ಸಿಆರ್​ಪಿಎಫ್ ಚಾಲಕನಿಗೆ ಸೋಂಕು, ದೆಹಲಿಯ ಪ್ರಧಾನ ಕಚೇರಿ ಬಂದ್​

CRPF NEW
Published on

ನವದೆಹಲಿ: ದಕ್ಷಿಣ ದೆಹಲಿಯ ಲೋಧಿ ಕಾಲನಿಯ ಸಿಜಿಒ ಕಾಂಪ್ಲೆಕ್ಸ್​​ನಲ್ಲಿರುವ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್'ಪಿಎಫ್)ಯ ಚಾಲಕನೊಬ್ಬನಿಗೆ ಕೋವಿಡ್- 19 ಸೋಂಕು ಇರುವುದು ಪತ್ತೆಯಾಗಿದ್ದು, ಈ ಪ್ರಧಾನ ಕಚೇರಿಯನ್ನು ಸ್ಯಾನಿಟೈಸ್ ಮಾಡಲು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.

ಇಲ್ಲಿ ಕಾರ್ಯನಿರ್ವಹಿಸುವವರೆಲ್ಲರಿಗೂ ಮನೆಯಿಂದಲೇ ಕೆಲಸ ಮಾಡಬೇಕೆಂದು ಆದೇಶ ಹೊರಡಿಸಲಾಗುತ್ತದೆ. ಅಗತ್ಯ ಕೆಲಸವಿದ್ದಾಗ ಸಂಪರ್ಕಕ್ಕೆ ಸಿಗಬೇಕೆಂದು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತಿಳಿಸಲಾಗುತ್ತದೆ.
ದೆಹಲಿಯಲ್ಲಿರುವ ಸಿಆರ್​ಪಿಎಫ್'ನ ಒಟ್ಟಾರೆ 150 ಕ್ಕೂ ಹೆಚ್ಚು ಸಿಬ್ಬಂದಿಗೆ ಕೋವಿಡ್-19 ಕಾಯಿಲೆಗೆ ಒಳಗಾಗಿದ್ದು, 31ನೇ ಬಟಾಲಿಯನ್​​ವೊಂದರಲ್ಲಿಯೇ 135 ಮಂದಿ ಸೋಂಕಿಗೆ ಒಳಗಾಗಿದ್ದಾರೆ.

31ನೇ ಬಟಾಲಿಯನ್​​ನ 480 ಸಿಬ್ಬಂದಿಗೆ ಪರೀಕ್ಷೆ ನಡೆಸಲಾಗಿದ್ದು, 22 ಸಿಬ್ಬಂದಿಯ ಫಲಿತಾಂಶ ಬರಬೇಕಿದೆ.
ಪ್ರತ್ಯೇಕ ಪ್ರಕರಣವೊಂದರಲ್ಲಿ 80 ಸಿಬ್ಬಂದಿಯಿರುವ 246ನೇ ಬಟಾಲಿಯನ್​​​ನ ಭಾಗವಾಗಿರುವ ಸಿಆರ್​ಪಿಎಫ್ ಕಂಪನಿಯಲ್ಲಿ ಒಬ್ಬನಲ್ಲಿ ಸೋಂಕು ಕಂಡು ಬಂದಿದ್ದು, ಎಲ್ಲರನ್ನೂ ಕ್ವಾರಂಟೈನ್​​ನಲ್ಲಿಡಲಾಗಿದೆ.

ಕೇಂದ್ರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಆರ್​ಪಿಎಫ್ ಸಿಬ್ಬಂದಿಯನ್ನು ಅವರವರ ಮನೆಗಳಿಗೆ ಕರೆದೊಯ್ಯುತ್ತಿದ್ದ ಚಾಲಕನಲ್ಲಿ ಮೂರು ದಿನಗಳ ಹಿಂದೆ ಕರೊನಾ ಸೋಂಕಿನ ಲಕ್ಷಣಗಳು ಕಂಡುಬಂದದ್ದರಿಂದ ಅವರನ್ನು ಕ್ವಾರಂಟೈನ್​ನಲ್ಲಿಡಲಾಗಿತ್ತು. ಶನಿವಾರ ಸಂಜೆ ಫಲಿತಾಂಶ ಬಂದಿದ್ದು, ಅವರು ಸಿಆರ್​ಪಿಎಫ್ ವಸತಿ ಗೃಹದಲ್ಲಿ ವಾಸಿಸುತ್ತಿದ್ದು, ಅವರ ಸಂಪರ್ಕದಲ್ಲಿದ್ದವರನ್ನೂ ದಿಗ್ಬಂಧನದಲ್ಲಿಡಲಾಗಿದೆ.

ಸಿಆರ್​ಪಿಎಫ್ ಹೊರತುಪಡಿಸಿ ಗಡಿ ಭದ್ರತಾ ಪಡೆಗೂ ಕರೊನಾ ಬಿಸಿ ತಗುಲಿದ್ದು, ದೇಶಾದ್ಯಂತ ಬಿಎಸ್​ಎಫ್​​ನ ಲ್ಲಿ ಅಂದಾಜು 17 ಪ್ರಕರಣಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಳೆಯ ದೆಹಲಿಯ ಜಾಮಾ ಮಸೀದಿ ಮತ್ತು ಚಾಂದಿನಿ ಮಹಲ್​​ಗೆ ನಿಯೋಜನೆಗೊಂಡ 126 ನೇ ಹಾಗೂ 178 ನೇ ಬಟಾಲಿಯನ್​ನ 7 ಸಿಬ್ಬಂದಿಗೆ ಕರೊನಾ ಪಾಜಿಟಿವ್ ಇರುವುದು ಶುಕ್ರವಾರ ಪತ್ತೆಯಾಗಿದೆ. ಇದರೊಂದಿಗೆ ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್- 19 ಗೆ ಬಿಎಸ್​ಎಫ್​​ನ 15 ಜನ ಸಿಬ್ಬಂದಿ ತುತ್ತಾದಂತಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net