ ಮೂಲಕ ಅರಮನೆಯಿಂದ ಭುವನೇಶ್ವರಿ ದೇಗುಲದವರೆಗೆ ಮೆರವಣಿಗೆ ತೆರಳಿ ಅಲ್ಲಿ ಶಮಿ (ಬನ್ನಿ)ಮರಕ್ಕೆ ಪೂಜೆ ಸಲ್ಲಿಸಿ ಸಿಬ್ಬಂದಿಗೆ ಇನಾಂ ನೀಡುವರು. ಬಳಿಕ ವಿಜಯದ ಸಂಕೇತವಾಗಿ ಪಟ್ಟಣ ಆನೆ, ಪಟ್ಟದ ಕುದುರೆಯೊಂದಿಗೆ ಅರಮನೆಗೆ ಮರಳುವರು.

ವಿಜಯದಶಮಿ ಅಂಗವಾಗಿ ಬೆಳಗ್ಗೆಯಿಂದಲೇ ಧಾರ್ವಿುಕ ವಿಧಿ-ವಿಧಾನಗಳು ನೆರವೇರುವವು. ಬೆಳಗ್ಗೆ 9.30ಕ್ಕೆ ಪಟ್ಟದ ಆನೆ, ಕುದುರೆ, ಹಸುಗಳಿಗೆ ಪೂಜೆ ಸಲ್ಲಿಸಲಾಗುವುದು. ಖಾಸಾ ಆಯುಧಗಳಿಗೆ ಯದುವೀರ ಅವರು ಉತ್ತರ ಪೂಜೆ ನೆರವೇರಿಸುವರು. ನಂತರ ಆನೆಬಾಗಿಲಿಗೆ ಈ ಆಯುಧಗಳು ರವಾನೆಗೊಂಡ ಬಳಿಕ ಬೆಳಿಗ್ಗೆ 10.20ರಿಂದ 10.40ರಲ್ಲಿ ಖಾಸಾ ಆಯುಧಗಳನ್ನು ಬೆಳ್ಳಿ ರಥದಲ್ಲಿ ಭುವನೇಶ್ವರಿ ದೇವಾಲಯಕ್ಕೆ ಒಯ್ಯಲಾಗುವುದು. ವಿಜಯಯಾತ್ರೆ ಮುಗಿದ ತಕ್ಷಣ ಚಾಮುಂಡೇಶ್ವರಿ ಅಮ್ಮನವರನ್ನು ಕನ್ನಡಿ ತೊಟ್ಟಿಯಿಂದ ಚಾಮುಂಡಿ ತೊಟ್ಟಿಗೆ ರವಾನೆ ಮಾಡುವ ಕೈಂಕರ್ಯ ಸಹ ನಡೆಯಲಿದೆ. | ಸುಬ್ರಹ್ಮಣ್ಯ ಅರಮನೆ ಪುರೋಹಿತರು

ದೀಪಾಲಂಕಾರ ಆಕರ್ಷಣೆ: ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಈ ಬಾರಿ 124 ಕಿ.ಮೀ. ಉದ್ದದಷ್ಟು ದೀಪಾಲಂಕಾರ ಮಾಡಲಾಗಿದ್ದು, ಇಡೀ ನಗರ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ನಗರದ 96 ವೃತ್ತಗಳನ್ನು ದೀಪಗಳಿಂದ ಸಿಂಗರಿಸಲಾಗಿದ್ದು, ನೂತನ ಸಂಸತ್ ಭವನದ ಮಾದರಿ, ನಟ ಪುನೀತ್ ರಾಜ್​ಕುಮಾರ್​ಗೆ ವಿಶೇಷ ಗೌರವ, ರಾಷ್ಟ್ರ ಲಾಂಛನ, ರಾಷ್ಟ್ರಧ್ವಜ, ರಾಷ್ಟ್ರ ಪ್ರಾಣಿ, ಮೈಸೂರು ರಾಜರು, ಕೆಂಪುಕೋಟೆ, ಸ್ವಾತಂತ್ರ್ಯ ಹೋರಾಟಗಾರರು, ದಾರ್ಶನಿಕರ ಚಿತ್ರಗಳನ್ನು ದೀಪಾಲಂಕಾರದಲ್ಲಿ ಮೂಡಿಸಲಾಗಿದೆ. ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಮಹಿಷಾಸುರ ಮರ್ದಿನಿಯ 3ಡಿ ವಿಡಿಯೋ ಅಳವಡಿಸಲಾಗಿದೆ.

ಮೇಳೈಸಿದ ಸಂಭ್ರಮ: ಕರೊನಾ ಹಿನ್ನೆಲೆಯಲ್ಲಿ ಈ ಹಿಂದಿನ ಎರಡು ವರ್ಷ ದಸರಾ ಆಚರಣೆ, ಜಂಬೂಸವಾರಿ ಅರಮನೆ ಆವರಣಕ್ಕೆ ಸೀಮಿತಗೊಂಡಿತ್ತು. ಈಗ ಕರೊನಾ ಅಬ್ಬರ ಕಡಿಮೆಯಾಗಿ ಜನಜೀವನ ಸಹಜಸ್ಥಿತಿಗೆ ಮರಳಿರುವುದರಿಂದ ಈ ಬಾರಿ ಅದ್ದೂರಿ ದಸರಾ ಆಚರಿಸಲಾಗುತ್ತಿದ್ದು, ಹಿಂದಿನ ಸಂಪ್ರದಾಯದಂತೆ ಬನ್ನಿಮಂಟಪದವರೆಗೂ ಚಿನ್ನದ ಅಂಬಾರಿ ಹೊತ್ತ ಜಂಬೂಸವಾರಿ ಮೆರವಣಿಗೆ ಸಾಗಲಿದೆ. 35 ಕಲಾತಂಡಗಳು, 30ಕ್ಕೂ ಹೆಚ್ಚು ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಸಾಗಲಿವೆ.

ವಜ್ರಮುಷ್ಟಿ ಕಾಳಗ: ಇದಕ್ಕೂ ಮುನ್ನ ಅರಮನೆ ಆವರಣದಲ್ಲಿ ನಿರ್ವಿುಸುವ ಮಟ್ಟಿಯಲ್ಲಿ ಜಟ್ಟಿಗಳು ಆಕರ್ಷಕ ವಜ್ರಮುಷ್ಟಿ ಕಾಳಗ ನಡೆಯಲಿದೆ. ಕರೊನಾದಿಂದಾಗಿ ಎರಡು ವರ್ಷದಿಂದ ಇದನ್ನು ರದ್ದುಪಡಿಸಲಾಗಿತ್ತು.

ದಸರಾಕ್ಕೆ ವಿಶೇಷ ಬಿಗಿ ಭದ್ರತೆ

ಕರೊನಾ ಬಳಿಕ ಆಯೋಜಿಸಿರುವ ಅದ್ದೂರಿ ದಸರಾಕ್ಕೆ ಈ ಬಾರಿ ವಿಶೇಷ ಭದ್ರತೆ ಕೈಗೊಳ್ಳಲಾಗಿದೆ. ದೇಶಾದ್ಯಂತ ಪಿಎಫ್​ಐ, ಎಸ್​ಡಿಪಿಐ ಮುಖಂಡರು, ಕಾರ್ಯಕರ್ತರ ಬಂಧನದ ಬಳಿಕ ದಸರಾದಲ್ಲಿ ದುಷ್ಕೃತ್ಯ ನಡೆಸಲು ಉದ್ದೇಶಿಸಲಾಗಿತ್ತು ಎನ್ನುವ ಆತಂಕಕಾರಿ ವಿಷಯ ಬಹಿರಂಗಗೊಂಡ ಬಳಿಕ ಹೆಚ್ಚಿನ ನಿಗಾ ವಹಿಸಲಾಗಿದೆ.

ಮೈಸೂರಿನ 1255, ಹೊರ ಜಿಲ್ಲೆಗಳಿಂದ 3580 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ, 650 ಗೃಹ ರಕ್ಷಕರು ಸೇರಿ ಒಟ್ಟು 5,485 ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ಮೊಬೈಲ್ ಕಮಾಂಡ್ ಸೆಂಟರ್ ಬಸ್ ಅನ್ನು ಬಳಕೆ ಮಾಡಲಾಗುತ್ತಿದ್ದು, ಇದರಲ್ಲಿ ಸಿಸಿಟಿವಿ ವ್ಯವಸ್ಥೆ ಇದ್ದು, ಬಾಡಿಫೋರ್ಸ್ ಕ್ಯಾಮರಾಗಳು, ಲಾಂಗ್ ಡಿಸ್ಟನ್ಸ್ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿಗಳನ್ನು ತೆಗೆಯುವ ವ್ಯವಸ್ಥೆ ಇವೆ.

ಅರಮನೆ ಮತ್ತು ಬನ್ನಿ ಮಂಟಪದ ಎಲ್ಲ ಪ್ರವೇಶ ದ್ವಾರಗಳಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ಬಾಡಿಫೋರ್ಸ್ ಕ್ಯಾಮರಾ ವಿತರಿಸಲಾಗುತ್ತದೆ. ಅಲ್ಲಿನ ಸಂಪೂರ್ಣ ದೃಶ್ಯಾವಳಿ ಈ ಕ್ಯಾಮರಾಗಳಲ್ಲಿ ಮತ್ತು ಮೊಬೈಲ್ ಕಮಾಂಡ್ ಸೆಂಟರ್​ನಲ್ಲಿ ರೆಕಾರ್ಡ್ ಆಗುವ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೇ ಡ್ರೋನ್ ಕ್ಯಾಮರಾಗಳಿಂದ ಕಣ್ಗಾವಲು ಮಾಡಲಾಗುವುದು.

ಜಂಬೂಸವಾರಿ ನಡೆಯುವ ಹಿಂದಿನ ಎರಡು ದಿನದಿಂದಲೇ ನಗರದ ಲಾಡ್ಜ್​ಗಳಲ್ಲಿ ದಿಢೀರ್ ತಪಾಸಣೆ ನಡೆಸಿ ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರಣೆ ನಡೆಸಲಾಗುತ್ತದೆ. ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ದಿನದ 24 ಗಂಟೆಯೂ ನುರಿತ ಅಪರಾಧ ವಿಭಾಗದ ಸಿಬ್ಬಂದಿ ಗಸ್ತು ಹೆಚ್ಚಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net