

ಬೆಂಗಳೂರು: ನಿವೃತ್ತಿ ಬಳಿಕ ಸಾಮಾನ್ಯವಾಗಿ ಯಾರೂ ಕಚೇರಿಯತ್ತ ಸುಳಿಯುವುದಿಲ್ಲ. ಆದರೆ ಇಲ್ಲೊಬ್ಬ ವ್ಯಕ್ತಿ ನಿವೃತ್ತಿ ಬಳಿಕ ಮಾಡಬಾರದ್ದು ಮಾಡಲು ಹೋಗಿ ಸಿಕ್ಕಿಬಿದ್ದಿದ್ದು, ಅವರೊಂದಿಗೆ ಶಾಮೀಲಾಗಿದ್ದ ಅಧಿಕಾರಿ ಕೂಡ ಸಿಕ್ಕಿಹಾಕಿಕೊಂಡಿದ್ದಾರೆ. ಈ ಮೂಲಕ ನಿವೃತ್ತ ಅಧಿಕಾರಿ ತನ್ನ ಸೇವಾವಧಿಯಲ್ಲೂ ಇದೇ ಕೆಲಸ ಮಾಡುತ್ತಿದ್ದರಾ ಎಂಬ ಪ್ರಶ್ನೆಗಳೂ ಎದ್ದಿವೆ.
ತಾತ್ಕಾಲಿಕವಾಗಿ ಕಾರ್ಮಿಕರನ್ನು ನೇಮಿಸಿಕೊಳ್ಳಲು ಪರವಾನಗಿ ನೀಡಲು ಲಂಚ ಕೇಳಿದ ಆರೋಪದಲ್ಲಿ ಒಬ್ಬ ನಿವೃತ್ತ ಅಧಿಕಾರಿ ಸೇರಿ ಇಬ್ಬರು ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಅಧಿಕಾರಿಗಳ ಕೈಗೆ ಸಿಲುಕಿ ಹಾಕಿಕೊಂಡಿದ್ದಾರೆ. ನಿವೃತ್ತ ಲೇಬರ್ ಇನ್ಸ್ಪೆಕ್ಟರ್ ಶಿವಕುಮಾರ್, ಅಸಿಸ್ಟೆಂಟ್ ಲೇಬರ್ ಕಮಿಷನರ್ ಸಂತೋಷ್ ಇಪ್ಪರಗಿ ಬಂಧಿತರು. ಖಾಸಗಿ ಕಂಪನಿಯೊಂದರ ಮುಖ್ಯಸ್ಥರು ನೀಡಿದ ದೂರಿನ ಮೇರೆಗೆ ಎಸಿಬಿ ಅಧಿಕಾರಿಗಳು ಈ ಸಂಬಂಧ ಕಾರ್ಯಾಚರಣೆ ನಡೆಸಿ ಭ್ರಷ್ಟರನ್ನು ಬಲೆಗೆ ಕೆಡವಿಕೊಂಡಿದ್ದಾರೆ.
ಕೋಲಾರ ಜಿಲ್ಲೆ ಮಾಲೂರು ನಿವಾಸಿಯೊಬ್ಬರು ಮಾಲೂರು ಖಾಸಗಿ ಸಂಸ್ಥೆಯ ಶಾಖೆಯಲ್ಲಿ ಡೆಪ್ಯುಟಿ ಜನರಲ್ ಮ್ಯಾನೇಜರ್ ಆಗಿದ್ದು, ತಮ್ಮ ಸಂಸ್ಥೆಗೆ ತಾತ್ಕಾಲಿಕವಾಗಿ ದಿನಗೂಲಿ ಕಾರ್ಮಿಕರನ್ನು ನೇಮಿಸಿಕೊಳ್ಳುವ ಸಲುವಾಗಿ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಕಾರ್ಮಿಕರ ಭವನದಲ್ಲಿನ ಅಸಿಸ್ಟೆಂಟ್ ಲೇಬರ್ ಕಮಿಷನರ್ ಅವರಿಗೆ 2017ರಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಖಾಸಗಿ ಸಂಸ್ಥೆಯ ಕೇಂದ್ರ ಕಚೇರಿ ಪೂನಾದಲ್ಲಿದ್ದು, ಪರವಾನಗಿ ನೀಡಲು 2 ಲಕ್ಷ ರೂ. ಲಂಚ ನೀಡುವಂತೆ ಸಹಾಯಕ ಕಾರ್ಮಿಕ ಆಯುಕ್ತ ಸಂತೋಷ್ ಇಪ್ಪರಗಿ ಬೇಡಿಕೆ ಇಟ್ಟಿದ್ದರು. ಚೌಕಾಸಿ ನಡೆದು ಅಂತಿಮವಾಗಿ 1.8 ಲಕ್ಷ ರೂ. ಲಂಚ ನಿಗದಿಯಾಗಿದ್ದು, ಸಂತೋಷ್ ಪರವಾಗಿ ಶಿವಕುಮಾರ್ ಲಂಚ ಪಡೆಯಲು ಮುಂದಾಗಿದ್ದರು. ಈ ಬಗ್ಗೆ ಡಿ. 1ರಂದು ದೂರು ಬಂದ ಮೇರೆಗೆ ಎಸಿಬಿ ಅಧಿಕಾರಿಗಳು ಡಿ.2ರಂದು ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿದಿದೆ.