

ಗೋವಿಂದರಾಜು ಚಿನ್ನಕುರ್ಚಿ, ಬೆಂಗಳೂರು
ರಾಜ್ಯದಲ್ಲಿ ಅತಿವೃಷ್ಟಿ, ಅನಾವೃಷ್ಟಿಯಿಂದ ಉಂಟಾಗುವ ಬೆಳೆ ಹಾನಿ ಪರಿಹಾರ ವಿತರಿಸಲು ಡ್ರೋನ್ ಸರ್ವೇ ನಡೆಸಿ ವೈಜ್ಞಾನಿಕ ದತ್ತಾಂಶದ ಮೂಲಕ ನಷ್ಟ ಭರಿಸಲು ಕಂದಾಯ ಇಲಾಖೆ ಮುಂದಾಗಿದೆ.
ರೈತರಿಗೆ ನೆರವು ಮತ್ತು ಸರ್ಕಾರಿ ಪ್ರಯೋಜನಗಳನ್ನು ಒದಗಿಸಲು ಅಭಿವೃದ್ಧಿಪಡಿಸಿರುವ ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ (ಪ್ರೂಟ್) ಅಪ್ಲಿಕೇಶನ್‌ನಲ್ಲಿ ಬೆಳೆ ನಷ್ಟದ ವಿವರವನ್ನು ಅಪ್‌ಲೋಡ್ ಬೇಕಾಗಿದೆ. ಇದನ್ನು ನಮೂದಿಸಲು ಗ್ರಾಮ ಲೆಕ್ಕಿಗರು ಕೃಷಿ ಜಮೀನಿಗೆ ಭೇಟಿ ನೀಡದೆ ಅಥವಾ ಸುಳ್ಳು ಬೆಳೆ ವಿವರಗಳನ್ನು ಅಪ್‌ಲೋಡ್ ಮಾಡುತ್ತಿದ್ದರು. ಇದರಿಂದ ಸರ್ಕಾರದ ಹಣ ಸೋರಿಕೆ ಆಗುತ್ತಿತ್ತು.
ಇದನ್ನು ತಪ್ಪಿಸುವ ಸಲುವಾಗಿ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಅಧಿಕಾರಿಗಳ ಸಭೆ ನಡೆಸಿ ವೈಜ್ಞಾನಿಕವಾಗಿ ಮತ್ತು ಮಾನವ ಹಸ್ತಕ್ಷೇಪ ಇಲ್ಲದಂತೆ ಸರ್ವೇ ನಡೆಸಲು ನಿರ್ಧರಿಸಿದ್ದಾರೆ. ಅದರಂತೆ ಡ್ರೋನ್ ಸರ್ವೇ ತಂತ್ರಜ್ಞಾನ ಬಳಸಿಕೊಳ್ಳಲು ಯೋಜನೆ ರೂಪಿಸಿದ್ದು, ರಾಜ್ಯದ ಬೇರೆ ಬೇರೆ ಪ್ರದೇಶಗಳಲ್ಲಿ ಪ್ರಯೋಗಿಕವಾಗಿ ಸರ್ವೇ ನಡೆಸಿ ಸಾಧಕ-ಬಾಧಕವನ್ನು ಅಧ್ಯಯನ ನಡೆಸುವಂತೆ ಸೂಚನೆ ನೀಡಿದ್ದಾರೆ. ಇದರ ಜವಾಬ್ದಾರಿಯನ್ನು ಕಂದಾಯ ಇಲಾಖೆಯ ಪ್ರದಾನ ಕಾರ್ಯದರ್ಶಿ (ವಿಪತ್ತು ನಿರ್ವಹಣೆ, ಭೂಮಿ) ಮನೀಶ್ ಮೌದ್ಗಿಲ್ ಅವರಿಗೆ ವಹಿಸಲಾಗಿದೆ.
ಡ್ರೋನ್ ಸ್‌ಟಾವೇರ್‌ಗೆ ಜಮೀನಿನ ಗ್ರಾಮ, ಸರ್ವೇ ನಂಬರ್, ವಿಸ್ತೀರ್ಣ ಸೇರಿದಂತೆ ಅಗತ್ಯ ಇರುವ ದತ್ತಾಂಶವನ್ನು ಅಪ್‌ಲೋಡ್ ಮಾಡಲಾಗಿರುತ್ತದೆ. ಹೈ-ರೆಸಲ್ಯೂಶನ್ ಸಂವೇದಕಗಳನ್ನು ಹೊಂದಿರುವ ಡ್ರೋನ್‌ಗಳು ಕೃಷಿ ಜಮೀನಿನ ಮೇಲೆ ಹಾರಾಟ ನಡೆಸಿ ವೈಮಾನಿಕ ಚಿತ್ರಣ ಮತ್ತು ಡೇಟಾವನ್ನು ಸಂಗ್ರಹಿಸುತ್ತವೆ. ನಿಗದಿತ ಸರ್ವೇ ನಂಬರ್‌ನಲ್ಲಿ ಎಷ್ಟು ವಿಸ್ತೀರ್ಣದಲ್ಲಿ ಯಾವ ಬೆಳೆ ಬೆಳೆಯಲಾಗಿದೆ. ಅದರಲ್ಲಿ ಎಷ್ಟು ನಷ್ಟವಾಗಿದೆ ಎಂಬುದರ ಮಾಹಿತಿಯನ್ನು ಡೇಟಾ ಬೇಸ್‌ಗೆ ರವಾನೆ ಮಾಡಲಿದೆ. ಪ್ರವಾಹ, ನೈಸರ್ಗಿಕ ವಿಕೋಪ ಸಮಯದಲ್ಲಿ ಬೆಳೆ ಹಾನಿಯನ್ನು ನಿರ್ಣಯಿಸಲು ಮತ್ತು ಪ್ರಮಾಣೀಕರಿಸಲು ಸಹಾಯ ಮಾಡುತ್ತದೆ.
