

ರಾಯಚೂರು: ದನ ಮೇಯಿಸಲು ಹೋಗಿದ್ದ ಬಾಲಕನೊಬ್ಬ ಮೊಸಳೆ ಬಾಯಿಗೆ ಬಲಿಯಾದ ಕರುಣಾಜನಕ ಪ್ರಕರಣವೊಂದು ವರದಿಯಾಗಿದೆ. ರಾಯಚೂರು ತಾಲೂಕಿನ ಡೊಂಗರಾಂಪುರ ಬಳಿ ಕೃಷ್ಣ ನದಿ ತೀರದಲ್ಲಿ ಈ ಪ್ರಕರಣ ನಡೆದಿದ್ದು, ಬಾಲಕ ಮಲ್ಲಿಕಾರ್ಜುನ(12) ಪ್ರಾಣ ಕಳೆದುಕೊಂಡಿದ್ದಾನೆ.
ದನ ಮೇಯಿಸಲು ಸ್ನೇಹಿತರೊಂದಿಗೆ ಹೋಗಿದ್ದ ಮಲ್ಲಿಕಾರ್ಜುನ ನೀರು ಕುಡಿಯುವ ಸಲುವಾಗಿ ನದಿ ತೀರಕ್ಕೆ ಹೋಗಿದ್ದಾನೆ. ನದಿಯಲ್ಲಿನ ನೀರು ಕುಡಿಯುತ್ತಿದ್ದಾಗ ಏಕಾಏಕಿ ದಾಳಿ ಮಾಡಿದ ಮೊಸಳೆ ಬಾಲಕನನ್ನು ಸೆಳೆದು ನೀರಿನಲ್ಲಿ ಕಾಣೆಯಾಗಿದೆ. ಈ ಸಂದರ್ಭದಲ್ಲಿ ದೂರದಲ್ಲಿ ನೀರು ಕುಡಿಯುತ್ತಿದ್ದ ಐವರು ಬಾಲಕರು ಪಾರಾಗಿದ್ದಾರೆ.
ಮೊಸಳೆ ಬಾಯಿಗೆ ಬಲಿಯಾದ ಬಾಲಕನನ್ನು ಎರಡು ತೆಪ್ಪಗಳನ್ನು ಬಳಸಿ ಗ್ರಾಮಸ್ಥರು ಹುಡುಕಾಟ ನಡೆಸಿದ್ದಾರೆ. ಎಷ್ಟು ಹೊತ್ತಾದರೂ ಬಾಲಕನ ಪತ್ತೆಯಾಗಿರಲಿಲ್ಲ. ಬಳಿಕ ಕತ್ತಲಾದ ಕಾರಣಕ್ಕೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಸ್ಥಳಕ್ಕೆ ಯಾಪಲದಿನ್ನಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.