ಕುಶಲ ಕಲೆ ಮಹಿಳೆಯರ ಕಲಾವಂತಿಕೆಗೆ ಕೈಗನ್ನಡಿ

kushala kale
ಧಾನ್ಯದಲ್ಲಿ ಕಲೆ ಅರಳಿಸುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಸಾಗರ ತಾಲೂಕಿನ ಹಂಸಗಾರಿನ ಪದ್ಮಶ್ರೀ ಅವರ ಕಲಾಕೃತಿ.
Published on

ಸಾಗರ: ಬಹುದಿನಗಳಿಂದಲೂ ಕುಸುರಿ ಕಲೆಯನ್ನು ಶ್ರೀಮಂತಗೊಳಿಸಲು ಮಹಿಳೆಯರು ಕೊಡುಗೆ ನೀಡುತ್ತಿದ್ದಾರೆ. ಈ ಕಲೆಗಳು ಅವರ ಕ್ರಿಯಾಶೀಲತೆಗೆ ಸಾಕ್ಷಿ ಎಂದು ಲಯನ್ಸ್ ಕ್ಲಬ್ನ ಅಶ್ವಿನಿ ಕುಮಾರ್ ಹೇಳಿದರು.

ಸಾಗರದ ಲಯನ್ಸ್ ಮಂದಿರದಲ್ಲಿ ಲಯನ್ಸ್ ಕ್ಲಬ್ ಮತ್ತು ಜೈ ಗುರುದೇವ ಯೋಗ ಕೇಂದ್ರದಿಂದ ಶನಿವಾರ ಏರ್ಪಡಿಸಿದ್ದ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಗರದ ಲಯನ್ಸ್ ಸಂಸ್ಥೆ ಆರಂಭವಾಗಿ 50 ವರ್ಷಗಳಾಗಿವೆ. ಪ್ರಭಾವತಿ ಅವರು ಸಂಸ್ಥೆಯ ಮೊದಲ ಮಹಿಳಾ ಅಧ್ಯಕ್ಷರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ವರ್ಷ ಅವರು ಅತಿಹೆಚ್ಚಿನ ಕಾರ್ಯಕ್ರಮ ನಡೆಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದರು.
ಲಯನ್ಸ್ ಸಂಸ್ಥೆ ಅಧ್ಯಕ್ಷೆ ಪ್ರಭಾವತಿ ಶ್ರೀಧರ್ ಮಾತನಾಡಿ, ಮಹಿಳೆಯರನ್ನೇ ಗಮನದಲ್ಲಿಟ್ಟುಕೊಂಡು ಆರತಿ ತಟ್ಟೆ, ಗೆಜ್ಜೆವಸ್ತ್ರ ಮತ್ತು ತರಕಾರಿ ಬೀಜ, ಧಾನ್ಯಗಳಿಂದ ತಯಾರಿಸಿದ ಕಲಾಕೃತಿಗಳನ್ನು ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಕಲಾ ಕೌಶಲಗಳನ್ನು ಪ್ರೋತ್ಸಾಹಿಸುವುದೂ ನಮ್ಮ ಸಂಸ್ಥೆಯ ಉದ್ದೇಶಗಳಲ್ಲೊಂದು. ಸಾಂಪ್ರದಾಯಿಕ, ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಕುಶಲ ಕಲೆಗಳ ಬಳಕೆ ಸಾಮಾನ್ಯ. ನಮ್ಮ ಪರಂಪರೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂದರು.
ಸ್ಪರ್ಧೆಯ ತೀರ್ಪುಗಾರ ಪತ್ರಕರ್ತ ದೀಪಕ್ ಸಾಗರ್ ಮಾತನಾಡಿ, ಲಯನ್ಸ್ ಸಂಸ್ಥೆ ತನ್ನದೇ ಆದ ಒಂದು ಚೌಕಟ್ಟಿನಲ್ಲಿ ಮುನ್ನಡೆದಿತ್ತು. ಹೊಸಬರು ಬಂದ ಮೇಲೆ ಆಲೋಚನಾ ಕ್ರಮ ಬದಲಾಗಿದೆ. ಲಯನ್ಸ್ ಇನ್ನಷ್ಟು ಜನಮುಖಿಯಾಗಿ ತೊಡಗಿಕೊಂಡಿದೆ. ಕರಕುಶಲ ವಸ್ತು ತಯಾರಿಕೆಯಲ್ಲಿ ರೈತಾಪಿ ಕುಟುಂಬದವರು ಮೊದಲ ಸಾಲಿನಲ್ಲಿದ್ದಾರೆ ಎಂದು ತಿಳಿಸಿದರು.
ಜೈ ಗುರುದೇವ ಯೋಗ ಕೇಂದ್ರದ ಸಂಚಾಲಕ ಜಿ.ಕೆ.ಕೃಷ್ಣಮೂರ್ತಿ, ತೀರ್ಪುಗಾರರಾದ ಪತ್ರಕರ್ತ ಗಣಪತಿ ಶಿರಳಗಿ, ನಿರ್ಮಲಾ ಕೃಷ್ಣಮೂರ್ತಿ, ಲಯನ್ಸ್ ಸಂಸ್ಥೆಯ ಇ.ಡಿ.ಶ್ರೀಧರ್ ಈಳಿ, ಪ್ರವೀಣ ರಾಯ್ಕರ್, ನಿರ್ಮಲಾ, ಸವಿತಾ ಮಹಾಬಲೇಶ್, ಡಾ. ಟಿ.ಪ್ರಸನ್ನ, ತಿಮ್ಮಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net