

ತೀರ್ಥಹಳ್ಳಿ: ಗಾಂಧಿವಾದ, ಸಮಾಜವಾದ ಶಾಶ್ವತವಾಗಿದ್ದು, ಕೋಮುವಾದ ಸಿದ್ಧಾಂತ ಮುಚ್ಚಿರುವ ಅಧ್ಯಾಯ. ಕೋಮುವಾದದಲ್ಲಿ ಹೊಸ ಚಿಂತನೆ ಮತ್ತು ಆದರ್ಶಗಳಿಗೆ ಬೆಲೆ ಇರುವುದಿಲ್ಲ ಎಂದು ಸಾಹಿತಿ ನಟರಾಜ್ ಹುಳಿಯಾರ್ ಅಭಿಪ್ರಾಯಪಟ್ಟರು.
ಪಟ್ಟಣದ ಬಂಟರ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಲೇಖಕ ಡಾ. ಜೆ.ಕೆ.ರಮೇಶ್ ಬರೆದಿರುವ ಗಾಳಿ ಬೆಳಕಿನ ಪಯಣಿಗರು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ಸಮಾಜವಾದ ಜನರ ನಡುವೆ ಮುಕ್ತವಾಗಿ ಸೃಷ್ಟಿಯಾಗಿದೆ. ಹೊಸ ತತ್ವಗಳಿಗೆ ತೆರೆದು ವಿಕಸನದ ಹಾದಿಯಲ್ಲಿದೆ ಎಂದು ತಿಳಿಸಿದರು.
ಲೋಹಿಯಾ, ಶಾಂತವೇರಿ ಗೋಪಾಲ ಗೌಡ ಅವರು ಸಮಾಜದಲ್ಲಿ ದೊಡ್ಡ ಕನಸುಗಳನ್ನು ಬಿತ್ತಿದ್ದಾರೆ. ಸಮಾಜದಲ್ಲಿನ ಅಸಮಾನತೆ ನಿವಾರಣೆಗಾಗಿ, ವಿಕೇಂದ್ರೀಕರಣ ವ್ಯವಸ್ಥೆಗಾಗಿ ಪ್ರತಿಪಾದಿಸಿ ಹೋರಾಡಿದ್ದಾರೆ ಎಂದರು.
ಕವಯಿತ್ರಿ ಸವಿತಾ ನಾಗಭೂಷಣ್ ಮಾತನಾಡಿ, ಸಮಾಜವಾದ ಪ್ರತಿಪಾದಕರ ಪುಸ್ತಕ ಹೊರತಂದಿರುವುದು ಒಳ್ಳೆಯ ವಿಚಾರ. ನಮ್ಮ ಮನೆಗೆ ಬರುತ್ತಿದ್ದ ಸಮಾಜವಾದಿಗಳ ಕಥೆ ಕೇಳಿದಾಗ ರೋಮಾಂಚನವಾಗುತ್ತಿತ್ತು. ಡಿ.ಎಸ್.ನಾಗಭೂಷಣ್ ಸಂಪಾದಿಸಿದ ನಮ್ಮ ಸಮಾಜವಾದಿಗಳು ಪುಸ್ತಕದಲ್ಲಿ ಅನೇಕರ ಪರಿಚಯ ಮಾಡಲಾಗಿತ್ತು. ಇದೀಗ ಗಾಳಿ ಬೆಳಕಿನ ಪಯಣಿಗರು ಕೃತಿಯಲ್ಲಿ ಮತ್ತಷ್ಟು ಜನರ ಪರಿಚಯವಿದೆ ಇದೆ ಎಂದು ಹೇಳಿದರು.
ಲೇಖಕ ಜೆ.ಕೆ.ರಮೇಶ್, ಕಸಾಪ ತಾಲೂಕು ಅಧ್ಯಕ್ಷ ಟಿ.ಕೆ.ರಮೇಶ್ ಶೆಟ್ಟಿ, ಸುವ್ವಿ ಪಬ್ಲಿಕೇಷನ್ಸ್ ಪ್ರಕಾಶಕ ಸುನಿಲ್‌ಕುಮಾರ್, ಸಾಹಿತ್ಯಾಸಕ್ತರ ಬಳಗದ ಕಡಿದಾಳ್ ದಯಾನಂದ, ಬಿ.ಗಣಪತಿ ಉತ್ತುಂಗ ಇದ್ದರು.