

ನವದೆಹಲಿ: ದೆಹಲಿಯಲ್ಲಿ ಸೋಮವಾರದಿಂದ ಲಾಕ್ಡೌನ್ ಅನ್ನು ಸ್ವಲ್ಪ ಸಡಿಲಗೊಳಿಸಲು ನಿರ್ಧರಿಸಿರುವುದಾಗಿ ಸಿಎಂ ಅರವಿಂದ ಕೇಜ್ರೀವಾಲ್ ತಿಳಿಸಿದ್ದಾರೆ.
ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮನೆಗೆಲಸದವರು, ಕೊಳಾಯಿ ಕೆಲಸದವರು, ಟೆಕ್ನೀಷಿಯನ್ಗಳು ಸೇರಿ ಸ್ವ ಉದ್ಯೋಗ ಮಾಡುತ್ತಿರುವವರೆಲ್ಲರೂ ತಮ್ಮ ಕೆಲಸಗಳಿಗೆ ಹೋಗಬಹುದಾಗಿದೆ ಎಂದು ಹೇಳಿದರು.
ದೆಹಲಿಯ ಎಲ್ಲ ಬಡಾವಣೆಗಳಲ್ಲಿರುವ ಅಗತ್ಯ ಮತ್ತು ಅನಗತ್ಯ ವಸ್ತುಗಳನ್ನು ಮಾರಾಟ ಮಾಡುವ ಎಲ್ಲ ಅಂಗಡಿಗಳನ್ನು ಎಂದಿನಂತೆ ತೆರಯಬಹುದಾಗಿದೆ. ಆದರೆ ಇ-ಕಾಮರ್ಸ್ ಕಂಪನಿಗಳು ಕೇವಲ ಅಗತ್ಯ ವಸ್ತುಗಳನ್ನು ಮಾತ್ರ ಡೆಲಿವರಿ ಕೊಡಬಹುದಾಗಿದೆ ಎಂದು ತಿಳಿಸಿದರು.
ದೆಹಲಿಯ ಎಲ್ಲ ಖಾಸಗಿ ಆಸ್ಪತ್ರೆಗಳು ಶೇ.33 ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಬಹುದಾಗಿದೆ ಎಂದು ಹೇಳಿದರು.
ಶಾಲೆ-ಕಾಲೇಜುಗಳು, ಕೋಚಿಂಗ್ ಸಂಸ್ಥೆಗಳು, ಹೋಟೆಲ್ಗಳು ಮತ್ತು ರೆಸ್ಟೋರೆಂಟ್ಗಳು ಸಂಪೂರ್ಣವಾಗಿ ಮುಚ್ಚಿರಲಿವೆ. ಕ್ಷೌರದ ಅಂಗಡಿಗಳು, ಸ್ಪಾಗಳ ಬಾಗಿಲನ್ನು ಇನ್ನೆರಡು ವಾರ ತೆಗೆಯುವಂತಿಲ್ಲ ಎಂದು ತಿಳಿಸಿದ್ದಾರೆ.