

ನವದೆಹಲಿ: ನಿರ್ಗತಿಕ ತಾಯಿ ಮಗಳ ಮೇಲೆ ಒಂದೇ ಸಮಯದಲ್ಲಿ ಅತ್ಯಾಚಾರವೆಸಗಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಇದನ್ನು ಸ್ಥಳೀಯರೊಬ್ಬರು ನೋಡಿದ್ದು, ರಕ್ಷಣೆಗೆ ಮುಂದಾಗುವ ಬದಲು ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ.
ವಾಯುವ್ಯ ದೆಹಲಿಯಲ್ಲಿ ಇಂತದ್ದೊಂದು ಘಟನೆ ವರದಿಯಾಗಿದೆ. ಆ ಕುಟುಂಬದ ಯಜಮಾನ ಲಾಕ್ಡೌನ್ ವೇಳೆಯಲ್ಲಿ ಊರಿಗೆ ತೆರಳಿ ಅಲ್ಲಿಯೇ ವಾಸವಾರಂಭಿಸಿದ್ದಾನೆ. ನಗರದಲ್ಲೇ ಉಳಿದ 35 ವರ್ಷದ ಮಹಿಳೆ ಮತ್ತು ಆಕೆಯ 18 ವರ್ಷದ ಮಗಳು ಇಲ್ಲಿ ಚಿಂದಿ ಹಾಯ್ದುಕೊಂಡು ಜೀವನ ನಡೆಸುತ್ತಿದ್ದರು. ಡಿಸೆಂಬರ್ 29ರ ರಾತ್ರಿ ಈ ಅಮ್ಮ ಮಗಳು ರಸ್ತೆ ಬದಿಯಲ್ಲಿದ್ದಾಗ ಅವರ ಮೇಲೆ ಇಬ್ಬರು ಯುವಕರು ದಾಳಿ ನಡೆಸಿದ್ದಾರೆ.
ಕುಡಿದ ಮತ್ತಿನಲ್ಲಿ ತೇಲಾಡುತ್ತಿದ್ದ ಯುವಕರು ಅಮ್ಮ ಮತ್ತು ಮಗಳ ಮೇಲೆ ಏಕಕಾಲದಲ್ಲಿ ರೇಪ್ ಮಾಡಿದ್ದಾರೆ. ಬಾಯಿ ಮುಚ್ಚಿಕೊಳ್ಳದಿದ್ದರೆ ಕಲ್ಲು ಎತ್ತಾಕಿ ಕೊಲೆ ಮಾಡುವುದಾಗಿಯೂ ಹೆದರಿಸಿದ್ದಾರೆ. ಈ ವೇಳೆ ರಸ್ತೆಯಲ್ಲಿ ವಾಹನಗಳು ಓಡಾಡಿವೆಯಾದರೂ ಯಾರೊಬ್ಬರೂ ಅಮ್ಮ ಮಗಳ ಸಹಾಯಕ್ಕೆ ಮುಂದೆ ಬಂದಿಲ್ಲ. ಅಲ್ಲೇ ಹತ್ತಿರದಲ್ಲಿದ್ದ ವ್ಯಕ್ತಿಯೊಬ್ಬ ಈ ದೃಶ್ಯವನ್ನು ವಿಡಿಯೋ ಮಾಡಿಕೊಂಡಿದ್ದಾನೆ. ನಂತರ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ವೈರಲ್ ಮಾಡಿದ್ದಾನೆ.
ಈ ವಿಚಾರವಾಗಿ ಅಮ್ಮ ಮಗಳು ಪೊಲೀಸ್ ಠಾಣೆಯ ಮೆಟ್ಟಿಲನ್ನೇರಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋವನ್ನು ನೋಡಿ ಪೊಲೀಸರೇ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿಡಿಯೋದಲ್ಲಿದ್ದ ಆರೋಪಿಗಳನ್ನು ಗುರುತಿಸಿ ಅವರನ್ನು ಭಾನುವಾರದಂದು ಬಂಧಿಸಲಾಗಿದೆ. ಆ ತಾಯಿ ಮಗಳನ್ನು ಪತ್ತೆ ಹಚ್ಚಿ ಅವರ ಹೇಳಿಕೆಯನ್ನೂ ತೆಗೆದುಕೊಳ್ಳಲಾಗಿದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಆ ವಿಡಿಯೋವನ್ನು ಹರಿಬಿಟ್ಟ ವ್ಯಕ್ತಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. (ಏಜೆನ್ಸೀಸ್)