

ಲಂಡನ್/ನವದೆಹಲಿ: ಇಸ್ರೇಲ್ ಮತ್ತು ಇರಾನ್ ನಡುವೆ ಉಲ್ಬಣಗೊಂಡಿರುವ ಸಂಘರ್ಷದಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಪೂರೈಕೆಯಲ್ಲಿ ಅನಿಶ್ಚಿತತೆ ತಲೆದೋರಿದೆ. ಪರಿಣಾಮವಾಗಿ, ಕಚ್ಚಾ ತೈಲದ ಬೆಲೆ ಏರಿಕೆಯ ಹಾದಿಯಲ್ಲಿದೆ. ಶುಕ್ರವಾರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಶೇ.0.99ರಷ್ಟು ಏರಿಕೆಯಾಗಿದ್ದು, ಪ್ರತಿ ಬ್ಯಾರೆಲ್ಗೆ 78.39 ಡಾಲರ್ ತಲುಪಿದೆ. ಇದು ಒಂದು ತಿಂಗಳ ಹಿಂದಿನ ಗರಿಷ್ಠ ಮಟ್ಟವಾಗಿದೆ.
ಇರಾನಿನ ತೈಲ ನಿಕ್ಷೇಪ ಮತ್ತು ಸಂಗ್ರಹಾಗಾರಗಳ ಮೇಲೆ ಇಸ್ರೇಲ್ ವಾಯುದಾಳಿ ನಡೆಸಿತ್ತು. ಇಸ್ರೇಲ್ನ ಈ ದಾಳಿಗೆ ಅಮೆರಿಕದ ಅಧ್ಯಕ್ಷ ಜೊ ಬೈಡೆನ್ ಬೆಂಬಲ ಘೋಷಿಸಿದ ಬೆನ್ನಲ್ಲೇ ಗುರುವಾರ ಬ್ರೆಂಟ್ ಕಚ್ಚಾ ತೈಲದ ಬೆಲೆಯಲ್ಲಿ ಶೇ.5ರಷ್ಟು ಏರಿಕೆಯಾಗಿತ್ತು. ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಕಚ್ಚಾ ತೈಲದ ಬೆಲೆಯಲ್ಲಿ ಒಂದೇ ವಾರದಲ್ಲಿ ಶೇ.9.4ರಷ್ಟು ಏರಿಕೆಯಾಗಿದೆ. 2022ರ ಅಕ್ಟೋಬರ್ನಲ್ಲಿ ಶೇ.11.3ರಷ್ಟು ಬೆಲೆ ಏರಿಕೆಯಾಗಿತ್ತು. ಕಚ್ಚಾ ತೈಲ ಪೂರೈಕೆಯಲ್ಲಿ ಇರಾನ್ ಪ್ರಮುಖ ರಾಷ್ಟ್ರವಾಗಿದ್ದು, ಯುದ್ಧದಲ್ಲಿ ನೇರವಾಗಿ ಭಾಗಿಯಾಗಿದೆ. ಇದರಿಂದ ತೈಲ ಪೂರೈಕೆಯಲ್ಲಿ ಅನಿಶ್ಚಿತತೆ ಉಂಟಾಗಿ, ಬೆಲೆ ಏರಿಕೆಯಾಗುತ್ತಿದೆ ಎಂದು ಮಾರುಕಟ್ಟೆ ತಜ್ಞರು ವಿವರಿಸಿದ್ದಾರೆ.
ಮಧ್ಯಪ್ರಾಚ್ಯ ಬಿಕ್ಕಟ್ಟಿನ ಪ್ರತಿದಿನದ ಬೆಳವಣಿಗೆಯನ್ನು ಕೇಂದ್ರ ಹಣಕಾಸು ಸಚಿವಾಲಯವು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಕಚ್ಚಾತೈಲದ ಬೆಲೆ ಏರಿಕೆ ಬಗ್ಗೆ ಆತಂಕಗೊಂಡಿಲ್ಲ ಎಂದು ಸರ್ಕಾರದ ಮೂಲಗಳು ಹೇಳಿವೆ. ಆದರೆ, ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಘೋಷಣೆಗೂ ಮುನ್ನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್ಗೆ 2ರಿಂದ 3 ರೂಪಾಯಿ ಇಳಿಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿತ್ತು. ಆದರೆ, ಕಚ್ಚಾ ತೈಲದ ಬೆಲೆಯಲ್ಲಿ ಭಾರಿ ಏರಿಕೆ ಆಗಿರುವುದರಿಂದ ಸದ್ಯದ ಪರಿಸ್ಥಿತಿಯಲ್ಲಿ ಇಂಧನ ಬೆಲೆ ಇಳಿಕೆ ಸಾಧ್ಯತೆ ಕಡಿಮೆ ಎಂದಿದ್ದಾರೆ ಮಾರುಕಟ್ಟೆ ತಜ್ಞರು.