ಡ್ರೋನ್ ಸರ್ವೇಯಲ್ಲಿ ಮಾನವ ಹಸ್ತಕ್ಷೇಪ ಹೆಚ್ಚಾಗಿ ಇರುವುದಿಲ್ಲ. ನಿಖರವಾದ ಮತ್ತು ಪಾರದರ್ಶಕ ಮಾಹಿತಿ ಸಿಗಲಿದೆ. ಇದರ ಮೂಲಕ ಅತೀ ವೇಗವಾಗಿ ಬೆಳೆ ನಷ್ಟದ ಬಗ್ಗೆ ಲೆಕ್ಕಾಚಾರ ಮಾಡಿ ನಷ್ಟ ಪರಿಹಾರ ನೀಡಲು ಸಹಾಯವಾಗಲಿದೆ. ಈ ಮೊದಲು ್ರ್ರೂಟ್ ಅಪ್ಲಿಕೇಷನ್‌ನಿಂದ ಮಾಹಿತಿ ಪಡೆದು ಅದನ್ನು ವಿಶ್ಲೇಷಣೆ ಮಾಡಿ ಆನಂತರ ಪರಿಹಾರ ಬಿಡುಗಡೆ ಮಾಡಬೇಕಿತ್ತು. ಇದರಿಂದ ಸಾಕಷ್ಟು ವಿಳಂಬ ಆಗುತ್ತಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶೇ.20 ಹೆಚ್ಚಿನ ಪರಿಹಾರ ಕ್ಲೇಮ್ :
ರಾಜ್ಯ ಕೆಲ ಜಿಲ್ಲೆಗಳಲ್ಲಿ ಪ್ರವಾಹ ಉಂಟಾದಾಗ ಬೆಳೆ ನಷ್ಟದ ಬಗ್ಗೆ ಸರ್ವೇ ನಡೆಸುತ್ತಿದ್ದ ಅಧಿಕಾರಿ, ಸಿಬ್ಬಂದಿ ಆ್ಯಪ್‌ನಲ್ಲಿ ಸುಳ್ಳು ಮಾಹಿತಿ ಕೊಟ್ಟು ಶೇ.20 ಹೆಚ್ಚಿನ ಪರಿಹಾರ ವಿತರಿಸುವ ಸನ್ನಿವೇಶ ಸೃಷ್ಟಿ ಮಾಡಿರುವ ಸಾಕಷ್ಟು ಪ್ರಕರಣಗಳು ಪತ್ತೆಯಾಗಿವೆ. ಕೆಲವೊಂದು ಸಮಯದಲ್ಲಿ ಅರ್ಹ ರೈತರಿಗೆ ಪರಿಹಾರ ಸಿಗದೆ ಇರುವ ಉದಾಹರಣೆಗಳೂ ಸಹ ಇವೆ. ಆದರಿಂದ ವೈಜ್ಞಾನಿಕವಾಗಿ ಮತ್ತು ಮಾನವ ಹಸ್ತಕ್ಷೇಪ ಇಲ್ಲದಂತೆ ಡ್ರೋನ್ ಸಮೀಕ್ಷೆ ನಡೆಸಲು ನಿರ್ಧಾರ ಮಾಡಲಾಗಿದೆ.
ಬೆಳೆ ಸಮೀಕ್ಷೆಯಲ್ಲಿ ಲೋಪಗಳು
-ಕೃಷಿ ಜಮೀನಿಗೆ ಸ್ಥಳೀಯ ಅಧಿಕಾರಿ, ಸಿಬ್ಬಂದಿ ಭೇಟಿ ನೀಡದೆ ಸರ್ವೇ
-2 ಎಕರೆ ಪೈಕಿ 1 ಎಕರೆಯಲ್ಲಿ ಮಾತ್ರ ನಷ್ಟವಾಗಿದ್ದರೂ ಒಟ್ಟಾರೆ ನಷ್ಟವೆಂದು ನಮೂದು
-ಸ್ಥಳಕ್ಕೆ ಭೇಟಿ ನೀಡದ ಕಾರಣ ನೈಜ ಸಂತ್ರಸ್ತರಿಗೆ ಪರಿಹಾರ ಸಿಗದೆ ಇರುವುದು
-್ರೂಟ್ ಆ್ಯಪ್‌ಯಿಂದ ಮಾಹಿತಿ ಪಡೆದು ಪರಿಹಾರ ನೀಡುವಲ್ಲಿ ವಿಳಂಬ